ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಕಚೇರಿ ತೆರವಿಗೆ ನೋಟಿಸ್

Update: 2019-10-16 16:36 GMT

ಹೊಸದಿಲ್ಲಿ, ಅ. 16: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಕ್ಕೂಟ (ಜೆಎನ್‌ಯುಎಸ್‌ಯು) ಹಾಗೂ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ನಡುವಿನ ಸಂಘರ್ಷ ಮಂಗಳವಾರ ಹೊಸ ತಿರುವು ಪಡೆದುಕೊಂಡಿದೆ.

   ಸೆಪ್ಟಂಬರ್‌ನಲ್ಲಿ ವಿದ್ಯಾರ್ಥಿ ಚುನಾವಣೆ ನಡೆದ ಬಳಿಕ ಜೆಎನ್‌ಯುಎಸ್‌ಯು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ತನ್ನ ಕಚೇರಿಗೆ ಅಧಿಕೃತ ಮಾನ್ಯತೆ ಸಿಗಬಹುದೆಂದು ನಿರೀಕ್ಷಿಸಿತ್ತು. ಆದರೆ, ಈಗ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕಚೇರಿ ತೆರವುಗೊಳಿಸುವಂತೆ ಜೆಎನ್‌ಯುಎಸ್‌ಯುಗೆ ವಿಶ್ವವಿದ್ಯಾನಿಲಯ ನೋಟಿಸು ಜಾರಿ ಮಾಡಿದೆ. ವಿದ್ಯಾರ್ಥಿ ಸಂಘಟನೆ ವಿರುದ್ಧ ಇಂತಹ ಕ್ರಮ ತೆಗೆದುಕೊಳ್ಳುತ್ತಿರುವುದು ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಇದೇ ಮೊದಲು ಎಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೋರ್ವ ಹೇಳಿದ್ದಾರೆ.

ದಿಲ್ಲಿ ಉಚ್ಚ ನ್ಯಾಯಾಲಯದ ಮಧ್ಯಪ್ರವೇಶದಿಂದ ವಿದ್ಯಾರ್ಥಿಗಳ ಒಕ್ಕೂಟದ ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ ಈ ಸಂಘರ್ಷ ಆರಂಭವಾಗಿತ್ತು.

  ತೆರವು ನೋಟಿಸು ಕಳುಹಿಸಿದ ವಿದ್ಯಾರ್ಥಿಗಳ ಡೀನ್ ಉಮೇಶ್ ಅಶೋಕ್ ಕದಮ್ ಅವರ ಕಚೇರಿ, ಜೆಎನ್‌ಯುಎಸ್‌ಯು ಅನ್ನು ವಿಶ್ವವಿದ್ಯಾನಿಲಯ 2018-19 ಹಾಗೂ 2019-20ರಲ್ಲಿ ಅಧಿಸೂಚಿಸಿಲ್ಲ. ಸೊತ್ತಿನ ದುರ್ಬಳಕೆ ತಡೆಯಲು ಜೆಎನ್‌ಯುಎಸ್‌ಯು ಕಚೇರಿ ತೆರವುಗೊಳಿಸಲು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಬಯಸಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News