ಬಿಎಸ್ಸೆನ್ನೆಲ್ ಉಳಿವಿಗೆ ಪುನಶ್ಚೇತನ ಪ್ಯಾಕೇಜ್ ಘೋಷಿಸಿ: ಮೋದಿಗೆ ನೌಕರರ ಒತ್ತಾಯ

Update: 2019-10-10 14:26 GMT

ಹೊಸದಿಲ್ಲಿ, ಅ.10: ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಸಂಸ್ಥೆಯನ್ನು ಮುಚ್ಚಲು ಸರಕಾರ ನಿರ್ಧರಿಸಿದೆ ಎಂಬ ವರದಿಯ ಹಿನ್ನೆಲೆಯಲ್ಲಿ, ಬಿಎಸ್ಸೆಎನ್ನೆಲ್ ಸಂಸ್ಥೆಯನ್ನು ಉಳಿಸಲು ರೂಪಿಸಿರುವ ಪುನಶ್ಚೇತನ ಪ್ಯಾಕೇಜ್‌ಗೆ ಅನುಮೋದನೆ ನೀಡಬೇಕೆಂದು ಸಂಸ್ಥೆಯ ಉದ್ಯೋಗಿಗಳು ಪ್ರಧಾನಿ ನರೇಂದ್ರ ಮೋದಿಯನ್ನು ಒತ್ತಾಯಿಸಿದ್ದಾರೆ.

ಮುಂದಿನ ನಾಲ್ಕರಿಂದ ಐದು ವರ್ಷಗಳ ಅವಧಿಯಲ್ಲಿ ಬಿಎಸ್ಸೆನ್ನೆಲ್ ಮತ್ತೆ ಚೇತರಿಸಿಕೊಳ್ಳಲಿದೆ ಎಂದು ಟೆಲಿಕಮ್ಯುನಿಕೇಷನ್ ಇಲಾಖೆ ಅಂದಾಜಿಸಿದ್ದು ಈ ನಿಟ್ಟಿನಲ್ಲಿ ಇಲಾಖೆ ರೂಪಿಸಿರುವ ಹಣ ಪೂರೈಕೆ ಯೋಜನೆಗೆ ಪ್ರಧಾನಿ ಅನುಮೋದನೆ ನೀಡಬೇಕು. ಬಿಎಸ್ಸೆನ್ನೆಲ್ ಖಂಡಿತಾ ಚೇತರಿಸಲಿದೆ ಎಂದು ಉದ್ಯೋಗಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಳಂಬ ಮಾಡದೆ ಹಣ ಪೂರೈಕೆ ಯೋಜನೆಗೆ ಅನುಮೋದನೆ ನೀಡಬೇಕೆಂದು ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿರುವುದಾಗಿ ಸಂಚಾರ ನಿಗಮ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಸೆಬಾಸ್ಟಿಯನ್ ಹೇಳಿದ್ದಾರೆ. ಅಲ್ಲದೆ ಪ್ರಸ್ತಾವಿತ ವಿಆರ್‌ಎಸ್(ಸ್ವಯಂ ನಿವೃತ್ತಿ ಯೋಜನೆ) ಯೋಜನೆಯಲ್ಲಿ 10 ವರ್ಷದ ಬಾಂಡ್ ಮೂಲಕ ಉದ್ಯೋಗಿಗಳಿಗೆ ಹಣ ಪಾವತಿಸಬಹುದು ಎಂದೂ ಅವರು ತಿಳಿಸಿದ್ದಾರೆ.

ಬಿಎಸ್ಸೆನ್ನೆಲ್‌ನ 1.70 ಲಕ್ಷಕ್ಕೂ ಅಧಿಕ ಉದ್ಯೋಗಿಗಳಲ್ಲಿ ಅರ್ಧಾಂಶದಷ್ಟು ಉದ್ಯೋಗಿಗಳು ಮುಂದಿನ ಐದು ಅಥವಾ ಆರು ವರ್ಷದಲ್ಲಿ ನಿವೃತ್ತರಾಗಲಿದ್ದಾರೆ. ಇವರಿಗೆ ವಿಆರ್‌ಎಸ್ ಯೋಜನೆ ರೂಪಿಸಿ ಉಳಿದ ಹಣವನ್ನು ಸಂಸ್ಥೆಯ ಪುನಶ್ಚೇತನಕ್ಕೆ ಬಳಸಬಹುದು ಎಂದು ಸೆಬಾಸ್ಟಿಯನ್ ಹೇಳಿದ್ದಾರೆ. ಆದರೆ ಬಿಎಸ್ಸೆನ್ನೆಲ್ ಹಾಗೂ ಎಂಟಿಎನ್‌ಎಲ್ ಮುಚ್ಚುವ ನಿರ್ಧಾರಕ್ಕೆ ಬಂದಿರುವ ಸರಕಾರ ಪುನಶ್ಚೇತನ ಪ್ಯಾಕೇಜ್ ಬಗ್ಗೆ ಒಲವು ಹೊಂದಿಲ್ಲ ಎಂದು ಕೆಲವು ವರದಿಗಳು ತಿಳಿಸಿವೆ. ರಿಲಯನ್ಸ್ ಜಿಯೊ, ಏರ್‌ಟೆಲ್ ಹಾಗೂ ಇತರ ಟೆಲಿಕಾಂ ಸಂಸ್ಥೆಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಬಿಎಸ್ಸೆನ್ನೆಲ್ ಹಾಗೂ ಎಂಟಿಎನ್ನೆಲ್ 2018-19ರಲ್ಲಿ ಅಂದಾಜು 14,000 ಕೋಟಿ ರೂ. ನಷ್ಟ ಅನುಭವಿಸಿದ್ದು ಕಳೆದ 4 ವರ್ಷಗಳಲ್ಲಿ ಸುಮಾರು 32000 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ವೇತನ ಪಾವತಿಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಸ್ಸೆನ್ನೆಲ್ ಮತ್ತು ಎಂಟಿಎನ್ನೆಲ್ ಸಿಬಂದಿಗಳು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ ಎಂದು ನೌಕರರ ಯೂನಿಯನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News