ಪರಿಸರವಾದಿ ಬಸವಣ್ಣ

Update: 2019-10-17 18:31 GMT

ಜೀವಜಾಲದಲ್ಲಿದೆ ಚರಾಚರವೆಲ್ಲ ಎಂದು ಬಸವಣ್ಣನವರು ತಿಳಿಸಿದ್ದಾರೆ. ‘‘ಮರ ಗಿಡ ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು

ಪ್ರಾಣವ ಕೊಂದುಂಡು, ಶರೀರ ಹೊರೆವ ದೋಷಕ್ಕೆ

ಇನ್ನಾವುದು ವಿಧಿಯಯ್ಯಾ?

ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ

ಜೀವಜಾಲದಲ್ಲಿದೆ ಚರಾಚರವೆಲ್ಲ.

ಅದು ಕಾರಣ,

ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು

ನಿರ್ದೋಷಿಗಳಾಗಿ ಬದುಕಿದರು.’’

ಎಂದು ಬಸವಣ್ಣನವರು ಹೇಳುವ ಮೂಲಕ ಸಸ್ಯಗಳಿಗೂ ಜೀವವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಸ್ಯಾಹಾರ ಸೇವನೆ ಕೂಡ ಹಿಂಸೆಯನ್ನು ಅಂಟಿಸಿಕೊಂಡೇ ಇದೆ. ಅಂತೆಯೇ ಶರಣರು ತಮ್ಮ ಆಹಾರವನ್ನು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು ನಿರ್ದೋಷಿಗಳಾಗಿ ಬದುಕಿದರು.

ಅರ್ಥವಿಜ್ಞಾನಿ, ಸಮಾಜವಿಜ್ಞಾನಿ, ಮನೋವಿಜ್ಞಾನಿ, ಭಾಷಾವಿಜ್ಞಾನಿ, ತತ್ತ್ವಜ್ಞಾನಿ, ಮಹಾನ್ ಆಡಳಿತಗಾರ ಮತ್ತು ಸಮಗ್ರ ಕ್ರಾಂತಿಯ ಜನಕರಾದ ಬಸವಣ್ಣನವರು ಆತ್ಮವಿಶ್ವಾಸ ಮತ್ತು ಆತ್ಮಗೌರವದ ಪ್ರತಿಪಾದಕರಾಗಿದ್ದರು. ದಂಡರೂಪಿ ಸುಲಿಗೆಯ ಪ್ರಾಯಶ್ಚಿತ್ತವನ್ನು ಅಲ್ಲಗಳೆದು ಮನ ಪರಿವರ್ತನೆಯ ಪಶ್ಚಾತ್ತಾಪದ ದಾರಿ ತೋರಿಸಿದರು.

ಅರಿವಿನ ಮೂಲಕ ಆತ್ಮವು ಸಕಲ ಜೀವಾತ್ಮರ ಜೊತೆ ಸಂಪರ್ಕ ಹೊಂದುವಂತೆ ಮಾಡುವುದರ ಮೂಲಕ ಒಳ ಮತ್ತು ಹೊರ ಜಗತ್ತಿನ ಮಧ್ಯೆ ಸಂಬಂಧ ಕಲ್ಪಿಸಿದರು. ಒಳಗಿನ ಸ್ವಾತಂತ್ರ್ಯದ ಅರಿವು ಮತ್ತು ಹೊರಗಿನ ಕರ್ತವ್ಯಪ್ರಜ್ಞೆಯನ್ನು ಮೂಡಿಸಿದರು. ಕೆಳವರ್ಗೀಕರಣಕ್ಕೆ ಮತ್ತು ಕೆಳಜಾತೀಕರಣಕ್ಕೆ ಒಳಗಾಗುವುದರ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗಸೂಚಿಯಾದರು.

ರಾಜಪ್ರಭುತ್ವ ಅಳಿದು ಪ್ರಜಾಪ್ರಭುತ್ವ ಉದಯವಾಗುವುದರ ಕನಸು ಕಂಡರು. ಯುಗದ ಉತ್ಸಾಹವಾಗಿ ಜನಸಮುದಾಯದ ಏಳ್ಗೆಗಾಗಿ ಅಹರ್ನಿಶಿ ದುಡಿದರು.

ನ್ಯಾಯನಿಷ್ಠುರಿ: ‘‘ನ್ಯಾಯನಿಷ್ಠುರಿ; ದಾಕ್ಷಿಣ್ಯಪರ ನಾನಲ್ಲ. ಲೋಕವಿರೋಧಿ; ಶರಣನಾರಿಗಂಜುವನಲ್ಲ. ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ.’’ ಎಂದು ಬಸವಣ್ಣನವರು ಹೇಳಿದ್ದಾರೆ.

  ಬಾಗಿದ ಶಿರ ಮುಗಿದ ಕೈಯೊಂದಿಗೆ ಸದುವಿನಯದಿಂದ ಬದುಕಿದ ಬಸವಣ್ಣನವರು ಸಾಂಪ್ರದಾಯಕವಾಗಿ ಬಂದ ಸುಲಿಗೆ ವ್ಯವಸ್ಥೆಯನ್ನು ವಿರೋಧಿಸುವಲ್ಲಿ ಯಾವುದೇ ದಾಕ್ಷಿಣ್ಯವನ್ನು ತೋರಿಸುತ್ತಿರಲಿಲ್ಲ. ನ್ಯಾಯನಿಷ್ಠುರಿಯಾದ ಶರಣ ಯಾರಿಗೂ ಅಂಜುವುದಿಲ್ಲ ಎಂದು ಶರಣರ ವ್ಯಕ್ತಿತ್ವದ ವ್ಯಾಖ್ಯಾನ ಮಾಡಿದ್ದಾರೆ.

‘‘ಧರಣಿಯ ಮೇಲೊಂದು ಹಿರಿದಪ್ಪಅಂಗಡಿಯನಿಕ್ಕಿ

ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ

ಒಮ್ಮನವಾದಡೆ ಒಡನೆ ನುಡಿವನು

ಇಮ್ಮನವಾದಡೆ ನುಡಿಯನು.

ಕಾಣಿಯ ಸೋಲ ಅರ್ಧಗಾಣಿಯ ಗೆಲ್ಲ

ಜಾಣ ನೋಡವ್ವಾ ನಮ್ಮ ಕೂಡಲಸಂಗಮದೇವ.’’

ಎಂದು ಬಸವಣ್ಣನವರು ಹೇಳಿದ್ದು ಜೀವಜಾಲಸಮತೋಲನಕ್ಕೆ ಸಂಬಂಧಿಸಿದೆ. ಜಗನ್ನಿಯಾಮಕನಾದ ದೇವರು ಲೋಕವ್ಯವಹಾರ ಮಾಡುತ್ತಿದ್ದಾನೆ. ಒಮ್ಮನಸ್ಸಿನಿಂದ ಬದುಕಲು ತಿಳಿಸುತ್ತಾನೆ. ಎರಡು ಮನಸ್ಸುಳ್ಳವರ ಜೊತೆ ಆತನ ವ್ಯವಹಾರವಿಲ್ಲ. ಏಕೆಂದರೆ ಇಮ್ಮನಸ್ಸಿನಿಂದ ಜೀವಜಾಲಸಮತೋಲನಕ್ಕೆ ಹಾನಿಯುಂಟಾಗುವುದು. ಅಂತೆಯೇ ಅವನ ಸಮತೋಲನದ ವ್ಯವಹಾರದಲ್ಲಿ ಸೋಲು ಗೆಲುವುಗಳಿಲ್ಲ.

ಈ ಧೈರ್ಯ ಸುಮ್ಮನೆ ಬಂದುದಲ್ಲ. ಪರಿಸರ ಸೇರಿದಂತೆ ಎಲ್ಲರನ್ನೂ ಒಳಗೊಳ್ಳುವ ‘ಕೂಡಲಸಂಗಮದೇವ’ ಎಂಬ ಸಿದ್ಧಾಂತ ಅವರ ಮುಂದೆ ಇತ್ತು. ಆ ಸಿದ್ಧಾಂತದ ಮಹಾತೇಜದಲ್ಲಿ ಅವರಿದ್ದರು. ಅಂದರೆ ಸಮತ್ವದ ಸೈದ್ಧಾಂತಿಕ ನಿಲುವು ಅವರನ್ನು ಎಲ್ಲ ಅನಿಷ್ಟಗಳನ್ನು ಎದುರಿಸುವ ವೀರಪುರುಷನನ್ನಾಗಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News