ಸಿರಿಯದಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿದ ಟರ್ಕಿ

Update: 2019-10-09 15:44 GMT

ಇಸ್ತಾಂಬುಲ್ (ಟರ್ಕಿ), ಅ. 9: ಟರ್ಕಿ ಬುಧವಾರ ಉತ್ತರ ಸಿರಿಯದಲ್ಲಿರುವ ಕುರ್ದ್ ಬಂಡುಕೋರರ ನೆಲೆಗಳ ಮೇಲೆ ವಾಯು ದಾಳಿ ನಡೆಸಿದೆ ಹಾಗೂ ಗಡಿ ಭಾಗದಲ್ಲಿ ಸ್ಫೋಟಗಳ ಸದ್ದು ಕೇಳಿವೆ.

ಕುರ್ದ್ ಬಂಡುಕೋರರ ವಿರುದ್ಧ ದಾಳಿ ಆರಂಭವಾಗಿರುವುದನ್ನು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಟ್ವಿಟರ್‌ನಲ್ಲಿ ಘೋಷಿಸಿದರು. ಅವರು ಈ ಕಾರ್ಯಾಚರಣೆಯನ್ನು 'ಆಪರೇಶನ್ ಪೀಸ್ ಸ್ಪ್ರಿಂಗ್' ಎಂದು ಹೆಸರಿಸಿದರು.

ಕೆಲವೇ ಕ್ಷಣಗಳ ಬಳಿಕ, ರಾಸ್ ಅಲ್-ಐನ್ ಗಡಿ ಪ್ರದೇಶದಲ್ಲಿ ಬಿಳಿ ಹೊಗೆಯ ದಟ್ಟ ಮೋಡಗಳು ಮೇಲೆದ್ದವು ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿಗಾರರೊಬ್ಬರು ವರದಿ ಮಾಡಿದರು. ಆಕಾಶದಲ್ಲಿ ಯುದ್ಧವಿಮಾನಗಳು ಹಾರಾಡುವುದನ್ನು ಕಾಣಬಹುದಾಗಿದೆ ಎಂದು ಅವರು ಹೇಳಿದರು.

''ನಮ್ಮ ದಕ್ಷಿಣದ ಗಡಿಯಾಚೆ ಭಯೋತ್ಪಾದನೆಯ ಕಾರಿಡಾರೊಂದು ನಿರ್ಮಾಣಗೊಳ್ಳುವುದನ್ನು ತಡೆಯಲು ನಾವು ಈ ಕಾರ್ಯಾಚರಣೆಗೆ ಇಳಿದಿದ್ದೇವೆ'' ಎಂದು ಎರ್ದೊಗಾನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ. ''ಈ ಕಾರ್ಯಾಚರಣೆಯ ವೇಳೆ, ಕುರ್ದಿಶ್ ಭಯೋತ್ಪಾದಕರು ಮತ್ತು ಇಸ್ಲಾಮಿಕ್ ಸ್ಟೇಟ್ ಗುಂಪನ್ನು ದಮನಿಸಲಾಗುವುದು'' ಎಂದರು.

ತಾಲ್ ಅಬ್ಯಾದ್ ಎಂಬ ಗಡಿ ಪಟ್ಟಣದಲ್ಲಿ ಕುರ್ದಿಶ್ ಬಂಡುಕೋರರ ನೆಲೆಗಳ ಮೇಲೆ ಶೆಲ್ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಟರ್ಕಿಯ ಸುದ್ದಿ ಸಂಸ್ಥೆ ಅನಡೊಲು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News