ಶ್ರೀಲಂಕಾ, ಪಾಕಿಸ್ತಾನ ಸರಣಿಗೆ ಆಸ್ಟ್ರೇಲಿಯದ ಟ್ವೆಂಟಿ-20 ತಂಡ ಪ್ರಕಟ

Update: 2019-10-09 01:46 GMT

ಹೊಸದಿಲ್ಲಿ, ಅ.8: ಮುಂದಿನ ವರ್ಷ ತವರು ನೆಲದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನ್ನು ದೃಷ್ಟಿಯಲ್ಲಿಟ್ಟುಕೊಂಡು ಆಸ್ಟ್ರೇಲಿಯ ತಂಡ ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ಧ ಸ್ವದೇಶಿ ಸರಣಿಗೆ ಟ್ವೆಂಟಿ-20 ತಂಡವನ್ನು ಮಂಗಳವಾರ ಪ್ರಕಟಿಸಿದೆ. ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಆಸ್ಟ್ರೇಲಿಯ ಅ.27ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ ಆತಿಥ್ಯವಹಿಸಿಕೊಂಡಿದೆ. ಮುಂದಿನ ತಿಂಗಳು ಅಗ್ರ ರ್ಯಾಂಕಿನ ಪಾಕಿಸ್ತಾನದ ಸವಾಲು ಎದುರಿಸಲಿದೆ.

 ಆಸ್ಟ್ರೇಲಿಯ ಪುರುಷರ ಟ್ವೆಂಟಿ-20 ವಿಶ್ವಕಪ್ ಆತಿಥ್ಯವಹಿಸಲು ಇಂದಿನ ಸರಿಯಾಗಿ ಒಂದು ತಿಂಗಳು ಬಾಕಿ ಉಳಿದಿದೆ. ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಈ ತಂಡವನ್ನು ಆಯ್ಕೆ ಮಾಡಿದ್ದೇವೆ, ನಾವು ಆಯ್ಕೆ ಮಾಡಿರುವ ತಂಡ ಎಲ್ಲ ವಾತಾವರಣದಲ್ಲಿ ಹೊಂದಿಕೊಂಡು ಆಡುವ ವಿಶ್ವಾಸವಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಟ್ರೆವರ್ ಹಾನ್ಸ್ ಹೇಳಿದ್ದಾರೆ.

‘‘ಸ್ಮಿತ್ ಹಾಗೂ ವಾರ್ನರ್‌ರನ್ನು ತಂಡಕ್ಕೆ ವಾಪಸ್ ಸ್ವಾಗತಿಸಲು ತುಂಬಾ ಸಂತೋಷವಾಗುತ್ತಿದೆ. ಸ್ಮಿತ್ ಎಲ್ಲ ಮಾದರಿಯ ಕ್ರಿಕಟ್‌ನಲ್ಲಿ ವಿಶ್ವ ದರ್ಜೆಯ ಬ್ಯಾಟ್ಸ್‌ಮನ್ ಆಗಿದ್ದು, ವಾರ್ನರ್ ಆಸ್ಟ್ರೇಲಿಯದ ಪರ ಟ್ವೆಂಟಿ-20ಯಲ್ಲಿ ಗರಿಷ್ಠ ರನ್ ಗಳಿಸಿದ್ದಾರೆ’’ ಎಂದು ಟ್ರೆವರ್ ಹೇಳಿದ್ದಾರೆ. 30ರ ಹರೆಯದ ಸ್ಮಿತ್ ಇತ್ತೀಚೆಗೆ ಕೊನೆಗೊಂಡ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 774 ರನ್ ಗಳಿಸಿದ್ದಾರೆ. ವಾರ್ನರ್ ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ 692 ರನ್ ಗಳಿಸಿದ್ದರು. ಇಂಗ್ಲೆಂಡ್‌ನಲ್ಲಿ ನಡೆದಿದ್ದ 50 ಓವರ್‌ಗಳ ವಿಶ್ವಕಪ್‌ನಲ್ಲಿ 647 ರನ್ ಗಳಿಸಿದ್ದ ವಾರ್ನರ್ ಆಸ್ಟ್ರೇಲಿಯ ತಂಡ ಸೆಮಿ ಫೈನಲ್ ತಲುಪಲು ನೆರವಾಗಿದ್ದರು. ಆಸ್ಟ್ರೇಲಿಯ ತಂಡ ಆಲ್‌ರೌಂರಡ್ ಮಾರ್ಕಸ್ ಸ್ಟೋನಿಸ್‌ರನ್ನು ಕೈಬಿಟ್ಟು ಅಶ್ಟನ್ ಟರ್ನರ್‌ರನ್ನು ಆಯ್ಕೆ ಮಾಡಿದೆ. ಬಿಗ್‌ಹಿಟ್ಟರ್ ಗ್ಲೆನ್ ಮ್ಯಾಕ್ಸ್ ವೆಲ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ. 14 ಸದಸ್ಯರ ಟ್ವೆಂಟಿ-20 ತಂಡವನ್ನು ಆ್ಯರೊನ್ ಫಿಂಚ್ ನಾಯಕನಾಗಿ ಮುನ್ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News