49 ಗಣ್ಯರ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣ ರದ್ದು: ದೂರುದಾರನ ವಿರುದ್ಧವೇ ಪ್ರಕರಣ

Update: 2019-10-09 17:48 GMT

ಪಾಟ್ನಾ,ಅ.9: ಗುಂಪುಗಳಿಂದ ಮುಸ್ಲಿಮರು,ದಲಿತರು ಮತ್ತು ಇತರ ಅಲ್ಪಸಂಖ್ಯಾತರ ಹತ್ಯೆಗಳನ್ನು ನಿಲ್ಲಿಸುವಂತೆ ಆಗ್ರಹಿಸಿ ಕಳೆದ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರವನ್ನು ಬರೆದಿದ್ದ 49 ಗಣ್ಯರ ವಿರುದ್ಧದ ದೇಶದ್ರೋಹ ಪ್ರಕರಣಕ್ಕೆ ಇತಿಶ್ರೀ ಹಾಡಲು ಬಿಹಾರ ಪೊಲೀಸರು ನಿರ್ಧರಿಸಿದ್ದಾರೆ. ಕ್ಷುಲ್ಲಕ ದೂರುಗಳನ್ನು ಸಲ್ಲಿಸುತ್ತಿರುವುದಕ್ಕಾಗಿ ದೂರುದಾರ,ನ್ಯಾಯವಾದಿ ಸುಧೀರ್ ಓಝಾ ವಿರುದ್ಧವೇ ಪ್ರಕರಣವನ್ನು ದಾಖಲಿಸಿಕೊಳ್ಳಲು ಪೊಲೀಸರೀಗ ಮುಂದಾಗಿದ್ದಾರೆ.

ನಟಿ-ನಿರ್ದೇಶಕಿ ಅಪರ್ಣಾ ಸೇನ್,ಲೇಖಕ ರಾಮಚಂದ್ರ ಗುಹಾ,ನಿರ್ದೇಶಕರಾದ ಶ್ಯಾಮ ಬೆನೆಗಲ್ ಮತ್ತು ಅಡೂರು ಗೋಪಾಲಕೃಷ್ಣನ್ ಸೇರಿದಂತೆ ಗಣ್ಯರ ವಿರುದ್ಧ ಬಿಹಾರ ಪೊಲೀಸರು ಕಳೆದ ವಾರ ದೇಶದ್ರೋಹ ಪ್ರಕರಣವನ್ನು ದಾಖಲಿಸಿಕೊಂಡಿದ್ದು,ಇದು ಭಾರೀ ವಿವಾದವನ್ನು ಸೃಷ್ಟಿಸಿತ್ತು.

ಜಿಲ್ಲಾ ಪೊಲೀಸ್ ಮುಖ್ಯಸ್ಥರು ಪ್ರಕರಣವನ್ನು ‘ದುರುದ್ದೇಶಪೂರಿತ ಸುಳ್ಳು’ಎಂದು ಬಣ್ಣಿಸಿದ್ದಾರೆ ಮತ್ತು ಪ್ರಕರಣವನ್ನು ಮುಚ್ಚುವಂತೆ ಹಾಗೂ ಯಾವುದೇ ಕಾರಣವಿಲ್ಲದೆ ಸುಳ್ಳು ಪ್ರಕರಣ ದಾಖಲಿಸಿದ್ದಕ್ಕಾಗಿ ದೂರುದಾರನ ವಿರುದ್ಧ ಕ್ರಮವನ್ನು ಕೈಗೊಳ್ಳಲು ಶಿಫಾರಸು ಮಾಡಿದ್ದಾರೆ. ಕೇವಲ ಪ್ರಚಾರಕ್ಕಾಗಿ ಈ ಪ್ರಕರಣವನ್ನ್ನು ದಾಖಲಿಸಲಾಗಿತ್ತು ಎಂದು ಪೊಲೀಸ್ ವಕ್ತಾರ ಜಿತೇಂದ್ರ ಕುಮಾರ ಅವರು ಬುಧವಾರ ಸುದ್ದಿಸಂಸ್ಥೆಗೆ ತಿಳಿಸಿದರು. ತನಿಖಾಧಿಕಾರಿಗಳು ಒಂದೆರಡು ದಿನಗಳಲ್ಲಿ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಿದ್ದಾರೆ ಎಂದರು.

ಓಝಾ ರಾಮವಿಲಾಸ ಪಾಸ್ವಾನ್ ಅವರ ಎಲ್‌ಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆೆ. ಎಲ್‌ಜೆಪಿ ಎನ್‌ಡಿಎದ ಪಾಲುದಾರ ಪಕ್ಷವಾಗಿರುವುದರಿಂದ ಪ್ರಕರಣವು ಬಿಹಾರದ ನಿತೀಶ್ ಕುಮಾರ್ ಸರಕಾರಕ್ಕೆ ಮುಜುಗರವನ್ನುಂಟು ಮಾಡಿತ್ತು ಎನ್ನಲಾಗಿದೆ.

 ಯಾವುದೇ ವ್ಯಕ್ತಿಯ ವಿರುದ್ಧ ಮತ್ತು ಪ್ರತಿಯೊಬ್ಬ ಪ್ರತಿಷ್ಠಿತರ ವಿರುದ್ಧ ಕ್ಷುಲ್ಲಕ ದೂರುಗಳನ್ನು ದಾಖಲಿಸುವುದು ಓಝಾರ ಗೀಳಾಗಿದ್ದು,ತಾನೂ ಇದಕ್ಕೆ ಬಲಿಪಶುವಾಗಿದ್ದೇನೆ ಎಂದು ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಅವರು ಬುಧವಾರ ಇಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಓಝಾ ಕೇವಲ ಪ್ರಚಾರಕ್ಕೋಸ್ಕರ ಪತ್ರಿಕಾ ವರದಿಗಳ ಆಧಾರದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ನಟ ಅಮಿತಾಭ್ ಬಚ್ಚನ್‌ರಂತಹ ಪ್ರತಿಷ್ಠಿತರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಾರೆ ಎಂದಿರುವ ಮೋದಿ,ಈ ವಿಷಯದಲ್ಲಿ ಬಿಜೆಪಿ ಅಥವಾ ಆರೆಸ್ಸೆಸ್‌ನ್ನು ಎಳೆದು ತರುವುದು ಅಥವಾ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಳ್ಳುವದು ತಪ್ಪು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News