2000-2018ರ ನಡುವೆ ದೇಶದಲ್ಲಿ 65 ಪತ್ರಕರ್ತರ ಹತ್ಯೆ: ಹೊಸ ಪುಸ್ತಕದಲ್ಲಿ ಬಹಿರಂಗ

Update: 2019-10-08 18:05 GMT

ಹೊಸದಿಲ್ಲಿ, ಅ. 8: ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ನಿರಂತರ ಕಿರುಕುಳ ನೀಡುತ್ತಿರುವುದು ಹಾಗೂ ಬೆದರಿಕೆ ಒಡ್ಡುತ್ತಿರುವುದರಿಂದ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಸವಾಲಿನ ಹಂತದಲ್ಲಿ ಹಾದು ಹೋಗುತ್ತಿದೆ. 2000-2018ರ ನಡುವೆ ಕರ್ತವ್ಯ ನಿರ್ವಹಣೆ ವೇಳೆ 65 ಪತ್ರಕರ್ತರ ಹತ್ಯೆ ನಡೆದಿದೆ ಎಂದು ಇತ್ತೀಚೆಗೆ ಬಿಡುಗಡೆಗೊಳಿಸಲಾದ ‘ಸೈಲೆನ್ಸಿಂಗ್ ಜರ್ನಲಿಸ್ಟ್ಸ್ ಇನ್ ಇಂಡಿಯಾ’ ಪುಸ್ತಕ ಬಹಿರಂಗಗೊಳಿಸಿದೆ.

 ಉತ್ತರಪ್ರದೇಶ ಸರಕಾರ ಪತ್ರಕರ್ತರಿಗೆ ಅತಿ ಅಪಾಯಕಾರಿ ರಾಜ್ಯವಾಗಿದೆ. ಇಲ್ಲಿ ಈ ಅವಧಿಯಲ್ಲಿ 12ಕ್ಕೂ ಅಧಿಕ ಪತ್ರಕರ್ತರು ಹತ್ಯೆಯಾಗಿದ್ದಾರೆ. ಇದು ದೇಶದಲ್ಲೇ ಅತ್ಯಧಿಕ ಪತ್ರಕರ್ತರ ಹತ್ಯೆ ನಡೆದ ರಾಜ್ಯ ಎಂದು ಅಧ್ಯಯನ ಹೇಳಿದೆ.

2017 ಸೆಪ್ಟಂಬರ್ 5ರಂದು ಬೆಂಗಳೂರಿನ ತನ್ನ ನಿವಾಸದಲ್ಲಿ ಹತ್ಯೆಯಾದ ‘ಗೌರಿ ಲಂಕೇಶ್ ಪತ್ರಿಕೆ’ಯ ಸಂಪಾದಕಿ ಗೌರಿ ಲಂಕೇಶ್ ಅವರಿಂದ ಹಿಡಿದು 2018 ಜೂನ್ 14ರಂದು ಶ್ರೀನಗರದಲ್ಲಿ ಭಯೋತ್ಪಾದಕರಿಂದ ಹತ್ಯೆಯಾದ ‘ರೈಸಿಂಗ್ ಕಾಶ್ಮೀರ್’ ಸಂಪಾದಕ ಶುಜಾತ್ ಬುಖಾರಿ ಅವರ ವರೆಗೆ ಹತ್ಯೆಯಾದ 65 ಪತ್ರಕರ್ತರ ವ್ಯಕ್ತಿ ವಿವರವನ್ನು ಈ ಅಧ್ಯಯನ ಒಳಗೊಂಡಿದೆ.

 ‘ಸೈಲೆನ್ಸ್ ದಿ ಜರ್ನಲಿಸ್ಟ್ ಇನ್ ಇಂಡಿಯಾ’ ಪುಸ್ತಕವನ್ನು ‘ಹ್ಯೂಮನ್ ರೈಟ್ಸ್ ಆ್ಯಂಡ್ ಲಾ ನೆಟ್‌ವರ್ಕ್’ ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಮುಂಬೈ ಪ್ರೆಸ್ ಕ್ಲಬ್, ಇಂಡಿಯಾ ವುಮನ್ ಪ್ರೆಸ್ ಕಾರ್ಪ್ಸ್, ದಿಲ್ಲಿ ಯೂನಿಯನ್ ಆಫ್ ಜರ್ನಲಿಸ್ಟ್, ಬ್ರಹ್ಮನ್ಮುಂಬಯಿ ಜರ್ನಲಿಸ್ಟ್ಸ್ ಯೂನಿಯನ್ ಹಾಗೂ ಮೀಡಿಯಾ ಸ್ಟಡೀಸ್ ಗ್ರೂಪ್‌ನ ಸಹಭಾಗಿತ್ವದಲ್ಲಿ ಪ್ರಕಟಿಸಿದೆ.

12 ರಾಜ್ಯಗಳಲ್ಲಿ 2000ದಿಂದ 2018ರ ವರೆಗೆ ತಮ್ಮ ವಿಮರ್ಶಾತ್ಮಕ ಬರವಣಿಗೆಯ ಹಿನ್ನೆಲೆಯಲ್ಲಿ 31 ಪತ್ರಕರ್ತರ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಿರುವ ಬಗ್ಗೆ ಕೂಡ ಈ ಪುಸ್ತಕ ಬೆಳಕು ಚೆಲ್ಲಿದೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಅಧ್ಯಕ್ಷ ಅನಂತ್ ಬಗೈತ್ಕಾರ್, ಮಾಧ್ಯಮ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿದರು. ನಾಗರಿಕ ಸಮಾಜ, ಪ್ರೆಸ್ ಕ್ಲಬ್‌ಗಳು ಹಾಗೂ ಮಾಧ್ಯಮ ಸಂಘಟನೆಗಳು ಸಂಘಟಿತವಾಗಬೇಕು ಹಾಗೂ ಪತ್ರಿಕಾ ಸ್ವಾತಂತ್ರ್ಯದ ಸುರಕ್ಷೆಗಾಗಿ ವೇದಿಕೆ ರೂಪಿಸಬೇಕು ಎಂದರು.

 ಮೀಡಿಯಾ ಸ್ಟಡೀಸ್ ಗ್ರೂಪ್‌ನ ಸಂಚಾಲಕ ಹಾಗೂ ಹಿರಿಯ ಪತ್ರಕರ್ತ ಅನಿಲ್ ಚಂಬಾಡಿಯಾ ಮಾತನಾಡಿ, ಮಾಧ್ಯಮ ವ್ಯಕ್ತಿಗಳ ಮೇಲಿನ ದಾಳಿ ಯೋಜಿತ. ಮಾಧ್ಯಮ ಸ್ವಾತಂತ್ರ ನಿಗ್ರಹಿಸಲು ಕಾನೂನು ವ್ಯವಸ್ಥೆಯ ಲೋಪಗಳನ್ನು ಕಾರ್ಪೊರೇಟ್‌ಗಳು ಹಾಗೂ ಸರಕಾರಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದರು.

ಹ್ಯೂಮನ್ ರೈಟ್ಸ್ ಲಾ ನೆಟ್‌ವರ್ಕ್‌ನ ಸ್ಥಾಪಕ ಹಾಗೂ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ ಕೂಲಿನ್ ಗೊನ್ಸಾಲ್ವೆಸ್ ಮಾತನಾಡಿ, ಪತ್ರಕರ್ತರನ್ನು ಮೌನಗೊಳಿಸಲು ಸರಕಾರಗಳು ದೇಶದ್ರೋಹದ ಕಾನೂನು ದುರ್ಬಳಕೆ ಮಾಡುತ್ತಿರುವ ಬಗ್ಗೆ ಬೆಳಕು ಚೆಲ್ಲಿದರು.

ದಿಲ್ಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್ ಹಾಗೂ ವುಮೆನ್ ಪ್ರೆಸ್ ಕಾರ್ಪ್ಸ್‌ನ ಸುಜಾತಾ ಮಧೋಕ್ ಹಾಗೂ ವಿನೀತಾ ಪಾಂಡೆ ಪತ್ರಕರ್ತರ ಹಕ್ಕುಗಳಿಗಾಗಿ ಹಾಗೂ ಪತ್ರಿಕಾ ಸ್ವಾತಂತ್ರವನ್ನು ಸಮರ್ಥಿಸಿಕೊಳ್ಳಲು ಪತ್ರಕರ್ತರು ಸಂಘಟಿತರಾಗಬೇಕು ಎಂಬ ನಿಲುವನ್ನು ಬೆಂಬಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News