ಮೃಗಾಲಯದಲ್ಲಿ ನಿಷೇಧಿತ ಪ್ರದೇಶಕ್ಕೆ ನುಗ್ಗಿ ಸಿಂಹದ ಎದುರು ಕುಳಿತ ಯುವಕ !

Update: 2019-10-17 11:39 GMT

ಹೊಸದಿಲ್ಲಿ : ದಿಲ್ಲಿಯ ಮೃಗಾಲಯದಲ್ಲಿ ಸಿಂಹವನ್ನಿರಿಸಲಾದ ಪ್ರದೇಶಕ್ಕೆ 21 ವರ್ಷದ ಯುವಕನೊಬ್ಬ ನುಗ್ಗಿದ ಘಟನೆ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.

ಆತ ಸಿಂಹವಿರುವ ಸ್ಥಳಕ್ಕೆ ಹೋಗಿದ್ದಾನೆಂದು ಅಲ್ಲಿದ್ದ ಇತರರು ಅಲ್ಲಿನ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ ತಕ್ಷಣ ಸಿಬ್ಬಂದಿ ಹಾಗೂ ಅಧಿಕಾರಿಗಳು ಅಲ್ಲಿಗೆ  ಧಾವಿಸಿ ಆತನನ್ನು ರಕ್ಷಿಸಿದ್ದಾರೆ. ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸ್ಥಳದಲ್ಲಿದ್ದ ವ್ಯಕ್ತಿಯೋರ್ವ ಈ ಘಟನೆಯ ವೀಡಿಯೋ ತೆಗೆದಿದ್ದು, ಅದರಲ್ಲಿ ಯುವಕ ಸಿಂಹದ ಎದುರು ಕುಳಿತಿರುವುದು ಕಾಣಿಸುತ್ತದೆ. ಸಿಂಹ ಇನ್ನೇನು ಆತನ ತೀರಾ ಹತ್ತಿರಕ್ಕೆ ಬಂದು ಆತನನ್ನು ದೂಡಬೇಕೆನ್ನುವಷ್ಟರಲ್ಲಿ ಆತನನ್ನು ರಕ್ಷಿಸಲಾಗಿದೆ. ಆತನಿಗೆ ಸಿಂಹ ಯಾವುದೇ ಹಾನಿಯುಂಟು ಮಾಡಿಲ್ಲ. ನೆರೆದಿದ್ದ ಜನರು ಚೀರಾಡುತ್ತಾ ಆತನಿಗೆ ವಾಪಸ್ ಬರುವಂತೆ ಬೊಬ್ಬಿಡುತ್ತಿರುವುದು ಕೂಡ ಕೇಳಿಸುತ್ತದೆ.

ಯುವಕ ಬಿಹಾರದವನೆಂದು ತಿಳಿದು ಬಂದಿದೆ. ''ಸಿಂಹವನ್ನಿರಿಸಲಾದ ಸ್ಥಳದಲ್ಲಿ ಒಂದು ಕಡೆ ಕಬ್ಬಿಣದ ಗ್ರಿಲ್ ಇದ್ದರೆ ಇನ್ನೊಂದು ಕಡೆ ಬಿದಿರಿನ ಬೇಲಿಯಿತ್ತು. ಆತ ಬಿದಿರಿನ ಬೇಲಿಯನ್ನು ಹತ್ತಿದಾಗ ಅದು ಮುರಿಯಿತು'' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News