ಗುಡೆನಫ್, ವಿಟಿಂಗ್‌ಹ್ಯಾಮ್, ಯೋಷಿನೊರಿಗೆ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ

Update: 2019-10-09 16:30 GMT

ಸ್ಟಾಕ್‌ಹೋಮ್,ಅ.9: ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಲೀಥಿಯಂ-ಅಯಾನ್ ಬ್ಯಾಟರಿಯನ್ನು ಅಭಿವೃದ್ಧಿಗೊಳಿಸಿದ್ದಕ್ಕಾಗಿ ಜಾನ್ ಬಿ.ಗುಡೆನಫ್,ಎಂ.ಸ್ಟಾನ್ಲಿ ವಿಟಿಂಗ್‌ಹ್ಯಾಮ್ ಮತ್ತು ಅಕಿರಾ ಯೋಷಿನೊ ಅವರಿಗೆ ರಸಾಯನ ಶಾಸ್ತ್ರದಲ್ಲಿ 2019ನೇ ಸಾಲಿನ ನೊಬೆಲ್ ಪ್ರಶಸ್ತಿಗಳನ್ನು ಬುಧವಾರ ಘೋಷಿಸಿದೆ.

ಇದರೊಂದಿಗೆ ಗುಡೆನಫ್ (97) ಅತ್ಯಂತ ಹಿರಿಯ ನೊಬೆಲ್ ಪ್ರಶಸ್ತಿ ಪುರಸ್ಕೃತರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1970ರ ದಶಕದ ಆದಿಯಲ್ಲಿ ವಿಟಿಂಗ್‌ ಹ್ಯಾಮ್ ಅವರು ಮೊದಲ ಬಾರಿಗೆ ಕಾರ್ಯಸಾಧ್ಯ ಲೀಥಿಯಂ ಬ್ಯಾಟರಿಯನ್ನು ಅಭಿವೃದ್ಧಿಗೊಳಿಸಿದ್ದರೆ,ಗುಡೆನಫ್ ಅವರು ಲೀಥಿಯಂ ಬ್ಯಾಟರಿಯ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸುವ ಮೂಲಕ ಹೆಚ್ಚು ಶಕ್ತಿಶಾಲಿ ಮತ್ತು ಉಪಯೋಗಿ ಬ್ಯಾಟರಿಗಾಗಿ ಸೂಕ್ತ ಸ್ಥಿತಿಯನ್ನು ಸೃಷ್ಟಿಸಿದ್ದರು. ಯೋಷಿನೊ ಅವರು ಬ್ಯಾಟರಿಯಲ್ಲಿನ ಶುದ್ಧ ಲೀಥಿಯಂ ಅನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಅಕಾಡೆಮಿಯು ತಿಳಿಸಿದೆ.

ವಿಟಿಂಗ್‌ಹ್ಯಾಮ್ ಅವರು ಅಮೆರಿಕದ ನ್ಯೂಯಾರ್ಕ್‌ನ ಬಿಂಘ್ಯಾಮ್ಟನ್ ಯುನಿವರ್ಸಿಟಿ, ಗುಡೆನಫ್ ಅವರು ಆಸ್ಟಿನ್‌ನ ಯುನಿವರ್ಸಿಟಿ ಆಫ್ ಟೆಕ್ಸಾಸ್ ಮತ್ತು ಯೋಷಿನೊ ಅವರು ಜಪಾನಿನ ಟೋಕಿಯೊದ ಅಸಾಹಿ ಕಾಸೀ ಕಾರ್ಪೊರೇಷನ್ ಮತ್ತು ನಗೋಯಾದ ಮೀಜೊ ವಿವಿಯೊಂದಿಗೆ ಗುರುತಿಸಿಕೊಂಡಿದ್ದಾರೆ.

ಇದರೊಂದಿಗೆ 1901ರಿಂದ 184 ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ರಸಾಯನ ಶಾಸ್ತ್ರದಲ್ಲಿ 111 ನೋಬೆಲ್ ಪ್ರಶಸ್ತಿಗಳನ್ನು ನೀಡಿದಂತಾಗಿದೆ. ಮೇರಿ ಕ್ಯೂರಿ ಅವರು ರಸಾಯನ ಶಾಸ್ತ್ರದಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಎರಡು ನೋಬೆಲ್ ಪ್ರಶಸ್ತಿಗಳಿಗೆ ಭಾಜನರಾದ ಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು ಮೊದಲು ವಿಕಿರಣ ಕ್ಷೇತ್ರದಲ್ಲಿ ತನ್ನ ಕಾರ್ಯಕ್ಕಾಗಿ ಭೌತಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರವನ್ನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News