ಬಹುಸಂಖ್ಯಾತವಾದ ಮತ್ತು ಸರ್ವಾಧಿಕಾರ ನೀತಿ ಭಾರತವನ್ನು ಕರಾಳ ಮತ್ತು ಅನಿಶ್ಚಿತ ದಾರಿಯತ್ತ ತಳ್ಳುತ್ತಿವೆ: ರಾಜನ್

Update: 2019-10-13 04:50 GMT

ಮುಂಬೈ: ಬಹುಸಂಖ್ಯಾತವಾದ ಮತ್ತು ಸರ್ವಾಧಿಕಾರ ನೀತಿ ಭಾರತವನ್ನು ಕರಾಳ ಮತ್ತು ಅನಿಶ್ಚಿತ ದಾರಿಯತ್ತ ತಳ್ಳುತ್ತಿವೆ ಎಂದು ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಎಂದೂ ಅವರು ಆಪಾದಿಸಿದ್ದಾರೆ.

ಭಾರತದ ಆರ್ಥಿಕತೆಯ ಚಿತ್ರಣ ಕೂಡಾ ಕರಾಳ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಸರ್ಕಾರದ ಆರ್ಥಿಕ ಆದ್ಯತೆಗಳು ಸುಸ್ಥಿರವಾಗಿಲ್ಲ ಮತ್ತು ಜನಪ್ರಿಯ ನೀತಿಗಳ ವಿಚಾರದಲ್ಲಿ ಭಾರತ, ಲ್ಯಾಟಿನ್ ಅಮೆರಿಕದ ಪಥ ತಲುಪುವ ಅಪಾಯ ಇದೆ" ಎಂದು ಎಚ್ಚರಿಸಿದರು.

"ತಪ್ಪುಕಲ್ಪನೆಯ ನೋಟು ರದ್ದತಿ ಮತ್ತು ಅಸಮರ್ಪಕ ಜಿಎಸ್‌ಟಿ ಅನುಷ್ಠಾನದಂಥ ಅಂಶಗಳು ಇಂದಿನ ಆರ್ಥಿಕ ಹಿಂಜರಿತಕ್ಕೆ ಪ್ರಮುಖ ಕಾರಣಗಳು. "ಪ್ರಗತಿ ನಿಧಾನವಾಗಿದ್ದರೂ, ಸರ್ಕಾರ ತನ್ನ ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತಿದೆ. ಇದು ಜನರಿಗೆ ಸಾಕಷ್ಟು ರಾಜಕೀಯ ಬಂಡವಾಳ ಒದಗಿಸುತ್ತದೆ. ಆರ್ಥಿಕತೆಗೆ ಉತ್ತೇಜನ ನೀಡಬೇಕಾದ ಅತೀವ ಒತ್ತಡ ಸರ್ಕಾರಕ್ಕಿದೆ. ಆದರೆ ನಿಮಗೆ ಸಿಕ್ಕಿದೆ ಎಂಬ ಕಾರಣಕ್ಕೆ ನೀವು ವೆಚ್ಚವನ್ನು ಹೆಚ್ಚಿಸುತ್ತಲೇ ಹೋಗುವಂತಿಲ್ಲ" ಎಂದು ಅಮೆರಿಕದ ಬ್ರೌನ್ ಯುನಿವರ್ಸಿಟಿಯಲ್ಲಿ ನೀಡಿದ ಓ.ಪಿ.ಜಿಂದಾಲ್ ದತ್ತಿ ಉಪನ್ಯಾಸದಲ್ಲಿ ಅಭಿಪ್ರಾಯಪಟ್ಟರು.

ಹಣಕಾಸು ಮತ್ತು ರಿಯಲ್ ಎಸ್ಟೇಟ್‌ನಂಥ ವಲಯದಲ್ಲಿ ಒತ್ತಡದ ಲಕ್ಷಣಗಳೇ ವಿನಃ ಅದು ನಿಧಾನ ಪ್ರಗತಿಗೆ ಕಾರಣವಲ್ಲ; ಈ ಒತ್ತಡಕ್ಕೆ ಮುಖ್ಯ ಕಾರಣವೆಂದರೆ, ನಾವು ಪ್ರಗತಿಯ ಅವಕಾಶಗಳನ್ನು ಹೆಚ್ಚು ವಿಸ್ತತವಾಗಿ ಸೃಷ್ಟಿಸದೇ ಇರುವುದು ಎಂದು ವಿಶ್ಲೇಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News