ಅಭಿವೃದ್ಧಿ ಎಂಬ ಮಾಯಾ ಜಿಂಕೆಯ ಬೆನ್ನೇರಿ...

Update: 2019-10-09 07:55 GMT

ಅಭಿವೃದ್ಧಿ ಹೆಸರಿನಲ್ಲಿ ನಾವು ಏನು ಮಾಡಲು ಹೊರಟಿದ್ದೇವೆ ಎನ್ನುವುದು ಇಂದು ಯಾರಿಗೂ ತಿಳಿಯದ ವಿಚಾರ ವಾಗಿರುವುದು ಒಂದು ರೀತಿಯಲ್ಲಿ ಹಾಸ್ಯಾಸ್ಪದ ಎನಿಸುತ್ತದೆ. ವಿವಿಧ ಹೊಸ ಅಭಿವೃದ್ಧಿ ಪರಿಕಲ್ಪನೆಗಳು ಇಂದು ಎಲ್ಲೆಡೆ ಬಹು ಚರ್ಚಿತವಾಗುತ್ತಿರುವ ವಿಷಯ. ಸಮತೋಲಿತ ಮತ್ತು ಸುಸ್ಥಿರ ಅಭಿವೃದ್ಧಿ ಇಂದು ನಮಗೆ ಬೇಕಾಗಿರುವ ಅಭಿವೃದ್ಧಿಯ ವಿಧಾನವಾಗಿದೆ ಮತ್ತು ಅಭಿವೃದ್ಧ್ದಿಯು ಮಾನವೀಯ ಮುಖಗಳನ್ನು ಹೊಂದಿರಬೇಕಾಗಿರುವುದು ಈ ಕ್ಷಣದ ಅವಶ್ಯಕತೆಯಾಗಿದೆ. ಪರಿಸರ, ಶಿಕ್ಷಣ, ಆರೋಗ್ಯ, ಮಾನವ ಹಕ್ಕುಗಳು ಇತ್ಯಾದಿ ನಮ್ಮ ಅಭಿವೃದ್ಧಿಯ ಅವಿಭಾಜ್ಯ ಅಂಗಗಳಾಗಿರ ಬೇಕಾಗಿರುವುದು ಇಂದು ತೀರ ಅವಶ್ಯಕವಾಗಿದೆ. ಮುಖ್ಯವಾಗಿ ಒಳಗೊಳ್ಳುವಿಕೆಯ ಬೆಳವಣಿಗೆಯ ಮೇಲೆ ದೇಶದ ಅಭಿವೃದ್ಧಿ ನೀತಿ ನಿರೂಪಣೆಗಳು ನಿಂತಿದೆ. ಇಂದು ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಬೇಕಾಗಿದೆ. ಇದು ಬಹಳ ಮುಖ್ಯ. ಭಾರತ ಅಭಿವೃದ್ಧಿ ಶೀಲ ದೇಶವಾಗಿರುವುದರಿಂದ ನಮ್ಮ ಅಭಿವೃದ್ಧಿ ನೀತಿ ನಿರೂಪಣೆಗಳು ಇನ್ನಷ್ಟು ಹೊಸ ಆಯಾಮಗಳನ್ನು ಪಡೆಯಬೇಕಾಗುತ್ತದೆ. ಭಾರತದ ಅಭಿವೃದ್ಧಿಯ ನೀತಿ ನಿರೂಪಣೆಗಳು ಒಂದು ರೀತಿಯಲ್ಲಿ ವೋಟ್ ಬ್ಯಾಂಕ್ ರಾಜಕೀಯದ ಮುಖವನ್ನು ಸದಾ ಹೋಲುವಂತೆ ಕಾಣುತ್ತದೆ ಎನ್ನುವ ಆರೋಪವಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಹಿಂದುಳಿದಿದೆ. ಸುಸ್ತಿರ ಅಭಿವೃದ್ಧಿಗೆ ನಾವು ಹೊಸ ಸಂಪನ್ಮೂಲಗಳನ್ನು ಕ್ರೋಡೀಕರಿಸ ಬೇಕಾಗುತ್ತದೆ. ಅಭಿವೃದ್ಧಿಯು ರಾಜಕೀಯದ ಕಬಂಧಬಾಹುಗಳನ್ನು ಬಿಡಿಸಿ ಮುನ್ನಡೆಯ ಬೇಕಾಗುತ್ತದೆ.

ಇಂದು ವಿಶ್ವದಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ಹೊಸ ಸಿದ್ಧಾಂತಗಳು, ಪರಿಕಲ್ಪನೆಗಳು ಮತ್ತು ವಿಧಾನಗಳು ಉದಯವಾಗಿದೆ. ಆದರೆ ಈ ಎಲ್ಲ ವಿಧಾನಗಳು ತಮ್ಮದೇ ಆದಂತಹ ಧನ ಮತು ಋಣಾತ್ಮಕ ಅಂಶಗಳನ್ನು ಒಳಗೊಂಡಿದೆ ಎನ್ನಬಹುದು. ಹೆಚ್ಚಿನ ಸಿದ್ಧಾಂತಗಳನ್ನು ಪಾಶ್ಚಿಮಾತ್ಯ ತಜ್ಞರು ಅಭಿವೃದ್ಧಿಪಡಿಸಿದ್ದಾರೆ. ಇದೇ ಇಲ್ಲಿಯ ಮುಖ್ಯ ಸಮಸ್ಯೆಯಾಗಿದೆ. ಇಂತಹ ಹೊಸ ಸಿದ್ಧಾಂತಗಳು ಮತ್ತು ಅಭಿವೃದ್ಧಿಯ ಮಾದರಿಗಳು ಭಾರತೀಯ ಬಹು ಸಂಸ್ಕೃತಿ ದೇಶಕ್ಕೆ ಹೊಂದಾಣಿಕೆ ಆಗುತ್ತಿದೆಯೇ ಇಲ್ಲವೇ ಎಂಬುದನ್ನು ನಾವು ಮೊದಲು ನಿರ್ಧರಿಸಬೇಕಾಗುತ್ತದೆ. ಇವುಗಳನ್ನು ನಮ್ಮ ಭಾರತೀಯ ಪರಿಸ್ಥಿತಿಗೆ ತಕ್ಕಂತೆ ಜಾರಿಗೆ ತರಲು ಸಾಕಷ್ಟು ಹೊಸ ಅಧ್ಯಯನ ನಡೆಸ ಬೇಕಾಗುತ್ತದೆ ಮತ್ತು ನಮಗೆ ಕ್ಷೇತ್ರ ಕಾರ್ಯಾಧಾರಿತ ದತ್ತಾಂಶಗಳ ಅವಶ್ಯಕತೆ ಇದೆ. ಅಭಿವೃದ್ಧಿಯ ನೀತಿ ನಿರೂಪಣೆಗಳು ಇನ್ನು ಮುಂದೆ ಇಂತಹ ದತ್ತಾಂಶಗಳ ಮೇಲೆ ಅವಲಂಬಿತವಾಗಿರುತ್ತವೆ. ಅಭಿವೃದ್ಧಿಯು ಇಂದು ಎಲ್ಲ ದೇಶಗಳಲ್ಲೂ ವಿವಿಧ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. 21ನೇ ಶತಮಾನದ ಆರಂಭದಲ್ಲಿರುವ ನಾವು ಇನ್ನು ಸಹ ಕೆಲವು ಮೂಲಭೂತ ವಿಚಾರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಬೇಕಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಗುಣಾತ್ಮಕ ಆರೋಗ್ಯ ಮತ್ತು ಶಿಕ್ಷಣ ನೀಡಬೇಕಾಗಿದೆ. ಮಾನವ ಅಭಿವೃದ್ಧಿಗೆ ಬೇಕಾದ ಇತರ ಬಹುಮುಖ್ಯ ಅವಶ್ಯಕತೆಗಳನ್ನು ಸರಕಾರಗಳು ಪೂರೈಸಬೇಕಾಗುತ್ತದೆ. ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಕಾಲದಲ್ಲಿ ತಲುಪಬೇಕಾಗುತ್ತದೆ. ಇದಕ್ಕೆ ಒಳಗೊಳ್ಳುವಿಕೆ ಬೆಳವಣಿಗೆ ಅವಶ್ಯಕವಾಗಿರುತ್ತದೆ. ಇದರಿಂದ ಮಾತ್ರ ಅಭಿವೃದ್ಧಿಯ ಫಲವನ್ನು ಎಲ್ಲರಿಗೂ ಸಮಾನವಾಗಿ ಹಂಚಲು ಸಾಧ್ಯವಾಗುತ್ತದೆ. ಅಭಿವೃದ್ಧಿಯ ನೀತಿ ನಿರೂಪಣೆಯಲ್ಲಿ ಉನ್ನತ ಶಿಕ್ಷಣದ ಕೇಂದ್ರವಾಗಿರುವ ವಿಶ್ವವಿದ್ಯಾನಿಲಯಗಳ ಪಾತ್ರ ಇಲ್ಲಿ ಅತಿ ಮುಖ್ಯವಾದದ್ದು.

ಅಭಿವೃದ್ಧಿ ನಿಂತ ನೀರಲ್ಲ, ಹರಿವ ನದಿಯಂತೆ. ಅಭಿವೃದ್ಧಿಯು ದೇಶದ ಸಾಮಾಜಿಕ ಮತ್ತು ಆಂತರಿಕವಾಗಿ ತನ್ನದೇ ಆದ ರೀತಿಯಲ್ಲಿ ಪರಿಣಾಮ ಬೀರುವ ಶಕ್ತಿಯನ್ನು ಹೊಂದಿದೆ. ಇಂದು ಅಭಿವೃದ್ಧಿಯ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿಶೇಷ ಕಾಳಜಿ ವಹಿಸುತ್ತಿವೆ. ಆದರೆ ಆ ಕಾಳಜಿಗಳು ಎಷ್ಟರ ಮಟ್ಟಿಗೆ ನಿಜ ಎಂಬುದು ನಾವು ಯೋಚಿಸಬೇಕಾದ ವಿಚಾರ. ಶಿಕ್ಷಣ, ಆರೋಗ್ಯ ಅಭಿವೃದ್ಧಿ ವ್ಯಾಪ್ತಿಯಲ್ಲಿ ಬರುವ ಮುಖ್ಯ ವಿಭಾಗಗಳಾಗಿವೆ. ಸಮತೋಲಿತ ಮತ್ತು ಸುಸ್ಥಿರ ಅಭಿವೃದ್ಧಿ ನಮ್ಮೆಲ್ಲರ ಆಯ್ಕೆ ಆಗಬೇಕಾಗುತ್ತದೆ. ಭಾರತದಂತಹ ರಾಷ್ಟ್ರಗಳಿಗೆ ತನ್ನದೇ ಆದಂತಹ ಅಭಿವೃದ್ಧಿಯ ವ್ಯಾಖ್ಯಾನ ನೀಡಬೇಕಾಗುತ್ತದೆ. ಇಂದು ಅಭಿವೃದ್ಧಿ ಮುಖಗಳು ಕೆಲವೊಮ್ಮೆ ಉತ್ತಮವಾಗಿ, ಕೆಲವೊಮ್ಮೆ ವಿಕೃತವಾಗಿ ಕಾಣುತ್ತಿದೆ. ಲಿಂಗ ತಾರತಮ್ಯ, ಒಳಗೊಳ್ಳುವಿಕೆ, ಬೆಳವಣಿಗೆ, ಆಹಾರ ಭದ್ರತೆ ಇಂದಿನ ಅಭಿವೃದ್ಧಿಯ ಅವಿಭಾಜ್ಯ ಅಂಗಗಳಾಗಿವೆ. ಅಭಿವೃದ್ಧಿ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗುತ್ತಿಲ್ಲ. ಕೆಲವು ಕಾಣದ ಶಕ್ತಿಗಳು ಇದಕ್ಕೆೆ ಅಡ್ಡಿ ಬರುತ್ತಿವೆ. ಕೇವಲ ಆರ್ಥಿಕ ಅಭಿವೃದ್ಧಿ ಮಾತ್ರ ಅಭಿವೃದ್ಧಿಯಲ್ಲ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಹ ಮುಖ್ಯ. ಅಭಿವೃದ್ಧಿಯ ಸಂಪನ್ಮೂಲವನ್ನು ತಳವರ್ಗಕ್ಕೆ ತ್ವರಿತವಾಗಿ ತಲುಪಿಸುವುದು ಇಂದು ಮುಖ್ಯವಾಗುತ್ತದೆ. ಬೆಳವಣಿಗೆ ವಿಚಾರಗಳು ಇಂದು ವಿವಿಧ ಆಯಾಮಗಳನ್ನು ಪಡೆದುಕೊಂಡಿದೆ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಳು ದೇಶದ ಬೆಳವಣಿಗೆಯಲ್ಲಿ ತೀರ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದರಿಂದ ನಾವು ವಿಶ್ವದಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ಅಭಿವೃದ್ಧಿಯು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿದಾಗ ಮಾತ್ರ ಅದಕ್ಕೊಂದು ಅರ್ಥ ಬರಲು ಸಾಧ್ಯ.

 ನಮ್ಮ ಅಂಚಿನ ಜನಾಂಗಗಳ ಇತಿಹಾಸ ಎಷ್ಟು ದೊಡ್ಡದೋ ಅವುಗಳ ಸಮಸ್ಯೆಗಳಿಗೆ ಅಷ್ಟೇ ದೊಡ್ಡ ಇತಿಹಾಸವಿದೆ. ಇವರ ಗಣತಿ ಮತ್ತು ಮೀಸಲಾತಿ ವಿಚಾರದಲ್ಲಿ ಉಂಟಾಗಿರುವ ಅದ್ವಾನಗಳಿಗೆ ಕೊನೆ ಮೊದಲಿಲ್ಲ. ಕೆಲವು ಸಮುದಾಯಗಳಿಗೆ ಇಂದಿಗೂ ಸರಿಯಾದ ನೆಲೆ ಸಿಕ್ಕಿಲ್ಲ. ಬಹುಶಃ ಮುಂದೆ ಸಿಗುವುದು ಸಹ ಅನುಮಾನವೇ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅಂಚಿನ ಜನರು ಅಂದರೆ ಸಾಮಾಜಿಕವಾಗಿ ಹೊರಗುಳಿದ ಸಮುದಾಯಗಳ ಜನರ ಬದುಕು ಇನ್ನೂ ಸಹ ಹಸನಾಗಿಲ್ಲ. ಇವರಿಗೆ ಸರಕಾರಗಳ ಅಥವಾ ಮುಂದುವರಿದ ಸಮುದಾಯಗಳ ಬೆಂಬಲ ಸಂಪೂರ್ಣವಾಗಿ ಸಿಗುತ್ತಿಲ್ಲ ಎಂಬ ಆರೋಪವಿದೆ. ಹೆಚ್ಚಿನ ಜನರಿಗೆ ಊರಿಂದ ಊರಿಗೆ ಅಲೆಯುವುದೇ ಇವರ ಮುಖ್ಯ ಕಸುಬಾಗಿದೆ. ಇವರ ಸಂಸ್ಕೃತಿ ಯಾರಿಗೂ ಸಹ ನೆನಪಿಲ್ಲ. ಇವರಿಗೆ ಹೇಳಿಕೊಳ್ಳುವಂತಹ ವೃತ್ತಿ ಇಲ್ಲ, ಸಾಮಾಜಿಕ, ಆರ್ಥಿಕವಾಗಿ ಇವರು ತೀರಾ ಹಿಂದುಳಿದಿದ್ದಾರೆ. ಇಂತಹ ನೂರಾರು ಸಮುದಾಯಗಳು ತಮ್ಮ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಮುಂದಿನ ಪೀಳಿಗೆಗೆ ಸಾಗಿಸಲು ಇಂದಿಗೂ ಹೆಣಗಾಡುತ್ತಿವೆ. ರಾಜ್ಯದಾದ್ಯಂತ ಚದುರಿ ಹೋಗಿರುವ ಈ ಜನಗಳಿಗೆ ರಾಜಕೀಯ ಸಂಘಟನೆ ಕೇವಲ ಕನಸಿನ ಮಾತು.

 ಅಂಚಿನ ಸಮುದಾಯ ಇಂದು ಎಲ್ಲಾ ರಂಗಗಳಲ್ಲೂ ಹಿಂದುಳಿದಿವೆೆ. ಇವರಲ್ಲಿ ಇರುವ ಸಣ್ಣ-ಪುಟ್ಟ ಸಂಘಟನೆಗಳು ಸಹ ಅಷ್ಟಾಗಿ ಇನ್ನು ಸಕ್ರಿಯವಾಗಿಲ್ಲ. ಅಭಿವೃದ್ಧಿಯ ಫಲ ಇವರಿಗೆ ಇನ್ನೂ ದೊರಕಿಲ್ಲ. ಇವರು ಶತಮಾನಗಳಿಂದ ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದಿದ್ದಾರೆ. ಹೆಚ್ಚಿನ ಅಂಚಿನ ಜನರು ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ ಎನ್ನುವುದೇ ಆಶ್ಚರ್ಯ. ಇವರ ಸಾಕ್ಷರತೆ ಪ್ರಮಾಣ ತೀರಾ ಕಡಿಮೆ ಇದೆ. ಇತ್ತೀಚಿನ ದಿನಗಳಲ್ಲಿ ಮಾತ್ರ ಈ ಸಮುದಾಯದ ಮಕ್ಕಳು ಶಾಲೆಯ ಮುಖ ನೋಡುತ್ತಿದ್ದಾರೆ. ಕೆಲವು ಅಂಚಿನ ಸಮುದಾಯಗಳಿಗೆ ನಿರ್ದಿಷ್ಟ ಹೆಸರು, ಊರು, ಕೇರಿ, ಮನೆ ಮತ್ತು ಸರಿಯಾದ ವಿಳಾಸ ಸಹ ಇಲ್ಲ. ಅವುಗಳ ಅಸ್ಮಿತೆಯ ಬಗ್ಗೆ ಬಹಳ ದೊಡ್ಡ ಪ್ರಶ್ನೆ ನಮ್ಮ ನಾಗರಿಕ ಸಮಾಜದ ಮುಂದೆ ಇಂದು ಭೂತಾಕಾರದಂತೆ ನಿಂತಿದೆ. ಒಂದೆಡೆ ನಾವು ಅಭಿವೃದ್ಧಿಯ ಪಥದಲ್ಲಿ ವಾಯು ವೇಗದಲ್ಲಿ ಸಾಗುತ್ತಿದ್ದರೆ ಇನ್ನೊಂದೆಡೆ ನಮ್ಮದೇ ಸಮಾಜದ ಒಂದು ವರ್ಗ ಊರು ಊರು ಅಲೆಯುತ್ತಾ ನೆಲೆ ಇಲ್ಲದ ಬದುಕು ನಡೆಸುವ ದುಸ್ಥಿತಿಯಲ್ಲಿದೆ ಎಂದರೆ ನಾವು ನಂಬಲೇ ಬೇಕು. ಒಳಗೊಳ್ಳುವಿಕೆ ಬೆಳವಣಿಗೆಯಿಂದ ಈ ಸಮುದಾಯಗಳು ವಂಚಿತಗೊಂಡಿವೆ. ಇಂತಹ ಹತ್ತು ಹಲವಾರು ಸಮುದಾಯಗಳ ತ್ವರಿತ ಅಭಿವೃದ್ಧಿಗೆ ಸರಕಾರ ಗಮನ ನೀಡಬೇಕಿದೆ.

ಇಂದು ನಮ್ಮ ದೇಶದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಹೊಸ ಆರ್ಥಿಕ ನೀತಿಯ ಪರಿಣಾಮವಾಗಿ ಮತ್ತು ಜಾಗತೀಕರಣದಿಂದ ನಿರುದ್ಯೋಗ, ಏರುತ್ತಿರುವ ಬೆಲೆಗಳು, ಪ್ರಜ್ವಲಿಸುತ್ತಿರುವ ಸಮಸ್ಯೆಗಳು ಇವು ಎಲ್ಲಾ ವರ್ಗದ ಜನರನ್ನು ಕಾಡುತ್ತಿವೆ. ಅದರಲ್ಲಿಯೂ ಆರ್ಥಿಕ ನೀತಿಯ ಹೊಡೆತ ಅಂಚಿನ ಜನರ ಮೇಲೆ ನೇರವಾದ ಪ್ರಭಾವ ಬೀರುತ್ತಿವೆ. ಹಾಗೆಯೇ ಉದಾರೀಕರಣದ ಫಲವಾಗಿ ಜಾರಿಗೆ ಬಂದಿರುವ ಖಾಸಗೀಕರಣ ಹೆಚ್ಚು ಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳನ್ನು ಸಮಾಜದ ಅಂಚಿಗೆ ತಳ್ಳುತ್ತಿವೆ. ಈ ಕಾರಣದಿಂದಲೇ ಹೆಚ್ಚಿನ ಸಮುದಾಯಗಳು ಅಸಂಘಟಿತ ವಲಯಕ್ಕೆ ತಳ್ಳಲ್ಪಡುತ್ತಿದ್ದಾರೆ. ಸ್ವತಂತ್ರ ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡು ಅನುಸರಿಸುತ್ತಾ ಬರುತ್ತಿದ್ದರೂ ದೇಶದ ಗ್ರಾಮಾಂತರ ಪ್ರದೇಶಗಳು ಇಂದಿಗೂ ಹಿಂದುಳಿದಿವೆ. ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಜತೆಗೆ ಗ್ರಾಮೀಣ ಸಮುದಾಯದ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವ ಗಾಢ ಚಿಂತನೆ ಅಂದೇ ಮಾಡಿದ್ದರೂ ಯಾವುದು ಸಹ ಸರಿಯಾಗಿ ಇನ್ನೂ ಜಾರಿಗೆ ಬರಲಿಲ್ಲ. ಹೀಗಾಗಿ ನಾವು ಗ್ರಾಮೀಣ ಮತ್ತು ಆದಿವಾಸಿಗಳ ಅಭಿವೃದ್ಧಿಗಾಗಿ ಹೊಸ ಆದರ್ಶಗ್ರಾಮ ಪರಿಕಲ್ಪನೆಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸಬೇಕಾಗಿದೆ.

ಇಂದಿಗೂ ಭಾರತದಲ್ಲಿ ಹೆಚ್ಚಿನ ಗ್ರಾಮೀಣ ಜನರು ಶೋಷಣೆ, ಕೃಷಿರಂಗದ ಸಮಸ್ಯೆಗಳು, ಉದ್ಯೋಗಾವಕಾಶಗಳ ಕೊರತೆ, ದುರ್ಬಲರಿಗೆ ಅವಕಾಶಗಳ ಕೊರತೆ, ಅಪೌಷ್ಟಿಕತೆ, ಬಡತನ, ಅನಾರೋಗ್ಯ, ಅನೈರ್ಮಲ್ಯ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮೂಲತಃ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಅಭಿವೃದ್ಧಿ ಕುಂಠಿತವಾಗಿದೆ. ಅಸಂಘಟಿತ ವಲಯಗಳಲ್ಲಿ ತೊಡಗಿರುವಂತಹ ಕಾರ್ಮಿಕರಿಗೆ ಸರಕಾರಗಳು ಸಂವಿಧಾನಾತ್ಮಕವಾಗಿ ರಕ್ಷಣೆ ನೀಡುವಲ್ಲಿ ಸಂಪೂರ್ಣ ಸೋತಿವೆ. ಅದರ ಜೊತೆಗೆ ಖಾಸಗಿ ಬಂಡವಾಳ ಶಾಹಿಗಳು ತಮ್ಮ ಗೋಮುಖ ವ್ಯಾಘ್ರ ಬುದ್ಧಿವಂತಿಕೆಯಿಂದ ಬಡ ಜನರನ್ನು ಶೋಷಣೆ ಮಾಡುತ್ತಿರುವುದನ್ನು ನಾವು ಕಾಣಬಹುದು. ಒಂದೇ ಉದ್ದೇಶಕ್ಕಾಗಿ ಒಗ್ಗೂಡಿ ತಮ್ಮ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳುವ ಸಾಮರ್ಥ್ಯ ಇಲ್ಲದವರ ಅಂಚಿನ ಜನರು ಇಂದು ತಮ್ಮ ಸಂಸ್ಕೃತಿಯಿಂದ, ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿದ್ದಾರೆ.

Writer - ಡಾ. ಡಿ. ಸಿ. ನಂಜುಂಡ, ಮೈಸೂರು

contributor

Editor - ಡಾ. ಡಿ. ಸಿ. ನಂಜುಂಡ, ಮೈಸೂರು

contributor

Similar News