ಜಮ್ಮುಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರ ಸಾವು

Update: 2019-10-16 16:21 GMT

ಶ್ರೀನಗರ, ಅ. 16: ಜಮ್ಮು ಹಾಗೂ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆ ಯೋಧರು ಎನ್‌ಕೌಂಟರ್ ನಡೆಸಿ ಮೂವರು ಉಗ್ರರನ್ನು ಹತ್ಯೆಗೈದಿದ್ದಾರೆ.

 ಜಮ್ಮು ಹಾಗೂ ಕಾಶ್ಮೀರದಲ್ಲಿ ಮೊಬೈಲ್ ನೆಟ್‌ವರ್ಕ್ ಸೇವೆ ಮರು ಸ್ಥಾಪಿಸಿದ ಬಳಿಕ ನಡೆಯುತ್ತಿರುವ ಮೊದಲ ಗುಂಡಿನ ಚಕಮಕಿ ಇದಾಗಿದೆ.

ಉಗ್ರರ ಗುಂಪು ಅಡಗಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆ ಬುಧವಾರ ಬಿಜ್‌ಬೆಹರಾದ ಪಝಲ್‌ಪೋರಾ ಗ್ರಾಮವನ್ನು ಸುತ್ತುವರಿಯಿತು.

ಭದ್ರತಾ ಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಂತೆ ಉಗ್ರರು ಗುಂಡು ಹಾರಿಸಿದರು. ಭದ್ರತಾ ಪಡೆ ಪ್ರತಿ ದಾಳಿ ನಡೆಸಿತು. ಈ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಮೂವರ ಉಗ್ರರ ಮೃತದೇಹಗಳು ಪತ್ತೆಯಾಗಿವೆ. ಅವರ ಗುರುತು ಹಾಗೂ ಅವರು ಸೇರಿರುವ ಸಂಘಟನೆ ಇನ್ನಷ್ಟೇ ತಿಳಿಯಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News