×
Ad

ನೂತನ ಶಿಕ್ಷಣ ನೀತಿ ಅನುಷ್ಠಾನಕ್ಕೆ ನಿಧಿಯ ಕೊರತೆ: ಕರ್ನಾಟಕ ಸೇರಿ ಹಲವು ರಾಜ್ಯಗಳ ದೂರು

Update: 2019-10-06 21:15 IST

ಹೊಸದಿಲ್ಲಿ, ಅ.6: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಪ್ರಸ್ತಾವಿಸಿರುವ ನೂತನ ಶಿಕ್ಷಣ ನೀತಿ (ಎನ್‌ಇಪಿ)ಯಲ್ಲಿ ಕೆಲವೊಂದು ಉತ್ತಮ ಪ್ರಸ್ತಾವಗಳಿವೆ ಆದರೆ ಅದರ ಅನುಷ್ಠಾನಕ್ಕೆ ಯಾವುದೇ ಆರ್ಥಿಕ ನೆರವಿನ ಬಗ್ಗೆ ತಿಳಿಸಲಾಗಿಲ್ಲ ಎಂದು ವಿವಿಧ ರಾಜ್ಯಗಳು ದೂರಿವೆ.

ಈ ವಿಷಯವನ್ನು ಮಾನವ ಸಂಪನ್ಮೂಲ ಸಚಿವಾಲಯದ ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ (ಸಿಎಬಿಇ)ಸಭೆಯಲ್ಲಿ ವಿವಿಧ ರಾಜ್ಯಗಳ ಶಿಕ್ಷಣ ಸಚಿವರು ಅಥವಾ ಪ್ರತಿನಿಧಿಗಳು ಪ್ರಸ್ತಾವಿಸಿದರು. ಸಭೆಯಲ್ಲಿ ಮಾತನಾಡಿದ ಕರ್ನಾಟಕದ ಶಿಕ್ಷಣ ಸಚಿವ ಸಿ.ಎನ್ ಅಶ್ವಥ್ ನಾರಾಯಣ್, ಯಾವುದೇ ಯೋಜನೆ ಅಥವಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಹಣ ಬಹಳ ಮುಖ್ಯವಾಗುತ್ತದೆ. ಆದರೆ ಹೆಚ್ಚಿನ ಆದಾಯ ಮರುಕಳಿಸುವ ಅನುದಾನಗಳಿಗೇ ಹೋಗುತ್ತದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯ ಅನುಷ್ಠಾನಕ್ಕೆ ಯಾವುದೇ ಆರ್ಥಿಕ ನೆರವಿನ ಬಗ್ಗೆ ಪ್ರಸ್ತಾವಿಸಿಲ್ಲ. ಶಿಕ್ಷಣದ ಹಕ್ಕಿನ ವಿಸ್ತರಣೆ ರಾಜ್ಯಗಳ ಮೇಲೆ ಹೆಚ್ಚಿನ ಹೊರೆ ಬೀಳುವಂತೆ ಮಾಡಲಿದೆ. ಈ ಹೊರೆಯನ್ನು ಕೇಂದ್ರ ಸರಕಾರ ಹೊರಬೇಕು ಎಂದು ಬಿಹಾರ ಶಿಕ್ಷಣ ಸಚಿವ ಕೆ.ಎನ್ ಪ್ರಸಾದ್ ವರ್ಮಾ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ದಿಲ್ಲಿಉ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ, ಇದೊಂದು ಅಸಾಧ್ಯವಾದ ಕರಡು ಮತ್ತು ಇದರಲ್ಲಿ ಅನುಷ್ಠಾನದ ಕುರಿತು ಯಾವುದೇ ಉಲ್ಲೇಖವಿಲ್ಲ. ಭಾರತೀಯ ಶಿಕ್ಷಣ ವ್ಯವಸ್ಥೆ ಅತೀಹೆಚ್ಚು ನಿಯಂತ್ರಣಕ್ಕೆ ಒಳಪಟ್ಟಿದೆ ಆದರೆ ನಿಧಿಯ ಕೊರತೆ ಎದುರಿಸುತ್ತಿದೆ ಎಂದು ಅಭಿಪ್ರಾಯಿಸಿದ್ದಾರೆ. ಆಂಧ್ರ ಪ್ರದೇಶ, ಒಡಿಶಾ, ಮಧ್ಯ ಪ್ರದೇಶ ಹಾಗೂ ಇತರ ಕೆಲವು ರಾಜ್ಯಗಳ ಶಿಕ್ಷಣ ಸಚಿವರೂ ನೂತನ ಶಿಕ್ಷಣ ನೀತಿಯಲ್ಲಿ ಅನುಷ್ಠಾನದ ಕುರಿತು ಯಾವುದೇ ಉಲ್ಲೇಖವಿಲ್ಲದಿರುವ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News