ಡೇವಿಸ್ ಕಪ್: ಪಾಕ್‌ಗೆ ಭಾರತ ತಂಡ ಕಳುಹಿಸಿಕೊಡಲು ಎಐಟಿಎ ಸಿದ್ಧತೆ?

Update: 2019-10-15 18:34 GMT

ಹೊಸದಿಲ್ಲಿ, ಅ.15: ಪಾಕಿಸ್ತಾನದಲ್ಲಿ ಮುಂದಿನ ತಿಂಗಳು ನಿಗದಿಯಾಗಿರುವ ಡೇವಿಸ್ ಕಪ್ ಪಂದ್ಯವನ್ನು ತಟಸ್ಥ ಸ್ಥಳಕ್ಕೆ ವರ್ಗಾಯಿಸಬೇಕೆಂಬ ತನ್ನ ಬೇಡಿಕೆಯನ್ನು ಒಂದು ವೇಳೆ ಐಟಿಎಫ್ ತಿರಸ್ಕರಿಸಿದರೆ, ಭಾರತ ತಂಡವನ್ನು ಪಾಕ್‌ಗೆ ಕಳುಹಿಸಿಕೊಡುವ ಉದ್ದೇಶದಿಂದ ತನ್ನ ಆಟಗಾರರ ಹಾಗೂ ಸಹಾಯಕ ಸಿಬ್ಬಂದಿಯ ಪಾಕಿಸ್ತಾನ ವೀಸಾ ಪ್ರಕ್ರಿಯೆ ಆರಂಭಿಸಲು ರಾಷ್ಟ್ರೀಯ ಟೆನಿಸ್ ಒಕ್ಕೂಟ ಮಂಗಳವಾರ ನಿರ್ಧರಿಸಿದೆ. ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ)ಯಾವ ಆಟಗಾರನನ್ನು ಪಾಕಿಸ್ತಾನಕ್ಕೆ ತೆರಳುವಂತೆ ಒತ್ತಾಯಿಸುವುದಿಲ್ಲ. ಅಂತರ್‌ರಾಷ್ಟ್ರೀಯ ಟೆನಿಸ್ ಒಕ್ಕೂಟದ(ಐಟಿಎಫ್)ಅಮಾನತು, ಬಹಿಷ್ಕಾರ ಹಾಗೂ ದಂಡದಿಂದ ತಪ್ಪಿಸಿಕೊಳ್ಳಲು ದ್ವಿತೀಯ ದರ್ಜೆಯ ತಂಡವನ್ನು ಪಾಕ್‌ಗೆ ಕಳುಹಿಸಿಕೊಡಲು ಎಐಟಿಎ ಬಯಸಿದೆ ಎಂದು ತಿಳಿದುಬಂದಿದೆ.

ಒಂದು ವೇಳೆ ಐಟಿಎಫ್ ಪಾಕಿಸ್ತಾನದಲ್ಲಿ ನಡೆಯಬೇಕಾಗಿದ್ದ ಪಂದ್ಯವನ್ನು ತಟಸ್ಥ ಸ್ಥಳಕ್ಕೆ ವರ್ಗಾಯಿಸಿದರೆ, ನ.29ರಂದು ವಿವಾಹವಾಗಲಿರುವ ಪ್ರಜ್ಞೇಶ್ ಗುಣೇಶ್ವರನ್ ಹೊರತುಪಡಿಸಿ ಉಳಿದೆಲ್ಲಾ ಪ್ರಮುಖ ಆಟಗಾರರು ಲಭ್ಯವಿರಲಿದ್ದಾರೆ.

 ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸೆ.14-15ರಂದು ಡೇವಿಸ್ ಕಪ್ ಪಂದ್ಯ ನಿಗದಿಯಾಗಿತ್ತು. ಐಟಿಎಫ್ ಭದ್ರತೆಯನ್ನು ಪರಿಶೀಲಿಸಿದ ಬಳಿಕ ಟೂರ್ನಿಯನ್ನು ನವೆಂಬರ್ 29-30ಕ್ಕೆ ಮುಂದೂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News