ಮುಷ್ಕರ ನಿರತ 48,000 ಸಾರಿಗೆ ನಿಗಮ ಉದ್ಯೋಗಿಗಳನ್ನು ವಜಾಗೊಳಿಸಿದ ತೆಲಂಗಾಣ ಸರಕಾರ !

Update: 2019-10-07 04:19 GMT

ಹೈದರಾಬಾದ್ : ಅಭೂತಪೂರ್ವ ಕ್ರಮವೊಂದರಲ್ಲಿ  ತಮ್ಮ ಬಹುಕಾಲದ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ಸುಮಾರು 48,000 ಉದ್ಯೋಗಿಗಳನ್ನು ತೆಲಂಗಾಣ ಸರಕಾರ ರವಿವಾರ ಸೇವೆಯಿಂದ ವಜಾಗೊಳಿಸಿದೆ.

ಮುಷ್ಕರ ವಾಪಸ್ ಪಡೆಯಲು ಸರಕಾರ ಉದ್ಯೋಗಿಗಳಿಗೆ ಶನಿವಾರ ಸಂಜೆ 6 ಗಂಟೆಗೆ ಅಂತಿಮ ಗಡುವು ವಿಧಿಸಿತ್ತು. ರವಿವಾರ ಸಂಜೆ ಸಾರಿಗೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಸಾರಿಗೆ ನಿಗಮದಲ್ಲಿ ಈಗ  ಮುಷ್ಕರ ನಡೆಸದವರು ಹಾಗೂ ಅಂತಿಮ ಗಡುವಿಗಿಂತ ಮೊದಲು ಕರ್ತವ್ಯಕ್ಕೆ ಹಾಜರಾದವರನ್ನೊಳಗೊಂಡು ಕೇವಲ 1200 ಉದ್ಯೋಗಿಗಳಿರುವುದಾಗಿ  ಘೋಷಿಸಿದರು.

ಶನಿವಾರ ಮುಂಜಾನೆಯಿಂದ ತೆಲಂಗಾಣ ಆರ್ ಟಿ ಸಿ ಉದ್ಯೋಗಿಗಳ ಹಾಗೂ ಕಾರ್ಮಿಕರ ಯೂನಿಯನ್ ಗಳ ಜಂಟಿ ಕ್ರಿಯಾ ಸಮಿತಿಯ ಕರೆಯಂತೆ ಸುಮಾರು 49,340 ಉದ್ಯೋಗಿಗಳು ಮುಷ್ಕರ ಆರಂಭಿಸಿದ್ದರು. ನೆರೆಯ ಆಂಧ್ರ ಪ್ರದೇಶದಲ್ಲಿ ಮಾಡಿದಂತೆ ಆರ್ ಟಿ ಸಿ ಯನ್ನು ರಾಜ್ಯ ಸರಕಾರದ ಜತೆ ವಿಲೀನಗೊಳಿಸಬೇಕು ಎಂದು ಹಾಗು ಹಲವು ಬೇಡಿಕೆಗಳನ್ನು ಉದ್ಯೋಗಿಗಳು ಮುಂದಿಟ್ಟಿದ್ದಾರೆ. ಆಂಧ್ರ ಪ್ರದೇಶದಲ್ಲಿ ಸಾರಿಗೆ ಉದ್ಯೋಗಿಗಳನ್ನು ಸರಕಾರಿ ಉದ್ಯೋಗಿಗಳೆಂದು ಪರಿಗಣಿಸಲಾಗಿರುವ ಹೊರತು ಅವರ ನಿವೃತ್ತಿ ವಯಸ್ಸನ್ನೂ 60 ವರ್ಷಕ್ಕೇರಿಸಲಾಗಿದೆ. ಎಪ್ರಿಲ್ 2017ರಿಂದ ಬಾಕಿಯಿರುವ ವೇತನ ಪರಿಷ್ಕರಣೆಗೂ ಅವರು ಆಗ್ರಹಿಸಿದ್ದಾರಲ್ಲದೆ ಕೆಲಸದ  ಹೊರೆಯನ್ನು ಕಡಿಮೆ ಗೊಳಿಸುವ ಸಲುವಾಗಿ ಹೊಸ ನೇಮಕಾತಿಗಳನ್ನು ಮಾಡಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.

ಸರಕಾರ ಸಾರಿಗೆ ನಿಗಮದ 48,000 ಉದ್ಯೋಗಿಗಳನ್ನು ವಜಾಗೊಳಿಸಿದ ಬೆನ್ನಲ್ಲೇ 2,500 ಬಸ್ಸುಗಳನ್ನು ಲೀಸ್ ಗೆ ಪಡೆಯಲು ಹಾಗೂ  ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಪೂರಕವಾಗಿ  ಕಾರ್ಯಾಚರಿಸಲು 4,114 ಖಾಸಗಿ ಬಸ್ಸುಗಳಿಗೆ ಅನುವಾಗುವಂತೆ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದಾರೆ. 15 ದಿನಗಳೊಳಗಾಗಿ ಸ್ಥಿತಿ ಸಹಜತೆಗೆ ಮರಳಲು ಕ್ರಮ ಕೈಗೊಳ್ಳುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News