ಗಾಂಧಿ ಒಬ್ಬರೇ ‘ರಾಷ್ಟ್ರಪಿತ’

Update: 2019-10-12 18:31 GMT

ಮೋದಿಯವರನ್ನು ‘ಫಾದರ್ ಆಫ್ ಇಂಡಿಯಾ’ ಎಂದು ಟ್ರಂಪ್ ಕರೆದಿರುವುದು ಭಾರತದ ಇತಿಹಾಸದ ಬಗ್ಗೆಯಾಗಲಿ, ಈಗ ಭಾರತದಲ್ಲಿ ನಡೆಯುತ್ತಿರುವುದರ ಬಗ್ಗೆಯಾಗಲಿ ಟ್ರಂಪ್‌ರವರಿಗೆ ಆಳವಾಗಿ ತಿಳಿದಿಲ್ಲ ಎಂಬುದನ್ನು ತೋರಿಸುತ್ತದೆ. ಅವರು ಹೀಗೆ ಕರೆದಿರುವುದು ತನ್ನ ದೇಶಕ್ಕೆ ಭೇಟಿ ನೀಡಿದ ನಾಯಕನನ್ನು ಖುಷಿಪಡಿಸಲು ಹೂಡಿದ ಕೇವಲ ಒಂದು ರಾಜತಾಂತ್ರಿಕ ದಾಳ.

ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಸಮಾವೇಶ ಹಲವು ಕಾರಣಗಳಿಗಾಗಿ ಜನರ ಗಮನ ಸೆಳೆಯಿತು. ‘‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ’’ ಎಂದು ಮೋದಿ ಹೇಳುತ್ತಿರುವಾಗಲೇ, ಅಲ್ಲಿ ನೆರೆದಿದ್ದ ಸಾವಿರಾರು ಪ್ರತಿಭಟನಾಕಾರರು ಭಾರತದ ನಿಜ ಪರಿಸ್ಥಿತಿಗೆ ಕನ್ನಡಿ ಹಿಡಿದರು. ಅದೇ ವೇಳೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿಯವರನ್ನು ‘ಫಾದರ್ ಆಫ್ ಇಂಡಿಯಾ’ (ಭಾರತದ ಪಿತಾಮಹ) ಎಂದು ಹೊಗಳಿದರು. ‘‘ಭಾರತ ಮೊದಲು ಹರಿಹಂಚಾಗಿತ್ತು. ಅಲ್ಲಿ ತುಂಬ ಭಿನ್ನಮತ, ಜಗಳಗಳು ಇದ್ದವು. ಒಬ್ಬ ತಂದೆಯ ಹಾಗೆ ಅವರು (ಮೋದಿ) ಎಲ್ಲವನ್ನೂ ಒಂದು ಗೂಡಿಸಿದರು. ಪ್ರಾಯಶಃ ಅವರು ‘ಭಾರತ ಪಿತ’.’’

ಅಮೆರಿಕದ ಒಳಗಡೆಯೇ ಮೋದಿಯವರ ಬಗ್ಗೆ ಹಲವು ಅಭಿಪ್ರಾಯಗಳಿವೆ. 2019ರ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಅಮೆರಿಕದ ಪ್ರಮುಖ ಪತ್ರಿಕೆ, ಟೈಮ್ ‘‘ಮೋದಿ : ದಿ ಡಿವೈಡರ್ ಇನ್ ಚೀಫ್’’ ಎಂಬ ಮುಖಪುಟ ಲೇಖನ ಪ್ರಕಟಿಸಿತು. ಅದೇ ಪತ್ರಿಕೆಯ ಇನ್ನೊಂದು ಲೇಖನದಲ್ಲಿ ಭಾರತದಲ್ಲಿ ಆರ್ಥಿಕ ಸುಧಾರಣೆಗಳ ಕೇಂದ್ರ ಬಿಂದುವೆಂದು ಅವರನ್ನು ಚಿತ್ರಿಸಲಾಯಿತು. ಭಾರತದಲ್ಲಿ ಮೋದಿಯವರು ಅಧಿಕಾರಕ್ಕೆ ಬಂದದ್ದರಿಂದ ದೇಶದ ವಿಭಾಜಕ ಶಕ್ತಿಗಳು, ಒಂದು ಹಿಂದೂ ರಾಷ್ಟ್ರವನ್ನು ಬಯಸುವ ಶಕ್ತಿಗಳು ಪ್ರಬಲಗೊಂಡಿವೆ ಎಂಬ ಭಾವನೆ ಇದೆ. ಈ ಶಕ್ತಿಗಳಿಂದಾಗಿ ಗೋಮಾಂಸ ಸಂಬಂಧಿತ ಕಾರ್ಯಸೂಚಿ ಅನುಷ್ಠಾನಗೊಳಿಸಲು ಸಾಕಷ್ಟು ಹಿಂಸೆ ನಡೆದಿದೆಯಲ್ಲದೆ ಅಸ್ಮಿತೆಯ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

 ಅಲ್ಪಸಂಖ್ಯಾತರು ಹಾಗೂ ದಲಿತರು ಮತ್ತು ಆದಿವಾಸಿಗಳನ್ನು ಸಮಾಜದ ಅಂಚಿಗೆ ತಳ್ಳಲಾಗಿದೆ. ಹಿಂದಿಯನ್ನು ರಾಷ್ಟ್ರಭಾಷೆ ಮಾಡುವ ಪ್ರಯತ್ನವೂ ನಡೆದಿದೆ. ಟ್ರಂಪ್ ಒಂದು ಧ್ವನಿಯಲ್ಲಿ ಮಾತಾಡುತ್ತಿರುವಾಗ, ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬೆರ್ನಿ ಸ್ಯಾಂಡರ್ಸ್‌ ಟ್ವೀಟ್‌ವೊಂದರಲ್ಲಿ ಟ್ರಂಪ್‌ರವರು ಮೋದಿಯವರಂತಹ ಸರ್ವಾಧಿಕಾರಿ ನಾಯಕರಿಗೆ ಇನ್ನಷ್ಟು ಧೈರ್ಯ ತುಂಬುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೆಲವು ವರ್ಷಗಳ ಹಿಂದಿನವರೆಗೆ ಸ್ವತಃ ಮೋದಿಯವರೇ ಬಹಳ ವಿಭಜನಕಾರಿಯಾದ ಭಾಷೆಯಲ್ಲಿ ಮಾತನಾಡುತ್ತಿದ್ದರು. ಈಗ ಈ ಕೆಲಸವನ್ನು ಅವರ ಸಹವರ್ತಿಗಳಿಗೆ ವಹಿಸಿಕೊಡಲಾಗಿದೆ. ಯೋಗಿ ಆದಿತ್ಯನಾಥರ ಮುಸ್ಲಿಂ ವಿರೋಧಿ ಹೇಳಿಕೆಗಳು ಸಾಕಷ್ಟಿವೆ. ಹಿಂದೂ ರಾಷ್ಟ್ರದ ಬಗ್ಗೆ ರಾಜಾರೋಷವಾಗಿ ಮಾತುಗಳು ಕೇಳಿಬರುತ್ತಿವೆ. ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಗಾಂಧೀಜಿಯ ಹಂತಕ ಗೋಡ್ಸೆಯನ್ನು ಹೊಗಳುತ್ತಿದ್ದಾರೆ.

ಒಂದು ಅರ್ಥದಲ್ಲಿ, ಟೈಮ್ ಮ್ಯಾಗಝಿನ್‌ನ ಲೇಖನ ಭಾರತದ ನಿಜ ಸ್ಥಿತಿಯನ್ನು ಚಿತ್ರಿಸಿತು. ಟ್ರಂಪ್ ಇತಿಹಾಸದ ವಿದ್ವಾಂಸರಲ್ಲ. ಭಾರತ ಯಾಕೆ ಮಹಾತ್ಮಾ ಗಾಂಧಿಯವರನ್ನು ‘ರಾಷ್ಟ್ರಪಿತ’ನೆಂದು ಪರಿಗಣಿಸುತ್ತದೆಂದು ಅವರಿಗೆ ತಿಳಿದಿಲ್ಲ. ಕಳೆದ ಹಲವು ವರ್ಷಗಳಲ್ಲಿ ಅಮೆರಿಕ ಪಾಕಿಸ್ತಾನಕ್ಕೆ ಹತ್ತಿರವಾಗಲು ಶೀತಲ ಸಮರ ಕಾರಣವಾಗಿತ್ತು. ಬಳಿಕ ಪಶ್ಚಿಮ ಏಶ್ಯದ ತೈಲ ಬಾವಿಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅದು ಪಾಕಿಸ್ತಾನದ ಪರವಹಿಸಿ ಮಾತಾಡುತ್ತಿತ್ತು. ಈಗ ಚೀನಾ ಒಂದು ಬೃಹತ್ ಶಕ್ತಿಯಾಗಿ ಮೂಡಿಬರುತ್ತಿದ್ದು ಅದು ಪಾಕಿಸ್ತಾನದ ಆಪ್ತ ದೇಶವಾಗಿದೆ. ಹೀಗಾಗಿ ಅಮೆರಿಕ ಈಗ ಭಾರತಕ್ಕೆ ಹತ್ತಿರವಾಗಲು ಪ್ರಯತ್ನಿಸುತ್ತಿದೆ. ಟ್ರಂಪ್, ಮೋದಿಯವರನ್ನು ಹೊಗಳಲು, ಅವರನ್ನು ‘ಫಾದರ್ ಆಫ್ ಇಂಡಿಯಾ’ ಎಂದು ಕರೆಯಲು ಇವೆಲ್ಲ ಕೆಲವು ಕಾರಣಗಳಿರಬಹುದು.

ಆದರೆ ಟ್ರಂಪ್‌ರ ಮಾತುಗಳಿಗೆ ಬಂದ ಪ್ರತಿಕ್ರಿಯೆಗಳು ಅವರ ಟೊಳ್ಳುತನವನ್ನು ಬಯಲು ಮಾಡಿವೆ. ಅಮೆರಿಕದ ಸ್ಥಾಪಕ ಪಿತರಲ್ಲಿ ಓರ್ವರಾದ ಜಾರ್ಜ್ ವಾಶಿಂಗ್ಟನ್‌ರವರ ಸ್ಥಾನದಲ್ಲಿ ಬೇರೆಯವರನ್ನು ಕುಳ್ಳಿರಿಸಲು ಟ್ರಂಪ್ ಬಯಸುತ್ತಾರೆಯೇ? ಎಂದು ಗಾಂಧೀಜಿಯ ಮೊಮ್ಮಗ ತುಷಾರ್ ಟ್ವೀಟ್ ಮಾಡಿದ್ದಾರೆ.

ಟ್ರಂಪ್ ಹೇಳಿಕೆಯಿಂದ ಗಾಂಧಿ ‘ರಾಷ್ಟ್ರಪಿತ’ ಎಂದು ಬಲ್ಲವರಿಗೆ ನೋವಾಗಿದೆ. ಅದೇನಿದ್ದರೂ, ಮೋದಿಯವರ ಅನುಯಾಯಿಗಳು ಗಾಂಧಿಯನ್ನು ರಾಷ್ಟ್ರಪಿತ ಎಂದು ಪರಿಗಣಿಸುವುದಿಲ್ಲ. ಅವರ ವಾದ ಹೀಗಿದೆ: ಭಾರತವು ಒಂದು ಹಿಂದೂ ರಾಷ್ಟ್ರ. ಅದು ಲಾಗಾಯಿತಿನಿಂದ ಇದೆ; ಹಾಗಿರುವಾಗ ಗಾಂಧಿ ಹೇಗೆ ಅದರ ಪಿತ ಆಗುತ್ತಾರೆ? ಭಾರತವನ್ನು ‘ಒಂದು ರಾಷ್ಟ್ರವಾಗುವ ಹಾದಿಯಲ್ಲಿದ್ದ ಒಂದು ದೇಶ’ ಎಂದು ಪರಿಗಣಿಸಿದವರೆಲ್ಲ ದೇಶವನ್ನು ಒಂದಾಗಿಸಿದವರು ಗಾಂಧಿ ಎಂದು ಪರಿಗಣಿಸುತ್ತಾರೆ. ಸ್ವಾತಂತ್ರ ಚಳವಳಿಯ ಅವಧಿಯಲ್ಲಿ ದೇಶವನ್ನು ಒಂದು ದೇಶವಾಗಿ ಒಟ್ಟಾಗಿ, ಒಗ್ಗಟ್ಟಾಗಿ, ಬ್ರಿಟಿಷರ ವಿರುದ್ಧ ನಿಲ್ಲಿಸಿದವರು ಗಾಂಧಿ, ಭಾರತ ಅಂದು ಧರ್ಮ, ಪ್ರಾದೇಶಿಕತೆ, ಜಾತಿ ಹಾಗೂ ಭಾಷೆಯ ನೆಲೆಯಲ್ಲಿ ಹರಿದುಹಂಚಿಹೋಗಿತ್ತು. ಅದನ್ನು ಒಂದು ದೇಶವಾಗಿ ಮಾಡಿದವರು ಗಾಂಧಿ. ಆದರೆ ಮುಸ್ಲಿಂ ಲೀಗ್‌ನ ಅನುಯಾಯಿಗಳು ಗಾಂಧಿಯನ್ನು ಓರ್ವ ಹಿಂದೂ ನಾಯಕನೆಂದು ನೋಡಿದರು; ಹಿಂದೂ ಕೋಮುವಾದಿಗಳು ಗಾಂಧಿಯನ್ನು ಮುಸ್ಲಿಮರ ತುಷ್ಠೀಕರಣ ಮಾಡುವವರೆಂದು ತಿಳಿದರು. ತುಂಬ ಸಂಕೀರ್ಣವೂ, ಮಹತ್ವಪೂರ್ಣವೂ ಆದ ಒಂದು ಪ್ರಕ್ರಿಯೆಯ ಮೂಲಕ ಭಾರತ ಒಂದು ರಾಷ್ಟ್ರವಾಗಿ ಮೂಡಿಬಂತು. ಈ ಪ್ರಕ್ರಿಯೆಯಲ್ಲಿ ಭಗತ್‌ಸಿಂಗ್, ಅಂಬೇಡ್ಕರ್, ನೆಹರೂ ಹಾಗೂ ಪಟೇಲ್‌ರಂತಹವರು ಬಹಳ ದೊಡ್ಡ ಪಾತ್ರವಹಿಸಿದರು, ಬ್ರಿಟಿಷರ ವಿರುದ್ಧ ಗಾಂಧಿ ಹಿಂದೆಂದೂ ನಡೆದಿರದಿದ್ದ್ದಂತಹ ಬೃಹತ್ ಚಳವಳಿಯನ್ನು ನಡೆಸಿದರು.

ಈ ಕಾರಣಕ್ಕಾಗಿ 1944ರ ಜುಲೈ 6ರಂದು, ಸಿಂಗಾಪುರ ರೇಡಿಯೊ ನಿಲಯದಿಂದ ಮಾಡಿದ ಭಾಷಣದಲ್ಲಿ ಸುಭಾಸ್ ಚಂದ್ರ ಬೋಸ್‌ರವರು ಗಾಂಧೀಜಿಯ ಆಶೀರ್ವಾದವನ್ನು ಬೇಡಿ ಅವರನ್ನು ರಾಷ್ಟ್ರಪಿತ ಎಂದು ಸಂಬೋಧಿಸಿ ಮಾತಾಡಿದರು. 1947ರ ಎಪ್ರಿಲ್ 6ರಂದು ಸರೋಜಿನಿ ನಾಯ್ಡುರವರು ಗಾಂಧೀಜಿಯನ್ನು ರಾಷ್ಟ್ರಪಿತ ಎಂದು ಕರೆದರು. ಹಾಗಾದರೆ ನಾವು ಇಲ್ಲಿಂದ ಮುಂದೆ ಎಲ್ಲಿಗೆ ಹೋಗೋಣ? ಟ್ರಂಪ್ ಹೇಳಿರುವುದರ ಬಗ್ಗೆ ಹಿಂದೂ ರಾಷ್ಟ್ರೀಯವಾದಿಗಳು, ಅವರ ಅನುಯಾಯಿಗಳು ಹರ್ಷೋನ್ಮತ್ತರಾಗಿದ್ದಾರೆ. ಗಾಂಧೀಜಿಯನ್ನು ಭಾರತದ ಸ್ವಾತಂತ್ರ ಹೋರಾಟದೊಂದಿಗೆ ಸಮೀಕರಿಸುವ ಗುರುತಿಸುವ ಹಾಗೂ ಪ್ರಜಾಸತ್ತಾತ್ಮಕ ವೌಲ್ಯಗಳನ್ನು ಎತ್ತಿಹಿಡಿಯುವ ಎಲ್ಲ ಜನರೂ ಟ್ರಂಪ್ ಹೇಳಿಕೆಯಿಂದ ತುಂಬ ನೊಂದಿದ್ದಾರೆ.

ಮೋದಿಯವರನ್ನು ‘ಫಾದರ್ ಆಫ್ ಇಂಡಿಯಾ’ ಎಂದು ಟ್ರಂಪ್ ಕರೆದಿರುವುದು ಭಾರತದ ಇತಿಹಾಸದ ಬಗ್ಗೆಯಾಗಲಿ, ಈಗ ಭಾರತದಲ್ಲಿ ನಡೆಯುತ್ತಿರುವುದರ ಬಗ್ಗೆಯಾಗಲಿ ಟ್ರಂಪ್‌ರವರಿಗೆ ಆಳವಾಗಿ ತಿಳಿದಿಲ್ಲ ಎಂಬುದನ್ನು ತೋರಿಸುತ್ತದೆ. ಅವರು ಹೀಗೆ ಕರೆದಿರುವುದು ತನ್ನ ದೇಶಕ್ಕೆ ಭೇಟಿ ನೀಡಿದ ನಾಯಕನನ್ನು ಖುಷಿಪಡಿಸಲು ಹೂಡಿದ ಕೇವಲ ಒಂದು ರಾಜತಾಂತ್ರಿಕ ದಾಳ.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News