ನಿಸ್ವಾರ್ಥ ಸೇವೆಗೆ ಸಂದ ಗಾಂಧಿ ಪ್ರಶಸ್ತಿ

Update: 2019-10-05 18:36 GMT

ಸ್ವಂತ ಬದುಕಿನಲ್ಲೂ ಸೇವಾಕ್ಷೇತ್ರದ ಕಾಯಕದಲ್ಲೂ ಗಾಂಧೀಜಿಯವರ ತತ್ವಾದರ್ಶಗಳನ್ನು ಅಳವಡಿಸಿಕೊಂಡಿರುವ ಜಯದೇವ ಪ್ರಸಿದ್ಧಿ, ಕೀರ್ತಿಗಳನ್ನು ಬಯಸದ ಸರಳ ಜೀವಿ, ಪ್ರಾಮಾಣಿಕ ಜೀವಿ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪುರಸ್ಕಾರಗಳಿಗೆ ಭಾಜನರಾಗಿರುವ ಜಯದೇವ ಅವರಿಗೆ ಇವೆಲ್ಲದರ ಶಿಖರಪ್ರಾಯವಾಗಿ ಈಗ ‘ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ’ ಸಂದಿದೆ. ನಿಸ್ವಾರ್ಥ ಸೇವಕನೊಬ್ಬನಿಗೆ ನೀಡಿರುವ ಈ ಪ್ರಶಸ್ತಿಯಿಂದ ಗಾಂಧೀಜಿಯವರ ಗ್ರಾಮಸ್ವರಾಜ್ಯದ ಆದರ್ಶಗಳನ್ನು, ಮೌಲ್ಯಗಳನ್ನು ಗೌರವಿಸಿದಂತಾಗಿದೆ.


ಸ್ವಾತಂತ್ರ್ಯ ತಳಮಟ್ಟದಿಂದ ಶುರುವಾಗಬೇಕು. ಪ್ರತಿಗ್ರಾಮವೂ ಗಣರಾಜ್ಯವಾಗಬೇಕು ಅಥವಾ ಸಂಪೂರ್ಣ ಅಧಿಕಾರವುಳ್ಳ ಪಂಚಾಯಿತಿಯಾಗಬೇಕು. ಪ್ರತಿಯೊಂದು ಗ್ರಾಮವೂ ಸ್ವಾವಲಂಬಿಯಾಗಬೇಕು-ಇದು ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆ. ಇದನ್ನು ಸಾಕಾರಗೊಳಿಸುವುದರಲ್ಲಿ ಗ್ರಾಮೀಣ ಶಿಕ್ಷಣದ ಪಾತ್ರ ಮಹತ್ವದ್ದು. ಈ ಮಹತ್ವವನ್ನರಿತು ಬಾಪೂ ಅವರ ಗ್ರಾಮಸ್ವರಾಜ್ಯವನ್ನು ನನಸಾಗಿಸುವ ನಿಟ್ಟಿನಲ್ಲಿ ಅವಿರತ ಶ್ರಮಿಸುತ್ತಿರುವವರು ಈ ವರ್ಷದ ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿಗೆ ‘ಪಾತ್ರ’ರಾಗಿರುವ ಜಿ.ಎಸ್.ಜಯದೇವ ಅವರು. ಹಳ್ಳಿಗಾಡಿನ ಮಕ್ಕಳ ಶಿಕ್ಷಣಕ್ಕೆ ತಮ್ಮ ಬದುಕನ್ನೇ ಮುಡಿಪಾಗಿರಿಸಿರುವ ಜಿ.ಎಸ್.ಜಯದೇವ ಹುಟ್ಟಿದ್ದು 1951ರಲ್ಲಿ. ತಂದೆ ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪ, ತಾಯಿ ಶ್ರೀಮತಿ ರುದ್ರಾಣಿ. ಮೈಸೂರಿನ ಸರಸ್ವತೀಪುರಂ ತೊಟ್ಟಿಲು ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ.

ಮರಿಮಲ್ಲಪ್ಪ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ. ಶಿಕ್ಷಣ ಮುಂದುವರಿಸಿ ಬಿ.ಎಸ್.ಸಿ.(ಆನರ್ಸ್) ಪದವೀಧರರಾದರು. ಎಂ.ಎಸ್‌ಸಿ. ಮಾಡಿ ಸ್ನಾತಕೋತ್ತರರಾದರು. ಮೈಸೂರಿನ ಜೆ.ಎಸ್.ಎಸ್. ಕಾಲೇಜಿನಲ್ಲಿ ಉದ್ಯೋಗವೂ ದೊರೆತು ಪ್ರೊಫೆಸರ್ ಆದರು. ಇನ್ನೇನು ಬೇಕು ಚತುರ್ಭುಜರಾಗಿ ಸ್ವರ್ಗಕ್ಕೆ ಕಿಚ್ಚುಹಚ್ಚಲು? ಆದರೆ ಸಾಮಾಜಿಕ ಕಳಕಳಿ, ಸೇವಾಮನೋಭಾವಗಳನ್ನು ವಿದ್ಯಾರ್ಥಿ ದಿನಗಳಿಂದಲೇ ಮನನಮಾಡಿದ್ದ, ಮೈಗೂಡಿಸಿಕೊಂಡಿದ್ದ ಜಯದೇವ ಗೃಹಸ್ಥಾಶ್ರಮ ಹಿಡಿಯಲಿಲ್ಲ. ಸೇವಾಶ್ರಮಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು. ಮೈಸೂರಿನ ಸುತ್ತಮುತ್ತಲ ಅರಣ್ಯದ ಆಸುಪಾಸಿನಲ್ಲಿ ಜೀವಿಸುವ ಗಿರಿಜನರೊಂದಿಗೆ ಹೆಚ್ಚಿನ ಸಂಪರ್ಕ ಒಡನಾಟಗಳನ್ನಿಟ್ಟುಕೊಂಡಿದ್ದ ಯುವಕ ಜಯದೇವ ಅವರು ಕಂಡ ಈ ಗಿರಿಜನರ ಬದುಕು, ಹಳ್ಳಿಗಾಡಿನ ಜನರ ಬದುಕು ಅವರನ್ನು ಸಮಾಜ ಸೇವೆಗೆ ಪ್ರೇರೇಪಿಸಿರಬೇಕು. ಕೈತುಂಬ ಸಂಬಳ ಬರುವ ಪ್ರೊಫೆಸರ್‌ಗಿರಿ ತ್ಯಜಿಸಿ ಸಮಾಜ ಸೇವೆಗೆ ಪಾದಾರ್ಪಣೆ ಮಾಡಿದರು. ಸಮಾಜ ಸೇವೆಯಲ್ಲೂ ಅವರ ಪ್ರಮುಖ ಕಾಳಜಿ ಗಿರಿಜನರ ಬದುಕಿನ ಉದ್ಧಾರ. ಮ್ಯಾಗ್ಸೆೆಸೆ ಪ್ರಶಸ್ತಿ ವಿಜೇತ ಡಾ.ಸುದರ್ಶನ ಅವರ ಜೊತೆ ಕೈಜೋಡಿಸಿ ಬಿಳಿಗಿರಿ ರಂಗನ ಬೆಟ್ಟದ ಸೋಲಿಗರ ಬದುಕಿನ ಏಳಿಗೆಗಾಗಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಸ್ಥಾಪಿಸಿ ದುಡಿಯಲಾರಂಭಿಸಿದರು.

ಹೀಗೆ ನಿಸ್ವಾರ್ಥದಿಂದ ಸೇವಾಕ್ಷೇತ್ರ ಪ್ರವೇಶಿಸಿದ ಜಯದೇವರ ವಿಶೇಷ ಗಮನ ಸೆಳೆದವರು ಅನಾಥರಾದ ಬೀದಿ ಮಕ್ಕಳು. ದಿಕ್ಕುದೆಸೆಯಿಲ್ಲದ ಈ ಮಕ್ಕಳನ್ನು ಕಂಡು, ಅವರ ಭವಿಷ್ಯದ ಕುರಿತು ಜಯದೇವರ ಅಂತಃಕರಣ ಮಮ್ಮಲ ಮರುಗಿತು. ಅನಾಥ ಮಕ್ಕಳಿಗೆ ಬದುಕನ್ನು ಕೊಡುವ ಘನ ಉದ್ದೇಶದಿಂದ ‘ದೀನಬಂಧು ಟ್ರಸ್ಟ್’ ಸ್ಥಾಪಿಸಿದರು. ಅನಾಥ ಮಕ್ಕಳು ಹಾಗೂ ಹಳ್ಳಿಗಾಡಿನ ಬಡಮಕ್ಕಳಿಗೆ ಎಸೆಸೆಲ್ಸಿವರೆಗೆ ಶಿಕ್ಷಣ ನೀಡಿ ಅವರನ್ನು ವಿವಿಧ ಕಸುಬುಗಳಲ್ಲಿ ಕುಶಲಕರ್ಮಿಗಳನ್ನಾಗಿ ಸಜ್ಜುಗೊಳಿಸುವುದು ಈ ಟ್ರಸ್ಟಿನ ಗುರಿಗಮ್ಯತೆಗಳು. 1994ರಲ್ಲಿ ಬಾಡಿಗೆ ಮನೆಯೊಂದರಲ್ಲಿ ಅನಾಥ ಮಕ್ಕಳಿಗೆ ವಿದ್ಯೆ ಕಲಿಸಲು ‘ದೀನಬಂಧು ಮಕ್ಕಳ ಮನೆ’ ಆಶ್ರಮಶಾಲೆ ಪ್ರಾರಂಭಿಸಿದರು. ಪಾರಂಭಕ್ಕೆ ಆರು ಮಕ್ಕಳಿಂದ ಶುರುವಾದ ಈ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಬರುಬರುತ್ತಾ ಜಾಸ್ತಿಯಾಯಿತು. ಜಯದೇವರ ಈ ಮಹತ್ಕಾರ್ಯ ರಾಯಿಟರ್ಸ್ ಸಂಸ್ಥೆಯ ಉದ್ಯೋಗಿಯಾದ ವಿದೇಶಿ ಮಹಿಳೆಯೊಬ್ಬರ ಗಮನ ಸೆಳೆಯಿತು. ಆಕೆ ನೆರವಿನ ಹಸ್ತಚಾಚಿದರು. ಜಯದೇವ ಅನಾಥ ಮಕ್ಕಳ ಶಿಕ್ಷಣಕ್ಕಾಗಿ ಇನ್ನಷ್ಟು ಮನೆಗಳನ್ನು ಬಾಡಿಗೆಗೆ ಹಿಡಿದರು. ಈಗ ಚಾಮರಾಜನಗರದಲ್ಲಿ ನಾಲ್ಕು ‘ದೀನಬಂಧು ಮಕ್ಕಳ ಮನೆ’ಗಳಿವೆ.

ಒಂದೊಂದು ಮನೆಯಲ್ಲೂ ಹನ್ನೆರಡು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ. ಅವರನ್ನು ನೋಡಿಕೊಳ್ಳಲು ಒಬ್ಬೊಬರು ಹೌಸ್ ಮದರ್ ಅಥವಾ ಫಾದರ್. ಜಯದೇವ ಮಕ್ಕಳ ಶಿಕ್ಷಣದಲ್ಲಿ ಪ್ರಯೋಗಶೀಲರು. ಶಾಲಾಕಾಲೇಜುಗಳು ಸಮಾಜ ಪರಿವರ್ತನೆಯ ಸಾಧನಗಳಾಗಬೇಕೆಂಬುದು ಅವರ ಆದರ್ಶ. ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಕ್ಕಳಿಗೆ ಸೃಜನಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ 1998ರಲ್ಲಿ ಚಾಮರಾಜನಗರ ತಾಲೂಕಿನ ರಾಮಸಮುದ್ರ ಎಂಬ ಹಳ್ಳಿಯಲ್ಲಿ ಪ್ರಾಥಮಿಕ ಶಾಲೆಯೊಂದನ್ನು ತೆರೆದರು. ಶಿಕ್ಷಣ ಮಟ್ಟ ಉತ್ಕೃಷ್ಟವಾಗಿರ ಬೇಕಾದರೆ ಸಮರ್ಪಣ ಮನೋಭಾವದ ತಜ್ಞ ಶಿಕ್ಷಕರ ಅಗತ್ಯವನ್ನು ಅಲ್ಲಗಳೆಯಲಾಗದು. ಇದನ್ನು ಮನಗಂಡ ಜಯದೇವರು ಚಾಮರಾಜನಗರ ಸರಕಾರಿ ಶಾಲೆಗಳನ್ನು ದತ್ತು ಸ್ವೀಕಾರಮಾಡಿ ಅವುಗಳ ಅಭಿವೃದ್ಧಿಗಾಗಿ ಶಿಕ್ಷಕರಿಗೆ ತರಬೇತಿ ನೀಡುವ ಕಾಯಕ ಕೈಗೊಂಡರು.

ದೀನಬಂಧು ಟ್ರಸ್ಟ್ 2005ರಲ್ಲಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಶಿಕ್ಷಣಕಾಗಿ ಪ್ರತ್ಯೇಕವಾದ ‘ಹೆಣ್ಣುಮಕ್ಕಳ ಹಸಿರು ಮನೆ ಶಿಕ್ಷಣ ಕಾರ್ಯಕ್ರಮ’ ಪ್ರಾರಂಭಿಸಿತು. ಇಲ್ಲಿ ನಲವತ್ತು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶವಿದೆ. ಶಿಕ್ಷಣ ಕ್ಷೇತ್ರದ ಜೊತೆಗೆ ಗ್ಯಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಲ್ಲೂ ದೀನಬಂಧು ಟ್ರಸ್ಟ್ ಸಕ್ರಿಯವಾಗಿ ತೊಡಗಿಕೊಂಡಿದೆ. ಹಳ್ಳಿಗಳಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಿ, ಇವುಗಳ ಮೂಲಕ ಗ್ರಾಮೀಣರಿಗೆ ಸ್ವಾವಲಂಬನೆ, ಉಳಿತಾಯ, ಮಿತವ್ಯಯ, ಸುಧಾರಿತ ಬೇಸಾಯ ತಂತ್ರಗಳು ಮೊದಲಾದವುಗಳನ್ನು ಬೋಧಿಸುವುದು ಗಾಮೀಣ ಅಭಿವೃದ್ಧಿಯಲ್ಲಿ ‘ದೀನಬಂಧು’ವಿನ ಒಂದು ಮುಖ್ಯ ಕಾರ್ಯಕ್ರಮವಾಗಿದೆ. ಚಾಮರಾಜನಗರದ ದೀನಬಂಧು ಟ್ರಸ್ಟ್ ಶಾಲೆಗಳ ಕೆಲಸ ಜಯದೇವರ ಪೂರ್ಣಾವಧಿ ಸೇವಾ ಕಾಯಕವಾದರೂ ಅವರು ಮೈಸೂರಿನ ‘ಶಕ್ತಿಧಾಮ’ ಸಂಸ್ಥೆಯಲ್ಲೂ ಕ್ರಿಯಾಶೀಲರು. 1997ರಿಂದ ‘ಶಕ್ತಿಧಾಮ’ದಲ್ಲಿ ನಿರಾಶ್ರಿತ ಹೆಣ್ಣುಮಕ್ಕಳ ಪುನರ್ವಸತಿ ಮತ್ತು ಅಭ್ಯುದಯ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳ ಅನುಷ್ಠಾನಕ್ಕಾಗಿ ಶ್ರಮಿಸುತ್ತಿದ್ದಾರೆ.

ಪರಿಸರ ಪ್ರಿಯರಾದ ಜಯದೇವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನ ಪ್ರೊ. ಮಾಧವ ಗಾಡ್ಗೀಳ್ ಅವರ ನೆರವಿನಿಂದ ಬಿಳಿಗಿರಿ ರಂಗನ ಬೆಟ್ಟದ ಜೀವ ವೈವಿಧ್ಯ ದಾಖಲಾತಿ ಕಾರ್ಯದಲ್ಲೂ ಸಕ್ರಿಯವಾಗಿ ಪಾಲ್ಗೊಂಡವರು. ಸೃಜನಶೀಲ ಪ್ರತಿಭೆ ಜಿ.ಎಸ್.ಎಸ್. ಅವರ ಈ ಸುಪುತ್ರನಿಗೆ ರಕ್ತಗತವಾಗಿ ಬಂದಿರುವುದರಲ್ಲಿ ಆಶ್ಚರ್ಯವೇನಿಲ್ಲ.ಅವರು ಉತ್ತಮ ಲೇಖಕರೂ ಹೌದು. ‘ಮಕ್ಕಳ ಬೆಳವಣಿಗೆ ಮತ್ತು ನಾವು’, ‘ಶಕ್ತಿಧಾಮದ ಸತ್ಯಕಥೆಗಳು’ ಮತ್ತು ‘ಹಳ್ಳಿ ಹಾದಿ’ ಜಯದೇವರ ಮುಖ್ಯ ಕೃತಿಗಳು. ‘ದೀನಬಂಧು’ ಸಂಸ್ಥೆಯ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಾಗ ಒದಗಿಬಂದ ಗಾಢ ಅನುಭವಗಳೇ ಅವರ ಬರವಣಿಗೆಯ ಮೂಲಸಾಮಗ್ರಿ. ‘ಮಕ್ಕಳು ಮತ್ತು ನಾವು’ ಇಂತಹ ಅನುಭವ ಕಥನವಾದರೆ ‘ಶಕ್ತಿಧಾಮದ ಸತ್ಯಕಥೆಗಳು’ ಸಮಾಜದಲ್ಲಿ ಅತ್ಯಾಚಾರ, ಅನ್ಯಾಯಗಳಿಗೊಳಗಾದ ನೊಂದ ಹೆಣ್ಣು ಮಕ್ಕಳ ಕಥೆಗಳು. ‘ಹಳ್ಳಿ ಹಾದಿ’ ‘ಪ್ರಜಾವಾಣಿ’ ಪತ್ರಿಕೆಗೆ ಬರೆದ ಅಂಕಣ ಲೇಖನಗಳ ಸಂಗ್ರಹ. ಈ ಸಂಕಲನದ ಬರಹಗಳಲ್ಲಿ ಶಿಕ್ಷಣ, ಚುನಾವಣೆ, ಸರಕಾರಿ ಇಲಾಖೆಗಳ ಆಡಳಿತ ವೈಖರಿಗಳಿಂದ ಹಿಡಿದು ಧರ್ಮ, ಮಾಧ್ಯಮಗಳು, ಮಹಿಳೆಯರ ಹೋರಾಟ ಹೀಗೆ ವಿಷಯ ವೈವಿಧ್ಯ ಇದೆ.

ಜಯದೇವ ಅವರದು ಶಾಂತ ಚಿತ್ತದಿಂದ ಸಾವಧಾನವಾಗಿ ಸಮಸ್ಯೆಗಳ ಆಳಕ್ಕಿಳಿದು ವಿಶ್ಲೇಷಿಸುವ ಮಾದರಿಯ ಬರವಣಿಗೆ. ಪ್ರಬುದ್ಧ ಚಿಂತನೆ, ಸ್ಪಷ್ಟವಾದ ನಿಲುವು, ಅಂಕಿಅಂಶಗಳಿಂದ ಕೂಡಿದ ಸೊದಾಹರಣ ವಿಶ್ಲೇಷಣೆ, ಭಾವುಕತೆಯಿಂದ ಮುಕ್ತವಾದ ನಿರೂಪಣೆ ಜಯದೇವ ಅವರ ಬರವಣಿಗೆಯ ಮುಖ್ಯ ಗುಣಗಳು. ‘ಹಳ್ಳಿ ಹಾದಿ’ ಲೇಖನಗಳ ಮುಖ್ಯ ಆಶಯ ಸತ್ಯಶೋಧನೆ. ಸತ್ಯ ಶೋಧನೆಯಲ್ಲಿ ಜಯದೇವ ಅವರಿಗೆ ರಾಜಕೀಯ, ಸಾಮಾಜಿಕ ಪದ್ಧತಿಗಳು, ನಡೆ-ನುಡಿಗಳು, ವಿಜ್ಞಾನ, ವಿವೇಕಾನಂದ, ಗಾಂಧಿ ಮುಖ್ಯ ಆಕರಗಳಾಗುವಂತೆ ಮಾಯ್ಕಿರ ಮಾದೇಶ್ವರ, ಸೋಲಿಗರ ಮುಖಂಡ ಚಲುವಾದಿ ಮಾದೇಗೌಡ, ಸಾಲುಮರದ ತಿಮ್ಮಕ್ಕ, ಸೋಲಿಗರ ಪೂಜಾರಿ ಅವರಂಥವರೂ ಮುಖ್ಯವಾಗುತ್ತಾರೆ. ಗ್ರಾಮೀಣ ನಂಬಿಕೆಗಳನ್ನು ಮೂಢನಂಬಿಕೆಗಳೆಂದು ಸಾರಾಸಗಟಾಗಿ ತಿರಸ್ಕರಿಸದೆ ವೈಜ್ಞಾನಿಕ ದೃಷ್ಟಿಯಿಂದ ಗಮನಿಸುತ್ತಾರೆ. ದೇವನೂರ ಮಹಾದೇವ ಹೇಳುವಂತೆ ಇಲ್ಲಿನ ಬರಹಗಳು‘‘...ಒಬ್ಬ ಪ್ರಾಮಾಣಿಕ ಸಾಮಾಜಿಕ ಕಾರ್ಯಕರ್ತನ ವಿಶ್ಲೇಷಣೆಗಳಂತೆ’’ ಆರಂಭದಲ್ಲಿ ಕಂಡರೂ ‘‘ಆಮೇಲಿನ ಅವರ ಲೇಖನಗಳು, ಆಯ್ಕೆಮಾಡಿಕೊಂಡ ವಸ್ತುಗಳು ತಾವೇ ಮಾತಾಡತೊಡಗಿದಂತೆ ನಮ್ಮನ್ನು ಆವರಿಸಿಕೊಂಡುಬಿಡುತ್ತವೆ. ಯಶಸ್ಸನ್ನು ಅರಸುತ್ತಾ ನಾವು ಸೃಷ್ಟಿಸಿಕೊಂಡ ನರಕವನ್ನು ಬಿಚ್ಚಿಡತೊಡಗುತ್ತವೆ. ಸಿಟ್ಟುಗೊಂಡು ನಾವು ಪ್ರೀತಿಸಬೇಕಾದ ಭಾರತವನ್ನು ನಮಗೆ ಕಾಣಿಸುತ್ತವೆ.’’

ಹೀಗೆ ಸ್ವಂತ ಬದುಕಿನಲ್ಲೂ ಸೇವಾಕ್ಷೇತ್ರದ ಕಾಯಕದಲ್ಲೂ ಗಾಂಧೀಜಿಯವರ ತತ್ವಾದರ್ಶಗಳನ್ನು ಅಳವಡಿಸಿಕೊಂಡಿರುವ ಜಯದೇವ ಪ್ರಸಿದ್ಧಿ, ಕೀರ್ತಿಗಳನ್ನು ಬಯಸದ ಸರಳ ಜೀವಿ, ಪ್ರಾಮಾಣಿಕ ಜೀವಿ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪುರಸ್ಕಾರಗಳಿಗೆ ಭಾಜನರಾಗಿರುವ ಜಯದೇವ ಅವರಿಗೆ ಇವೆಲ್ಲದರ ಶಿಖರಪ್ರಾಯವಾಗಿ ಈಗ ‘ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ’ ಸಂದಿದೆ. ನಿಸ್ವಾರ್ಥ ಸೇವಕನೊಬ್ಬನಿಗೆ ನೀಡಿರುವ ಈ ಪ್ರಶಸ್ತಿಯಿಂದ ಗಾಂಧೀಜಿಯವರ ಗ್ರಾಮಸ್ವರಾಜ್ಯದ ಆದರ್ಶಗಳನ್ನು, ಮೌಲ್ಯಗಳನ್ನು ಗೌರವಿಸಿದಂತಾಗಿದೆ.
ಗಾಂಧಿ ಪ್ರಶಸ್ತಿ ಏನೋ ಅರಸದೇ ಬಂತು. ಆದರೆ ದೀನಬಂಧು ಸಂಸ್ಥೆಯ ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಅಗತ್ಯವಾಗಿರುವ ಜಮೀನಿಗಾಗಿ ಜಯದೇವರ ಪರದಾಟ ತಪ್ಪಿಲ್ಲ. ದೇವರು ವರ ಕೊಟ್ಟರೂ ಪೂಜಾರಿ ಕೊಡಲೊಲ್ಲ ಎಂಬಂತೆ ಜಿಲ್ಲಾಡಳಿತ ಮಂಜೂರು ಮಾಡಿರುವ ಏಳು ಎಕರೆ ದೀನಬಂಧು ಟ್ರಸ್ಟಿಗೆ ಇನ್ನೂ ಗಗನಕುಸುಮವಾಗಿೇ ಉಳಿದಿದೆ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News