ನೆನಪಲ್ಲಿ ಉಳಿಯುವ ಪಾತ್ರಗಳ ‘ಲುಂಗಿ’

Update: 2019-10-12 18:37 GMT

ಇತ್ತೀಚೆಗೆ ಕನ್ನಡ ಚಿತ್ರಗಳಲ್ಲಿ ಇಂದು ಹೊಸ ಟ್ರೆಂಡ್ ಶುರುವಾಗಿದೆ. ಮೊದಲ ನೋಟಕ್ಕೆ ಕತೆಯೇ ಇಲ್ಲದ ಹಾಗೆ ಸಿನೆಮಾಗಳು ಕೊನೆಯಾಗುತ್ತವೆ. ಆದರೆ ಪೂರ್ತಿ ಚಿತ್ರ ನೋಡಿದ ಬಳಿಕ ಚೌಕಟ್ಟಿರದ ಚಿತ್ರಗಳ ತಮ್ಮ ವ್ಯಾಪ್ತಿಯ ಬಗ್ಗೆ ಅಪಾರವಾಗಿ ಕಾಡುತ್ತವೆ ಎಂದು ಸಾಬೀತು ಮಾಡುತ್ತವೆ. ಅಂಥ ಸಾಲಿಗೆ ನಿಲ್ಲುವಂಥ ಚಿತ್ರವೇ ಲುಂಗಿ.

ಕಾಲೇಜ್ ಹುಡುಗನೋರ್ವ ಪದವಿ ಮುಗಿಸಿದ ಬಳಿಕ ಕೆಲಸಕ್ಕೆ ಸೇರುವ ಮುನ್ನ ಮನೆಯಲ್ಲೇ ಇರುತ್ತಾನಲ್ಲ? ಅದು ಬಹಳಷ್ಟು ಸಾಮಾನ್ಯರ ಬದುಕಲ್ಲಿ ಸಹಜವಾಗಿ ನಡೆಯುವ ಆತಂಕದ ದಿನಗಳು. ವಿದ್ಯಾರ್ಥಿ ಎಂಬ ಆದರವಿಲ್ಲದೆ, ನಿರುದ್ಯೋಗಿ ಎನ್ನುವ ಆಪಾದನೆಗೆ ಒಳಗಾಗುವ ಕಾಲ. ಅಂತಹ ದಿನಗಳು ಹಾಗೂ ಆತ ಸ್ವಂತದ್ದೊಂದು ಲುಂಗಿ ಉದ್ಯಮವನ್ನು ಆರಂಭಿಸುವ ಘಟನೆಗಳ ಮೂಲಕ ಸಾಗುವ ಚಿತ್ರವೇ ಲುಂಗಿ. ಇದರ ನಡುವೆ ಎರಡು ಪ್ರೇಮ ಕತೆಗಳೂ ಆತನ ಬಾಳಲ್ಲಿ ನಡೆಯುತ್ತವೆ.

ಕಾಲೇಜ್ ಹುಡುಗ ರಕ್ಷಿತ್ ಪಾತ್ರದಲ್ಲಿ ನವನಾಯಕನಾಗಿ ಪ್ರಣವ್ ಹೆಗ್ಡೆ ಚಂದನವನಕ್ಕೆ ಎಂಟ್ರಿ ನೀಡಿದ್ದಾರೆ. ನೋಟದಲ್ಲಿ ತುಸು ರಕ್ಷಿತ್ ಶೆಟ್ಟಿಯ ಹೋಲಿಕೆ ಕಂಡು ಬಂದರೂ, ರಕ್ಷಿತ್ ಟ್ರೆಂಡ್ ಮಾಡಿರುವಂತಹ ಮಂಗಳೂರು ಕನ್ನಡದಿಂದಾಗಿ ಪ್ರಣವ್ ಇನ್ನಷ್ಟು ಹೋಲಿಸಲ್ಪಡುತ್ತಾರೆ. ಆದರೆ ಕಾಲೇಜ್ ಹುಡುಗನಾಗಿ ಆಯ್ದುಕೊಂಡಿರುವ ಪಾತ್ರ, ಉಳಿದ ಸಿನೆಮಾ ನಾಯಕರಂತೆ ಪೋಲಿ ಅಲ್ಲದ; ಹೊಡೆದಾಟಕ್ಕಿಳಿಯದ ವಿಭಿನ್ನತೆಯೊಂದಿಗೆ ಸಹಜತೆಗೆ ಸನಿಹವಾಗಿದೆ. ಯಕ್ಷಗಾನ ಇಷ್ಟ ಎನ್ನುವ ನಾಯಕ ಅದಕ್ಕೆ ಪೂರಕವಾಗಿ ಬಣ್ಣದ ವೇಷದೊಂದಿಗೆ ಗಮನ ಸೆಳೆಯುವ ಅವಕಾಶ ಇದ್ದರೂ ಹಾಗೆ ಕಾಣಿಸಿಕೊಳ್ಳದಿರುವುದು, ಡ್ಯುಯೆಟ್‌ಗಾಗಿ ಹಾಡು ಇಲ್ಲದಿರುವುದು ಚಿತ್ರದ ವಿಭಿನ್ನತೆಗಳ ಪಟ್ಟಿಯಲ್ಲಿ ಸೇರುತ್ತದೆ. ಪ್ರಸಾದ್ ಶೆಟ್ಟಿಯವರ ಅಚ್ಚುಕಟ್ಟಾದ ಹಿನ್ನೆಲೆ ಸಂಗೀತ ಮತ್ತು ನವಿರಾದ ಪ್ರೇಮಗೀತೆ ಚಿತ್ರವನ್ನು ಉ್ಕೃಷ್ಟಗೊಳಿಸುವಲ್ಲಿ ಸಹಕಾರಿಯಾಗಿದೆ. ಛಾಯಾಗ್ರಹಣ ಕೂಡ ಉತ್ತಮವಾಗಿದೆ. ಆದರೆ ದೃಶ್ಯಗಳಲ್ಲಿ ಚಲನೆ ಇದ್ದರೂ ದೀರ್ಘಾವಧಿಯ ಸನ್ನಿವೇಶಗಳು ಮತ್ತು ವ್ಯವಸ್ಥಿತವೆನಿಸದ ಚಿತ್ರಕತೆ ನೋಡುಗನ ನಿರಾಳವಾದ ವೀಕ್ಷಣೆಗೆ ತಡೆಯೆನಿಸುತ್ತದೆ. ಎದುರು ಮನೆ ಫ್ರಾನ್ಸಿಸ್ ಅಂಕಲ್‌ನ ಒಗೆದು ಹಾಕಿರುವ ಲುಂಗಿ ನಾಯಕನ ಉದ್ಯಮ ಸ್ಥಾಪನೆಗೆ ಸ್ಫೂರ್ತಿಯಾಯಿತೆನ್ನುವ ಪ್ರಮುಖ ದೃಶ್ಯ ಪರಿಣಾಮಕಾರಿಯಾಗಿ ಮೂಡಿ ಬಂದಿಲ್ಲ.

ಇಬ್ಬರು ನಾಯಕಿಯರಲ್ಲಿ ಲೊನಿಟಾ ಪಾತ್ರಧಾರಿ ಅಹಲ್ಯಾ ಸುರೇಶ್ ಪಾತ್ರ ಚಿತ್ರ ಮುಗಿದ ಮೇಲೆಯೂ ಕಾಡುತ್ತದೆ. ರಾಧಿಕಾ ರಾವ್ ನಿರ್ವಹಿಸಿರುವ ಸಂಸ್ಕೃತಿ ಪಾತ್ರ ಹೇಗೆ ಮುಂದುವರಿಯುತ್ತದೆ ಎನ್ನುವ ಕುತೂಹಲ ಮೂಡುತ್ತದೆ. ಲೊನಿಟಾ ತಂದೆ ಫ್ರಾನ್ಸಿಸ್ ಪಾತ್ರದಲ್ಲಿ ರಂಗಭೂಮಿ ಕಲಾವಿದ ವಿಶ್ವನಾಥ್ ಅಸೈಗೋಳಿ ಮನ ಸೆಳೆಯುತ್ತಾರೆ. ನಾಯಕನ ತಾಯಿಯಾಗಿ ರೂಪಶ್ರೀ ವರ್ಕಾಡಿ ಸೇರಿದಂತೆ ಅಜ್ಜಿ ಮತ್ತು ತಂದೆಯ ಪಾತ್ರಗಳು ಮಂಗಳೂರಿನ ಮಧ್ಯಮವರ್ಗದ ಕುಟುಂಬಕ್ಕೆ ಕನ್ನಡಿ ಹಿಡಿದಂತಿವೆ. ಕಾರ್ತಿಕ್ ನಿರ್ವಹಿಸಿರುವ ಅಬುಸಲಿಯ ಪಾತ್ರ ಸೇರಿದಂತೆ ಚಿತ್ರದ ಬಹಳಷ್ಟು ಕಲಾವಿದರ ಪಾತ್ರಗಳು ನೆನಪಲ್ಲಿ ಉಳಿಯುವಷ್ಟು ಗಟ್ಟಿತನ ಹೊಂದಿವೆ.

ಕ್ರಿಶ್ಚಿಯನ್ ಹುಡುಗಿಯನ್ನು ಗ್ರಾಮೀಣ ಶೈಲಿಯಲ್ಲಿ ಸಂಪ್ರದಾಯ ಬದ್ಧವಾಗಿ ತೋರಿಸಿರುವುದು, ನಾಯಕನ ಆರ್ಥಿಕ ಸಹಾಯಕ್ಕೆ ಯಾರೂ ಇಲ್ಲ ಎನ್ನುವ ಸಂದರ್ಭದಲ್ಲಿ ಮುಸಲ್ಮಾನ ಸ್ನೇಹಿತನೊಬ್ಬ ಸಹಾಯಕ್ಕೆ ಮುಂದಾಗುವುದು ಮೊದಲಾದವೆಲ್ಲ ಕರಾವಳಿಯ ಕಲ್ಪನೆಯಲ್ಲಿ ಅಪರೂಪವಾದವು. ಆದರೆ ಕರಾವಳಿಯ ಬದುಕಲ್ಲಿ ನಿಜಕ್ಕೂ ಅಡಗಿರುವ ಇಂತಹ ಸದ್ಯದ ಅಗತ್ಯದ ಸಂಗತಿಗಳನ್ನು ವಾಸ್ತವಿಕವಾಗಿಯೇ ತೋರಿಸಿರುವ ನಿರ್ದೇಶಕದ್ವಯರಿಗೆ ಅಭಿನಂದನೆ ಸಲ್ಲಿಸಲೇಬೇಕು. ಇಂಥದೊಂದು ಚಿತ್ರದಲ್ಲಿ ಕ್ಲಾಸ್ ರೂಮ್ ಹಾಸ್ಯಕ್ಕಾಗಿ ಕ್ಲಾಸ್ ರಹಿತ ದೃಶ್ಯಗಳನ್ನು ಸೇರಿಸಿರುವುದು ಮಾತ್ರ ಅಕ್ಷಮ್ಯ. ಉಳಿದಂತೆ ಕುಟುಂಬ ಸಮೇತ ನೋಡಬಹುದಾದ ಒಂದು ಉತ್ತಮ ಚಿತ್ರ ಲುಂಗಿ.

ತಾರಾಗಣ: ಪ್ರಣವ್ ಹೆಗ್ಡೆ, ರಾಧಿಕಾ ರಾವ್, ಅಹಲ್ಯಾ ಸುರೇಶ್

ನಿರ್ದೇಶನ: ಅರ್ಜುನ್ ಲೆವಿಸ್ - ಅಕ್ಷಿತ್

ನಿರ್ಮಾಣ: ಮುಖೇಶ್ ಹೆಗ್ಡೆ

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News