ಮುಂಬೈನ ಆರೆ ಕಾಲನಿಯಲ್ಲಿ ಮರ ಕಡಿಯುವುದಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ
ಮುಂಬೈ, ಅ.7: ಮುಂದಿನ ವಿಚಾರಣೆಯ ತನಕ ಮುಂಬೈನ ಆರೆ ಕಾಲೋನಿಯಲ್ಲಿ ಯಾವುದೇ ಮರಗಳನ್ನು ಕತ್ತರಿಸದಂತೆ ಮುಂಬೈ ಮೆಟ್ರೋ ರೈಲು ಕಾರ್ಪೋರೇಶನ್ ಗೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡಿದ್ದು. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿದೆ.
ಮುಂಬೈ ಮೆಟ್ರೊಗೆ ಕಾರ್ ಶೆಡ್ ನಿರ್ಮಿಸಲು ಮರಗಳನ್ನು ಕಡಿಯುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ "ಈಗ ಏನನ್ನೂ ಕತ್ತರಿಸಬೇಡಿ" ಎಂದು ಹೇಳಿದೆ.
ಮರ ಕಡಿಯುವುದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನೆಕಾರರನ್ನು ವೈಯಕ್ತಿಕ ಬಾಂಡ್‌ಗಳನ್ನು ಒದಗಿಸಿ ಕೂಡಲೇ ಬಿಡುಗಡೆ ಮಾಡಲು ನ್ಯಾಯಾಲಯ ಆದೇಶಿಸಿದೆ.
ಮರ ಕಡಿಯುವಿಕೆಯ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಮತ್ತು ಆರೆ ಪ್ರದೇಶದಲ್ಲಿ ನೆಟ್ಟಿರುವ ಸಸಿಗಳ ಸ್ಥಿತಿಗತಿ ಕುರಿತು ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.
ಆರೆ ಕಾಲನಿಯಲ್ಲಿ ಮರಗಳನ್ನು ಕಡಿಯುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಆಲಿಸಲು ಸುಪ್ರೀಂ ಕೋರ್ಟ್ ವಿಶೇಷ ನ್ಯಾಯಪೀಠವನ್ನು ರವಿವಾರ ಸ್ಥಾಪಿಸಿತ್ತು.