ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೊಳಿಸಿದ ರಾಜ್ಯಗಳೆಷ್ಟು ಗೊತ್ತೇ ?
ಹೊಸದಿಲ್ಲಿ: ಕೇಂದ್ರ ಸರ್ಕಾರ ಹೊಸ ಮೋಟಾರು ವಾಹನ ಕಾಯ್ದೆ ಬಗ್ಗೆ ಅಧಿಸೂಚನೆ ಹೊರಡಿಸಿ ಐದು ವಾರಗಳು ಕಳೆದಿದ್ದು, ಗುಜರಾತ್, ಉತ್ತರಾಖಂಡ, ಕೇರಳ, ಕರ್ನಾಟಕ ಮತ್ತು ಅಸ್ಸಾಂ ಹೀಗೆ ಕೇವಲ ಐದು ರಾಜ್ಯಗಳಷ್ಟೇ ಇದನ್ನು ಅನುಷ್ಠಾನಕ್ಕೆ ತಂದಿವೆ.
ಕೆಲ ರಾಜ್ಯ ಸಾರಿಗೆ ಇಲಾಖೆಗಳು ಪರಿಷ್ಕೃತ ದಂಡವನ್ನು ನಿಗದಿಪಡಿಸಿ ಆಯಾ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸಿ, ತ್ವರಿತವಾಗಿ ಅಧಿಸೂಚನೆ ಹೊರಡಿಸುವಂತೆ ಕೋರಿವೆ ಎಂದು ಉನ್ನತ ಮೂಲಗಳು ಹೇಳಿವೆ.
"ಪ್ರಸ್ತಾವಿತ ಅಧಿಸೂಚನೆಗಳಲ್ಲಿ ನಿರ್ದಿಷ್ಟಪಡಿಸಿದ ದಂಡ ಹಾಗೂ ಶಿಕ್ಷೆಗೆ ಸರ್ಕಾರದ ಅನುಮೋದನೆ ಅಗತ್ಯ. ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶ ನೀಡಲಾದ ನಿರ್ದಿಷ್ಟ ಅಪರಾಧಗಳಿಗೆ ದಂಡ ಹಾಗೂ ಶಿಕ್ಷೆ ವಿಧಿಸುವ ಸಂಬಂಧ ಸರ್ಕಾರಕ್ಕೆ ಸಲಹೆ ಮಾಡಿದ್ದೇವೆ. ಆದರೆ ಸಂಯುಕ್ತ ಅಪರಾಧಗಳಲ್ಲಿ ದಂಡಮೊತ್ತವನ್ನು ಬದಲಿಸಲು ಅವಕಾಶವಿಲ್ಲದ ಅಂಶಗಳನ್ನು ನಾವು ಪರಿಷ್ಕರಿಸಿಲ್ಲ" ಎಂದು ರಾಜಸ್ಥಾನ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಂಯುಕ್ತ ಅಪರಾಧಗಳೆಂದರೆ ನಿಯಮ ಉಲ್ಲಂಘಿಸಿದವರು ಸ್ಥಳದಲ್ಲೇ ನಿಯೋಜಿತ ಸಂಚಾರಿ ಪೊಲೀಸರು ಅಥವಾ ಸಾರಿಗೆ ಇಲಾಖೆ ಅಧಿಕಾರಿಗಳಲ್ಲಿ ದಂಡ ಪಾವತಿಸುವ ಪ್ರಕರಣಗಳು. ಇದರಲ್ಲಿ ನ್ಯಾಯಾಲಯಕ್ಕೆ ಹೋಗುವ ಅಗತ್ಯ ಇರುವುದಿಲ್ಲ.
ಬಿಹಾರ ಸರ್ಕಾರ ಶೀಘ್ರವೇ ಹೊಸ ಕಾಯ್ದೆ ಬಗ್ಗೆ ಅಧಿಸೂಚನೆ ಹೊರಡಿಸಲಿದ್ದು, ಜಾರ್ಖಂಡ್, ಮಹಾರಾಷ್ಟ್ರ ಹಾಗೂ ಹರ್ಯಾಣ ರಾಜ್ಯಗಳಲ್ಲಿ ಈ ಹೊಸ ಕಾಯ್ದೆ ಅನುಷ್ಠಾನಕ್ಕೆ ಕನಿಷ್ಠ ಮೂರು ತಿಂಗಳು ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.
"ಹೊಸ ಕಾಯ್ದೆ ಜಾರಿಯ ದಿನಾಂಕವನ್ನು ಘೋಷಿಸುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಚಾರ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಬದಲಾವಣೆ ಮಾಡಲಾಗಿದೆ. ಆದ್ದರಿಂದ ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಿದ ಅಪರಾಧಗಳಿಗೆ ರಾಜ್ಯಗಳು ಹೊಸದಾಗಿ ದಂಡವನ್ನು ನಿಗದಿಪಡಿಸುವುದಾದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಸಂಯುಕ್ತವಲ್ಲದ ಅಪರಾಧ ಪ್ರಕರಣಗಳಲ್ಲಿ ಕಾಯ್ದೆ ನಿಗದಿಪಡಿಸಿದ ದಂಡನಾ ಮೊತ್ತಕ್ಕಿಂತ ಕಡಿಮೆ ದಂಡ ಮೊತ್ತ ನಿಗದಿಪಡಿಸಿದಲ್ಲಿ ಸಮಸ್ಯೆ ಉದ್ಭವಿಸುತ್ತದೆ" ಎಂದು ಮೂಲಗಳು ವಿವರಿಸಿವೆ.
ರಾಜ್ಯಗಳು ಹೀಗೆ ಮಾಡಲು ಅವಕಾಶವಿದೆಯೇ ಎಂಬ ಬಗ್ಗೆ ಕೇಂದ್ರ ಸರ್ಕಾರ ಕಾನೂನು ಸಚಿವಾಲಯದ ಸಲಹೆ ಕೇಳಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.