ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಗೆ ನಾಲ್ವರು ಬಲಿ, ಅಮಿತ್ ಶಾ ಹೇಳಿಕೆ ಸುಳ್ಳು

Update: 2019-10-08 15:03 GMT

ಹೊಸದಿಲ್ಲಿ, ಅ.8: ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿ ರದ್ದತಿ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಅಲ್ಲಿ ಒಂದೇ ಒಂದು ಗುಂಡು ಹಾರಿಸಲಾಗಿಲ್ಲ ಮತ್ತು ಒಬ್ಬನೂ ಸಾವನ್ನಪ್ಪಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿಕೆ ನೀಡಿದ್ದರು. ಆದರೆ, ಸರಕಾರದ ನಿರ್ಧಾರದ ವಿರುದ್ಧ ನಡೆದ ಪ್ರತಿಭಟನೆಯ ಸಮಯದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಸಂಭವಿಸಿರುವ ನಾಲ್ವರು ವ್ಯಕ್ತಿಗಳ ಅಸಹಜ ಸಾವು ಅಮಿತ್ ಶಾ ಅವರ ಹೇಳಿಕೆಗೆ ವಿರುದ್ಧವಾಗಿದೆ ಎಂದು thewire.in ವರದಿ ಮಾಡಿದೆ.

ಅಸಹಜ ಸಾವನ್ನಪ್ಪಿದ ಮೊದಲ ವ್ಯಕ್ತಿ 17ರ ಹರೆಯದ ಉಸೈಬ್ ಅಲ್ತಾಫ್. ಈತನ ಕುಟುಂಬಸ್ಥರು ಮತ್ತು ಗೆಳೆಯರ ಆರೋಪದಂತೆ, ಆಗಸ್ಟ್ 5ರಂದು ಭದ್ರತಾ ಪಡೆಗಳು ಈತನನ್ನು ಅಟ್ಟಿಸಿಕೊಂಡು ಬಂದ ಸಂದರ್ಭದಲ್ಲಿ ಜೀಲಂ ನದಿಗೆ ಬಿದ್ದು ಅಲ್ತಾಫ್ ಮೃತಪಟ್ಟಿದ್ದ.

34ರ ಹರೆಯದ ಫಹ್ಮೀದಾ ಶಾಗು ಅಸಹಜ ಸಾವನ್ನಪ್ಪಿದ ಎರಡನೇ ವ್ಯಕ್ತಿ. ಇವರು ಆಗಸ್ಟ್ 9ರಂದು ಶ್ರೀನಗರದಲ್ಲಿ ಗುಂಪನ್ನು ಚದುರಿಸಲು ಬಳಸಲಾಗಿದ್ದ ಅಶ್ರುವಾಯುವಿನಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದರು ಎಂದು ಆರೋಪಿಸಲಾಗಿದೆ. ಆಗಸ್ಟ್ 17ರಂದು 55ರ ಹರೆಯದ ಅಯೂಬ್ ಖಾನ್ ಅವರೂ ಭದ್ರತಾ ಪಡೆಗಳು ಅಶ್ರುವಾಯು ಸ್ಫೋಟಿಸಿದ ಸಂದರ್ಭದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದರು ಎಂದು ಆರೋಪಿಸಲಾಗಿದೆ.

ಕುಟುಂಬಸ್ಥರು ಮತ್ತು ಸ್ನೇಹಿತರ ಪ್ರಕಾರ, 18ರ ಹರೆಯದ ಅಸ್ರಾರ್ ಅಹ್ಮದ್ ಆಗಸ್ಟ್ 6ರಂದು ತನ್ನ ಮನೆಯ ಹೊರಗೆ ಗೆಳೆಯರ ಜೊತೆ ಆಟವಾಡುತ್ತಿದ್ದಾಗ ಅರೆಸೇನಾ ಪಡೆ ನಡೆಸಿದ ಪೆಲೆಟ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. ನಂತರ ಸೆಪ್ಟಂಬರ್ 4ರಂದು ಶ್ರೀನಗರದ ಎಸ್‌ಎಂಎಚ್‌ಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ. ಕಣಿವೆ ರಾಜ್ಯದಲ್ಲಿ ಒಂದು ಗುಂಡನ್ನೂ ಹಾರಿಸಲಾಗಿಲ್ಲ ಎಂಬ ಅಮಿತ್ ಶಾರ ಮಾತು ನಿಜ. ಆದರೆ ಒಬ್ಬನೂ ಸಾವನ್ನಪ್ಪಿಲ್ಲ ಎಂಬ ಹೇಳಿಕೆ ಶುದ್ಧ ಸುಳ್ಳು ಎಂದು ವರದಿ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜತೆಗೆ ಮರಳಿದ ನಂತರ ಅದರ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲಾಗುವುದು ಎಂದು ಅಮಿತ್ ಶಾ ತಿಳಿಸಿದ್ದಾರೆ. ಆದರೆ ಸಹಜತೆ ಎನ್ನುವುದನ್ನು ಅಳೆಯಲು ಅಮಿತ್ ಶಾ ಯಾವ ಮಾನದಂಡವನ್ನು ಬಳಸಲಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News