‘ಚೆನ್ನೈ ಸಂಪರ್ಕ ’ಭಾರತ-ಚೀನಾ ಬಾಂಧವ್ಯಕ್ಕೆ ಹೆಚ್ಚಿನ ಆವೇಗ ನೀಡಲಿದೆ: ಪ್ರಧಾನಿ ಮೋದಿ

Update: 2019-10-12 16:06 GMT

ಚೆನ್ನೈ, ಅ.12: ಇಲ್ಲಿಗೆ ಸಮೀಪದ ಮಹಾಬಲಿಪುರಂನಲ್ಲಿ ಉಭಯ ನಾಯಕರ ನಡುವಿನ ಅನೌಪಚಾರಿಕ ಶೃಂಗಸಭೆಯು ಶನಿವಾರ ಸಂಪನ್ನಗೊಂಡಿದ್ದು,ತಾನು ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವ ಕುರಿತು ಫಲದಾಯಕ ಮಾತುಕತೆಗಳನ್ನು ನಡೆಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಭಾರತಕ್ಕೆ ಭೇಟಿ ನೀಡಿದ್ದಕ್ಕಾಗಿ ಜಿನ್‌ಪಿಂಗ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿರುವ ಮೋದಿ,‘ಚೆನ್ನೈ ಸಂಪರ್ಕ ’ವು ಭಾರತ-ಚೀನಾ ನಡುವಿನ ದಿಪಕ್ಷೀಯ ಸಂಬಂಧಗಳಿಗೆ ಹೆಚ್ಚಿನ ಆವೇಗ ನೀಡಲಿದೆ ಎಂದಿದ್ದಾರೆ.

ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತೊಮ್ಮೆ ಇಂಗ್ಲೀಷ್,ತಮಿಳು ಮತ್ತು ಮ್ಯಾಂಡರಿನ್ ಭಾಷೆಗಳಲ್ಲಿ ಟ್ವೀಟಿಸಿರುವ ಮೋದಿ,ತಮಿಳುನಾಡಿನ ಜನರ ಆದರಾತಿಥ್ಯವನ್ನು ಪ್ರಶಂಸಿಸಿದ್ದಾರೆ.

 ಜಿನ್‌ಪಿಂಗ್ ಅವರೊಂದಿಗಿನ ತನ್ನ ದ್ವಿತೀಯ ಅನೌಪಚಾರಿಕ ಶೃಂಗಸಭೆಯು ದ್ವಿಪಕ್ಷೆಯ ಸಂಬಂಧಗಳನ್ನು ಇನ್ನಷ್ಟು ಬಲಗೊಳಿಸಲಿದೆ ಎಂದು ಹಾರೈಸಲು ಮತ್ತು ಜಿನ್‌ಪಿಂಗ್ ಅವರಿಗೆ ಭಾರತಕ್ಕೆ ಸ್ವಾಗತವನ್ನು ಕೋರಲು ಮೋದಿ ಶುಕ್ರವಾರವೂ ಈ ಮೂರು ಭಾಷೆಗಳಲ್ಲಿ ಟ್ವೀಟಿಸಿದ್ದರು.

 ಜಿನ್‌ಪಿಂಗ್ ಅವರೊಂದಿಗಿನ ಮಾತುಕತೆ ಹಾಗೂ ಇಲ್ಲಿಗೆ ಸಮೀಪದ ಕೋವಲಂನಲ್ಲಿ ನಿಯೋಗ ಮಟ್ಟದ ಮಾತುಕತೆ ಸಂದರ್ಭಗಳ ಫೋಟೊಗಳನ್ನೂ ಮೋದಿ ಟ್ವೀಟಿಸಿದ್ದಾರೆ.

ದ್ವಿತೀಯ ಅನೌಪಚಾರಿಕ ಶೃಂಗಸಭೆಯು ಉಭಯ ರಾಷ್ಟ್ರಗಳು ಮತ್ತು ವಿಶ್ವದ ಜನತೆಗೆ ಲಾಭದಾಯಕವಾಗಲಿದೆ ಎಂದು ಪ್ರತ್ಯೇಕ ಟ್ವೀಟ್‌ನಲ್ಲಿ ಮೋದಿ ಹೇಳಿದ್ದಾರೆ.

ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ತಮಿಳುನಾಡು ಸರಕಾರಕ್ಕೂ ಮೋದಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News