ಜಮ್ಮು ಕಾಶ್ಮೀರದ ನಾಯಕರ ಗೃಹಬಂಧನಕ್ಕೆ ವಿರೋಧ: ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾಂಗ್ರೆಸ್ ಬಹಿಷ್ಕಾರ

Update: 2019-10-09 18:10 GMT

ಹೊಸದಿಲ್ಲಿ, ಅ.9: ಕಾಶ್ಮೀರ ಕಣಿವೆಯಲ್ಲಿ ಹಿರಿಯ ರಾಜಕೀಯ ಮುಖಂಡರ ಗೃಹಬಂಧನ ವಿರೋಧಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ಪ್ರದೇಶ ಅಭಿವೃದ್ಧಿ ಸಮಿತಿ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ ಸ್ಥಿತಿ ನೆಲೆಸುವಂತಾಗಲು ಹಾಗೂ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಚಾಲನೆ ನೀಡಲು ಪ್ರದೇಶಾಭಿವೃದ್ಧಿ ಸಮಿತಿಗಳಿಗೆ ಅಕ್ಟೋಬರ್ 24ರಂದು ಚುನಾವಣೆ ನಡೆಸುವುದಾಗಿ ಕೇಂದ್ರ ಸರಕಾರ ಘೋಷಿಸಿದೆ. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಸದೃಢಗೊಳಿಸುವ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ಗೆ ನಂಬಿಕೆಯಿದೆ ಮತ್ತು ಯಾವತ್ತೂ ಚುನಾವಣೆ ಎದುರಿಸಲು ಹಿಂಜರಿಯುವುದಿಲ್ಲ. ಆದರೆ ಕೇಂದ್ರ ಸರಕಾರದ ನಿರ್ಲಕ್ಷದ ಧೋರಣೆ ಹಾಗೂ ಪ್ರಮುಖ ನಾಯಕರ ಗೃಹಬಂಧನ ವಿರೋಧಿಸಿ ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿಎ ಮೀರ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿಯ ಪ್ರಮುಖ ನಾಯಕರನ್ನು ಗೃಹಬಂಧನದಲ್ಲಿ ಇರಿಸಿರುವುದನ್ನು ಖಂಡಿಸಿ ಈ ಎರಡು ಪಕ್ಷಗಳು ಈಗಾಗಲೇ ಚುನಾವಣೆ ಬಹಿಷ್ಕರಿಸುವುದಾಗಿ ಘೋಷಿಸಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ರಾಜ್ಯದಲ್ಲಿ 400ಕ್ಕೂ ಅಧಿಕ ಮುಖಂಡರನ್ನು ಬಂಧಿಸಲಾಗಿದೆ ಅಥವಾ ಗೃಹಬಂಧನದಲ್ಲಿಡಲಾಗಿದೆ. ಸೆ.29ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದ ಬಳಿಕ ಹೇಳಿಕೆ ನೀಡಿದ್ದ ರಾಜ್ಯಾಡಳಿತ, ಬಂಧನದಲ್ಲಿರುವ ಎಲ್ಲಾ ರಾಜಕೀಯ ಮುಖಂಡರನ್ನು ಹಂತ ಹಂತವಾಗಿ ಬಿಡುಗಡೆಗೊಳಿಸುವುದಾಗಿ ತಿಳಿಸಿತ್ತು. ಆದರೆ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಯಾವಾಗ ಬಿಡುಗಡೆಯಾಗುತ್ತಾರೆ ಎಂಬ ಬಗ್ಗೆ ರಾಜ್ಯಾಡಳಿತ ತುಟಿ ಬಿಚ್ಚಿಲ್ಲ. ಜಮ್ಮು ಮತ್ತು ಕಾಶ್ಮೀರ ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು 12000 ಸ್ಥಾನಗಳು ಖಾಲಿಯಿದ್ದು ಈ ಸ್ಥಾನಗಳಿಗೆ ಅಕ್ಟೋಬರ್ 24ರಂದು ಚುನಾವಣೆ ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News