ಹಳೇ ಬೆಂಗಳೂರಿಗರ ಮನೆ ಕಟ್ಟುವ ಕನಸಿಗೆ ಕೊಡಲಿಪೆಟ್ಟು

Update: 2019-10-16 18:58 GMT

ಮಾನ್ಯರೇ,

ಹಲವಾರು ದಶಕಗಳಿಂದ ಬೆಂಗಳೂರು ನಗರದಲ್ಲಿ ವಾಸ ಮಾಡುತ್ತಿರುವ ಲಕ್ಷಾಂತರ ಮಂದಿ ತಮ್ಮ ಹಳೆಯ ಮನೆಗಳನ್ನು ಕೆಡವಿ ಹೊಸ ಮನೆಗಳನ್ನು ಕಟ್ಟುವ ಕನಸಿಗೆ ಬಿಬಿಎಂಪಿಯಿಂದ ಕೊಡಲಿಪೆಟ್ಟು ಬಿದ್ದಿದೆ. ಇಷ್ಟು ದಿನ ಹಸಿರು ಪೀಠದ ನ್ಯಾಯಾಲಯದ ಆದೇಶವನ್ನು ಹೇಳುತ್ತಾ ನಕ್ಷೆಯನ್ನು ನಿರಾಕರಿಸುತ್ತಿದ್ದರು. ಇದೀಗ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಹಸಿರು ಪೀಠದ ಆದೇಶ ರದ್ದಾಗಿರುವುದರಿಂದ ಮನೆಗಳನ್ನು ಕಟ್ಟಿಕೊಳ್ಳಬಹುದು ಎಂಬ ಕನಸಿಗೆ ಈಗಲೂ ನಿರಾಸೆಯಾಗುತ್ತಿದೆ. ಯಾವುದೋ ಕಾಲದಲ್ಲಿ ರೆವಿನ್ಯೂ ನಿವೇಶನಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ಮುಂದಿನ ದಿನಗಳಲ್ಲಿ ಬೆಂಗಳೂರು ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಅಭಿವೃದ್ಧಿ ಶುಲ್ಕವನ್ನು ಕಟ್ಟಿ ಖಾತೆ ಕಂದಾಯವನ್ನು ಮಾಡಿಕೊಂಡಿದ್ದಾರೆ. ಹಲವಾರು ದಶಕಗಳ ಹಿಂದೆ ಖಾಸಗಿ ಬಡಾವಣೆಗಳಲ್ಲಿ ನಿವೇಶನವನ್ನು ಪಡೆದು ಮನೆ ಕಟ್ಟಿಕೊಂಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅಥವಾ ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ ವತಿಯಿಂದ ನಿವೇಶನ ಪಡೆದಿದ್ದಾರೆ. ಹಾಗೂ ರೆವಿನ್ಯೂ ನಿವೇಶನಗಳನ್ನು ಬಿಡಿಎ ವತಿಯಿಂದ ಮರು ಹಂಚಿಕೆ ಯೋಜನೆಯಡಿಯಲ್ಲಿ ಪಡೆದುಕೊಂಡಿದ್ದಾರೆ. ಇವುಗಳಲ್ಲಿ ಲಕ್ಷಾಂತರ ಮಂದಿಯ ನಿವೇಶನಗಳು ಮೋರಿಗಳ ಪಕ್ಕದಲ್ಲೇ ಇದೆ. ಅಂದು ಯಾವ ಕಾನೂನೂ ಇರಲಿಲ್ಲ. ಇವರು ನಿವೇಶನವನ್ನು ಪಡೆದಿದ್ದಾರೆ. ಮನೆಗಳನ್ನೂ ಸಹ ನಿರ್ಮಿಸಿಕೊಂಡಿದ್ದಾರೆ. ಇದೀಗ ಬಿಬಿಎಂಪಿಯವರು ರಾಜಕಾಲುವೆ ಮತ್ತು ಮೋರಿಗಳು ಪಕ್ಕದಲ್ಲಿಯೇ ಇರುವ ಕಾರಣದಿಂದ ಮನೆಕಟ್ಟಲು ಅನುಮತಿ ನೀಡುವುದಿಲ್ಲ ಎನ್ನುತ್ತಿದ್ದಾರೆ. ಹೀಗಾದರೆ, ಇಂತಹ ನಿವೇಶನದಾರರು ಪಾಳು ಬಿದ್ದ ಮನೆಗಳಲ್ಲೇ ಇರಬೇಕೋ? ಅಥವಾ ಶಿಥಿಲಗೊಂಡಿರುವ ಮನೆಗಳು ಉರುಳಿ ಬಿದ್ದಾಗ ತಮ್ಮ ಪ್ರಾಣವನ್ನು ಕಳೆದುಕೊಂಡು ಧನ್ಯರಾಗಬೇಕೋ? ಇದೊಂದು ಗಂಭೀರವಾದ ಸಮಸ್ಯೆ.ಇಂತಹ ನಿವೇಶನಗಳನ್ನು ಪಡೆದಿರುವವರೆಲ್ಲರೂ ಬೆಂಗಳೂರಿನ ಮೂಲ ನಿವಾಸಿಗಳು ಹಾಗೂ ಬಹಳಷ್ಟು ಮಂದಿ ಕನ್ನಡಿಗರೇ ಆಗಿದ್ದಾರೆ. ಇಂತಹ ಗಂಭೀರ ಸಮಸ್ಯೆಯ ಬಗ್ಗೆ ಬೆಂಗಳೂರು ನಗರದ ಯಾವ ಚುನಾಯಿತ ಪ್ರತಿನಿಧಿಗಳೂ ಸಹ ಗಮನಹರಿಸುತ್ತಿಲ್ಲ. ಹೊಸದಾದ ಬಡಾವಣೆಗಳನ್ನು ನಿರ್ಮಿಸಿದಂತಹ ಸಂದರ್ಭದಲ್ಲಿ ಬಿಬಿಎಂಪಿ ಹೇಳುವ ಮಾರ್ಗಸೂಚಿಯನ್ನು ಅನುಸರಿಸಬಹುದು ಆದರೆ, ಹಲವಾರು ದಶಕಗಳ ಹಿಂದೆ ಅಭಿವೃದ್ಧಿಯಾಗಿರುವ ಬಡಾವಣೆಗೆ ಈ ಮಾರ್ಗಸೂಚಿ ಹೇಗೆ ಅನ್ವಯವಾಗುತ್ತದೆ.? ಸಾಮಾನ್ಯ ಜನರಿಗೆ ಮನೆ ಕಟ್ಟಿಕೊಳ್ಳಲು ಅನುಮತಿ ನೀಡದ ಬಿಬಿಎಂಪಿ ರಾಜ ಕಾಲುವೆಯ ಪಕ್ಕದಲ್ಲಿ ಮೆಟ್ರೋ ಸ್ಟೇಷನ್‌ಗಳಿಗೆ ಹೇಗೆ ಅನುಮತಿ ನೀಡಿದ್ದಾರೆ. ಸ್ಲಂ ಬೋರ್ಡ್ ಮತ್ತು ಹೌಸಿಂಗ್ ಬೋರ್ಡ್‌ವತಿಯಿಂದ ಬಹುಮಹಡಿ ಕಟ್ಟಡಗಳನ್ನು ಕಟ್ಟಲು ಹೇಗೆ ಅನುಮತಿ ನೀಡಿದ್ದಾರೆ? ದೊಡ್ಡ ದೊಡ್ಡ ಮೋರಿಗಳಲ್ಲಿ ಮೇಲ್ಸೇತುವೆಗಳ ಪಿಲ್ಲರ್‌ಗಳು ಅಥವಾ ಮೆಟ್ರೋ ರೈಲಿನ ಕಬ್ಬಿಣದ ಪಿಲ್ಲರ್‌ಗಳು ಅಳವಡಿಸಲು ಹೇಗೆ ಅನುಮತಿ ನೀಡಲಾಗಿದೆ? ಬಿಬಿಎಂಪಿಯವರು ಈ ವಿಚಾರದಲ್ಲಿ ಗಂಭೀರವಾಗಿ ಚರ್ಚಿಸಿ ಲಕ್ಷಾಂತರ ಜನರ ಸಮಸ್ಯೆಯನ್ನು ಪರಿಹರಿಸಬೇಕು ಇಲ್ಲವೇ ಮನೆ ನಿರ್ಮಾಣ ಮಾಡಲು ಅನುಮತಿ ನಿರಾಕರಿಸಿದ ಎಲ್ಲಾ ನಿವೇಶನದಾರರಿಗೆ ಪರ್ಯಾಯ ನಿವೇಶನಗಳನ್ನು ಕೊಡಬೇಕಾಗಿರುತ್ತದೆ.

ಕೆ. ಎಸ್. ನಾಗರಾಜ್

ಹನುಮಂತನಗರ, ಬೆಂಗಳೂರು

Writer - ಕೆ. ಎಸ್. ನಾಗರಾಜ್

contributor

Editor - ಕೆ. ಎಸ್. ನಾಗರಾಜ್

contributor

Similar News