ಹದಿಹರೆಯದ ಮಕ್ಕಳ ಆತ್ಮಹತ್ಯೆ ತಡೆಯಲು ಕೆಲವು ಟಿಪ್ಸ್ ಇಲ್ಲಿವೆ

Update: 2019-10-12 16:04 GMT

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಪ್ರತಿ ವರ್ಷ ಎಂಟು ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ,ಅಂದರೆ ಪ್ರತಿ 40 ಸೆಕೆಂಡ್‌ಗಳಿಗೆ ಓರ್ವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಯುವಜನರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ತ್ವರಿತವಾಗಿ ಹೆಚ್ಚುತ್ತಿರುವುದು ಅಚ್ಚರಿಯ ವಿಷಯವಾಗಿದೆ. ಅಲ್ಲದೆ ಪ್ರಚಲಿತ ಜೀವನಶೈಲಿ ಮತ್ತು ಒತ್ತಡಗಳಿಂದಾಗಿ ಹದಿಹರೆಯದವರು ಮತ್ತು ಯುವಜನರು ಆತ್ಮಹತ್ಯೆ ಮಾಡಿಕೊಳ್ಳುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. 15ರಿಂದ 29 ವರ್ಷ ವಯೋಮಾನದ ಗುಂಪಿನಲ್ಲಿಯ ಜನರ ಸಾವುಗಳಿಗೆ ಆತ್ಮಹತ್ಯೆ ಎರಡನೇ ಮುಖ್ಯ ಕಾರಣವಾಗಿದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.

ತಮ್ಮ ಮಕ್ಕಳು ಹದಿಹರೆಯದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ತಿಳಿದುಕೊಳ್ಳುವುದು ಹೆತ್ತವರಿಗೆ ಕಷ್ಟವಾಗುತ್ತದೆ. ಮಕ್ಕಳು ಬೆಳೆಯುತ್ತಿದ್ದಂತೆ ಅವರಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲವಾರು ಬದಲಾವಣೆಗಳು ಆಗುತ್ತಿರುತ್ತವೆ. ಕೆಲವು ಪ್ರಕರಣಗಳಲ್ಲಿ,ತಮ್ಮ ಓದಿನಲ್ಲಿರಲಿ ಅಥವಾ ಸ್ನೇಹಿತರ ವಿಷಯವಾಗಿರಲಿ,ಜೀವನದಲ್ಲಿಯ ಸಹಜ ಏಳುಬೀಳುಗಳಿಗೆ ಹೊಂದಿಕೊಳ್ಳುವುದು ಅವರಿಗೆ ಕಷ್ಟವಾಗುತ್ತದೆ. ಇಂತಹ ಮಕ್ಕಳು ಮಾನಸಿಕವಾಗಿ ದುರ್ಬಲರಾಗುವ ಹೆಚ್ಚಿನ ಅಪಾಯದಲ್ಲಿರುತ್ತಾರೆ ಮತ್ತು ಆತ್ಮಹತ್ಯೆಯಂತಹ ಕಂಟಕಗಳಿಗೆ ಸುಲಭಭೇದ್ಯರಾಗಿರುತ್ತಾರೆ. ಮಕ್ಕಳಲ್ಲಿ ಆತ್ಮಹತ್ಯೆ ಪ್ರವೃತ್ತಿಯನ್ನು ತಡೆಯಲು ಹೆತ್ತವರಿಗಾಗಿ ತಜ್ಞರ ಕೆಲವು ಟಿಪ್ಸ್ ಇಲ್ಲಿವೆ......

► ಆತಂಕ ಅಥವಾ ಖಿನ್ನತೆಯ ಸೂಕ್ಷ್ಮ ಲಕ್ಷಣಗಳ ಬಗ್ಗೆ ನಿಗಾ ಇರಲಿ

ಪ್ರತಿಯೊಬ್ಬರಿಗೂ ಶಾಲೆ ಅಥವಾ ಕಾಲೇಜಿನಲ್ಲಿ ಕೆಟ್ಟ ದಿನಗಳಿರುವುದು ಸಾಮಾನ್ಯ,ಹೀಗಿದ್ದಾಗ ಅವರು ಮಂಕು ಕವಿದಂತಿರುತ್ತಾರೆ ಮತ್ತು ಇದು ಸಹಜ. ಆದರೆ ಈ ಮೂಡ್ ದಿನಗಟ್ಟಲೆ ಅಥವಾ ವಾರಗಟ್ಟಲೆ ಮುಂದುವರಿದರೆ ಅದು ವೈದ್ಯರೊಡನೆ ಸಮಾಲೋಚಿಸಲು ಸಕಾಲವಾಗುತ್ತದೆ. ಯಾವುದೇ ಕಾರಣವಿಲ್ಲದೆ ವಿಷಾದ ಅಥವಾ ಅಸಮಾಧಾನ,ಆಸಕ್ತಿ ಅಥವಾ ಸಂತೋಷದ ಕೊರತೆ, ಕೆರಳುವಿಕೆ, ಹತಾಶೆ ಅಥವಾ ಆಕ್ರೋಶದ ಪ್ರದರ್ಶನ,ವಿನಾಕಾರಣ ಅಳುವುದು ಮತ್ತು ನಿದ್ರೆಯ ಕೊರತೆ ಅಥವಾ ಅತಿಯಾದ ನಿದ್ರೆ ಇವು ಪ್ರತಿಯೊಬ್ಬರಿಗೂ ತಿಳಿದಿರಬೇಕಾದ ಖಿನ್ನತೆಯ ಸಾಮಾನ್ಯ ಲಕ್ಷಣಗಳಾಗಿವೆ. ನೆನಪಿಡಿ,ಖಿನ್ನತೆಯ ರೋಗನಿರ್ಧಾರವು ಅದರ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಕ್ಕಳಲ್ಲಿ ಖಿನ್ನತೆಯ ಲಕ್ಷಣಗಳು ಗೋಚರಿಸಿದರೆ ವೈದ್ಯರೊಂದಿಗೆ ಸಮಾಲೋಚಿಸಿ ಸೂಕ್ತ ಚಿಕಿತ್ಸೆಯನ್ನು ಕೊಡಿಸುವುದು ಮುಖ್ಯವಾಗುತ್ತದೆ.

►ಮಕ್ಕಳೊಂದಿಗೆ ಅವರ ಭಾವನೆಗಳ ಕುರಿತು ಮಾತನಾಡಿ

ತಮ್ಮ ಮಕ್ಕಳ ವರ್ತನೆಯಲ್ಲಿ ಬದಲಾವಣೆಗಳನ್ನು ಗಮನಿಸಿದರೆ ಅಥವಾ ಮಕ್ಕಳು ಖಿನ್ನತೆಗೆ ಒಳಗಾಗಿದ್ದಾರೆಂದರೆ ಹೆತ್ತವರು ಭಾವಿಸಿದ್ದರೆ ಮಕ್ಕಳ ಭಾವನೆಗಳು ಅವರ ಮೇಲೆ ಸವಾರಿ ಮಾಡಲು ಬಿಡಬಾರದು. ಇಂತಹ ಸಂದರ್ಭದಲ್ಲಿ ಹೆತ್ತವರೇ ಮುಂದಾಗಿ ಮಕ್ಕಳೊಂದಿಗೆ ಮಾತನಾಡಿ ಅವರನ್ನು ಕಾಡುತ್ತಿರುವ ವಿಷಯವನ್ನು ತಿಳಿದುಕೊಳ್ಳಬೇಕು. ಅವರ ಚಿಂತೆಗೆ ಕಾರಣವನ್ನು ತಿಳಿದುಕೊಳ್ಳಲು ಶಾಲೆ ಮತ್ತು ಮನೆಯಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಅವರೊಡನೆ ಚರ್ಚಿಸಬೇಕು. ನಿಮ್ಮ ಮಕ್ಕಳು ತಮ್ಮ ಸಮಸ್ಯೆಗಳು ಅಥವಾ ಕಳವಳಗಳೊಂದಿಗೆ ಅವರಾಗಿಯೇ ನಿಮ್ಮ ಬಳಿಗೆ ಬರುತ್ತಾರೆ ಎಂದು ಕಾಯಬೇಕಿಲ್ಲ. ಏನಾದರೂ ವಿಷಯ ಮಾತನಾಡಲು ಇದೆಯೇ ಅಥವಾ ಏನಾದರೂ ನೆರವು ಬೇಕೇ ಎಂದು ಅವರನ್ನು ಕೇಳಿ. ಈ ಸರಳ ಹೆಜ್ಜೆಯು ಭಾರೀ ವ್ಯತ್ಯಾಸವನ್ನುಂಟು ಮಾಡಬಲ್ಲದು.

►ಆತ್ಮಹತ್ಯೆ ಬೆದರಿಕೆಗಳನ್ನು ಗಿಮಿಕ್ ಎಂದು ಕಡೆಗಣಿಸಬೇಡಿ

ಮಕ್ಕಳಾಗಲೀ ಹಿರಿಯರಾಗಲೀ,ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದಾಗಿ ಅದನ್ನು ಕಡೆಗಣಿಸುವುದು ಹೆಚ್ಚಿನ ಜನರು ಮಾಡುವ ಸಾಮಾನ್ಯ ತಪ್ಪು ಆಗಿದೆ. ಈ ಬೆದರಿಕೆಗಳು ಆತ್ಮಹತ್ಯೆಯ ಪ್ರಮುಖ ಲಕ್ಷಣಗಳಾಗಿರಬಹುದು ಮತ್ತು ಇವುಗಳನ್ನು ಕಡೆಗಣಿಸುವುದರಿಂದ ಪ್ರೀತಿಪಾತ್ರರನ್ನು ಕಳೆದುಕೊಳ್ಳಬೇಕಾಗಬಹುದು. ಹೀಗೆ ಕಡೆಗಣಿಸುವ ನಿಲುವಿನಿಂದಾಗಿ ಮಕ್ಕಳು ತಮ್ಮ ಭಾವನೆಗಳನ್ನು ಹೆತ್ತವರೊಡನೆ ಹಂಚಿಕೊಳ್ಳಲು ಬಯಸದಿರಬಹುದು ಮತ್ತು ಇದು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ‘ನಾನು ಸಾಯಲು ಬಯಸುತ್ತೇನೆ ’ ಅಥವಾ ‘ಇನ್ನೂ ಬದುಕಿರಲು ನನಗೆ ಇಷ್ಟವಿಲ್ಲ ’ಎಂಬಂತಹ ಯಾವುದೇ ಲಿಖಿತ ಅಥವಾ ವೌಖಿಕ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಹದಿಹರೆಯದ ಮಕ್ಕಳು ಆತ್ಮಹತ್ಯೆಗೆ ಪ್ರಯತ್ನಿಸುವಾಗ ತಮ್ಮನ್ನೇ ತಾವು ಕೊಂದುಕೊಳ್ಳುವ ಬಗ್ಗೆ ಅವರು ಹೆತ್ತವರಲ್ಲಿ ಹೇಳಿಕೊಳ್ಳುತ್ತಲೆ ಇರುತ್ತಾರೆ ಎನ್ನುವುದು ಹೆಚ್ಚಿನ ಪ್ರಕರಣಗಳಲ್ಲಿ ಕಂಡು ಬಂದಿದೆ,ಆದರೆ ಇದೆಲ್ಲ ಹದಿಹರೆಯದಲ್ಲಿಯ ಸಾಮಾನ್ಯ ನಾಟಕ ಎಂದು ಕಡೆಗಣಿಸಲ್ಪಡುತ್ತಾರೆ ಮತ್ತು ಇದು ದುರಂತಕ್ಕೆ ನಾಂದಿ ಹಾಡುತ್ತದೆ.

► ಮಾನಸಿಕ ತಜ್ಞರ ನೆರವು ಪಡೆಯಲು ಹಿಂಜರಿಕೆ ಬೇಡ

ಕಳೆದ ಕೆಲವು ವರ್ಷಗಳಲ್ಲಿ ಮಾನಸಿಕ ಅರೋಗ್ಯ ತಜ್ಞರನ್ನು ನಾವು ನೋಡುವ ರೀತಿಯಲ್ಲಿ ಭಾರೀ ಬದಲಾವಣೆಗಳಾಗಿದ್ದರೂ,ನೆರವಿಗಾಗಿ ಮನಃಶಾಸ್ತ್ರಜ್ಞರ ಬಳಿ ಹೋಗುವುದು ಇಂದಿಗೂ ಹಿಂಜರಿಕೆಯ ವಿಷಯವಾಗಿಯೇ ಉಳಿದಿದೆ. ಸಮಾಜವು ಮಾನಸಿಕ ಅಸ್ವಸ್ಥತೆಯ ಪಟ್ಟ ಕಟ್ಟಿಬಿಟ್ಟರೆ ಎಂಬ ಅಳುಕು ಕಾಡುತ್ತಿರುತ್ತದೆ ಎನ್ನುವುದು ಸುಳ್ಳಲ್ಲ. ಅದು ಒತ್ತಡವಾಗಿರಲಿ ಅಥವಾ ಖಿನ್ನತೆಯಾಗಿರಲಿ,ಮನಃಶಾಸ್ತ್ರಜ್ಞರು ಮಾನಸಿಕ ಸ್ಥಿತಿಯನ್ನು ಸರಿಯಾಗಿ ಗುರುತಿಸಲು ನೆರವಾಗುವ ಜೊತೆಗೆ ರೋಗಿಗಳು ಉತ್ತಮ ಗುಣಮಟ್ಟದ ಜೀವನವನ್ನು ನಡೆಸುವಂತಾಗಲು ಸೂಕ್ತ ನೆರವು ಮತ್ತು ಚಿಕಿತ್ಸೆಯನ್ನು ಒದಗಿಸುತ್ತಾರೆ. ತಮ್ಮ ಮಕ್ಕಳು ಆತ್ಮಹತ್ಯೆ ಅಥವಾ ಸ್ವಯಂ ಹಾನಿಯನ್ನು ಮಾಡಿಕೊಳ್ಳುವ ಅಪಾಯದಲ್ಲಿದ್ದಾರೆ ಎಂದು ಹೆತ್ತವರು ಭಾವಿಸಿದರೆ ಅವರನ್ನು ಮನಃಶಾಸ್ತ್ರಜ್ಞರ ಬಳಿಗೆ ಕರೆದೊಯ್ದು ಚಿಕಿತ್ಸೆಯನ್ನು ಕೊಡಿಸಬೇಕು.

► ಸಾಮಾಜಿಕವಾಗಿ ಹೆಚ್ಚು ಬೆರೆಯಲು ಉತ್ತೇಜಿಸಿ

ಒಂಟಿಯಾಗಿರುವುದಕ್ಕಿಂತ ನಮ್ಮ ಪ್ರೀತಿಪಾತ್ರರ ನಡುವೆ ಇರುವುದು ಒಳ್ಳೆಯದು,ಏಕೆಂದರೆ ಅದು ನಮ್ಮ ಚಿಂತೆಗಳನ್ನು ಮರೆಯಲು ಮತ್ತು ಹರ್ಷಚಿತ್ತದಿಂದ ಇರಲು ನಮಗೆ ನೆರವಾಗುತ್ತದೆ. ಖಿನ್ನತೆಗೊಳಗಾಗಿರುವ ಅಥವಾ ಆತ್ಮಹತ್ಯೆಯ ಚಿಂತನೆ ಮಾಡುತ್ತಿರುವ ಮಕ್ಕಳು ಒಂಟಿಯಾಗಿ ಇರಲು ಇಷ್ಟಪಡುವುದರಿಂದ ಅವರನ್ನು ಆ ಸ್ಥಿತಿಯಿಂದ ಹೊರಗೆ ತರುವುದು ಮುಖ್ಯವಾಗುತ್ತದೆ. ಹೊರಾಂಗಣ ಕ್ರೀಡೆಗಳಲ್ಲಿ ತೊಡಗುವಂತೆ ಅವರನ್ನು ಉತ್ತೇಜಿಸಬಹುದು,ಶಾಪಿಂಗ್‌ಗೆ ಅಥವಾ ಸಮೀಪದ ಪಾರ್ಕ್‌ಗೆ ಅವರನ್ನು ಕರೆದೊಯ್ಯಬಹುದು,ಹೆತ್ತವರು ಮತ್ತು ಕುಟುಂಬದೊಡನೆ ಕಾಲ ಕಳೆಯಲು ಅವರಿಗೆ ನೆರವಾಗಬಹುದು. ಹೀಗೆ ಮಾಡುವಾಗ ಪ್ರತಿಯೊಬ್ಬರೂ ದುಃಖಕ್ಕೆ ಗುರಿಯಾಗುತ್ತಾರೆ,ಆತಂಕ ಅಥವಾ ಖಿನ್ನತೆಗೆ ಗುರಿಯಾಗುತ್ತಾರೆ,ಆದರೆ ಇದು ದೊಡ್ಡ ವಿಷಯವೇನಲ್ಲ, ಕಾಲಕ್ರಮೇಣ ಎಲ್ಲವೂ ಸರಿಹೋಗುತ್ತದೆ ಎಂದು ಮಕ್ಕಳಿಗೆ ಅರ್ಥ ಮಾಡಿಸಲು ಪ್ರಯತ್ನಿಸಬೇಕು. ನಿಮ್ಮ ಮಕ್ಕಳು ಇತರ ಮಕ್ಕಳೊಂದಿಗೆ ಬೆರೆಯುವುದು ಹೆಚ್ಚಿದಷ್ಟೂ ಅವರು ಸಂತಸಚಿತ್ತರಾಗುವ ಮತ್ತು ಅವರಲ್ಲಿ ಆತ್ಮವಿಶ್ವಾಸ ಬೆಳೆಯುವ ಅವಕಾಶಗಳು ಹೆಚ್ಚು. ಆದರೆ ನಿಮ್ಮ ಮಗ/ಮಗಳು ಇಲ್ಲ ಎಂದು ಹೇಳಿದರೆ ಇತರ ಮಕ್ಕಳೊಂದಿಗೆ ಬೆರೆಯುವಂತೆ ಅವರ ಮೇಲೆ ಅತಿಯಾದ ಒತ್ತಡ ಹೇರಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News