ಮುಚ್ಚುಗಡೆ ಭೀತಿಯಲ್ಲಿ ಪಜೀರ್ ಕಂಬ್ಳಪದವು ಅನುದಾನಿತ ಹಿ.ಪ್ರಾ.ಶಾಲೆ

Update: 2019-10-18 05:46 GMT

ಮಂಗಳೂರು, ಅ.17: ಬಂಟ್ವಾಳ ತಾಲೂಕಿನ ಪಜೀರ್ ಗ್ರಾಮದ ಕಂಬ್ಳಪದವಿನಲ್ಲಿರುವ ಶ್ರೀ ರಾಧಾಕೃಷ್ಣ ಅನುದಾನಿತ ಹಿ.ಪ್ರಾ. ಶಾಲೆಯು ಮುಚ್ಚುಗಡೆಯ ಭೀತಿ ಎದುರಿಸುತ್ತಿದೆ. ಸುಮಾರು 70 ವರ್ಷದ ಇತಿಹಾಸವಿರುವ ಈ ಶಾಲೆಯನ್ನು ಉಳಿಸಲು ಕಳೆದ ಮೂರು ವರ್ಷದಿಂದ ಇಲ್ಲಿನ ಏಕೈಕ ಶಿಕ್ಷಕಿ ವಿಮಲಾ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ, ಹೊಸ ಮಕ್ಕಳ ಸೇರ್ಪಡೆಯಾಗುತ್ತಲೇ ಇಲ್ಲ. ಇದು ಮುಖ್ಯ ಶಿಕ್ಷಕಿಯ ಆತಂಕಕ್ಕೆ ಕಾರಣವಾಗಿದೆ. ಹೇಗಾದರೂ ಸರಿ, ಈ ಶಾಲೆ ಉಳಿದರೆ ಸಾಕು ಎಂದು ಅವರು ಆಶಿಸುತ್ತಿದ್ದಾರೆ.

ಅಂದಹಾಗೆ ಮಾರಪ್ಪ ಶೆಟ್ಟಿ ಎಂಬವರು ಮೇ 1, 1950ರಂದು ಈ ಶಾಲೆಯನ್ನು ಸ್ಥಾಪಿಸಿದ್ದರು. ಅದಕ್ಕಾಗಿ ಶ್ರೀ ರಾಧಾಕೃಷ್ಣ ವಿದ್ಯಾ ಸಂಸ್ಥೆಯ ವಿಸ್ವಸ್ಥ ಮಂಡಳಿ (ಟ್ರಸ್ಟ್)ಯನ್ನೂ ರಚಿಸಿದ್ದರು. 2005ರವರೆಗೂ ಈ ಶಾಲೆಯಲ್ಲಿ ಮಕ್ಕಳ ಕಲರವ ಕೇಳಿಸುತಿತ್ತು. ಯಾವಾಗ ಆಸುಪಾಸು ಖಾಸಗಿ ಆಂಗ್ಲಮಾಧ್ಯಮ ಶಾಲೆಗಳು ತಲೆ ಎತ್ತಿತ್ತೋ ಆವಾಗಿನಿಂದ ಈ ಶಾಲೆಯ ಮಕ್ಕಳ ಹಾಜರಾತಿಯಲ್ಲಿ ಇಳಿಮುಖ ಕಂಡು ಬರತೊಡಗಿತು. ಇದೀಗ ಈ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆ ಬರೇ 14. ಮುಂದಿನ ವರ್ಷ ಅಂದರೆ 2020-21ನೆ ಸಾಲಿನಲ್ಲಿ ಮಕ್ಕಳ ಸಂಖ್ಯೆಯಲ್ಲಿ ಕಡಿತವಾದೀತೇ ವಿನಃ ಹೆಚ್ಚಳವಾಗುವ ಯಾವ ಭರವಸೆಯೂ ವಿಮಲಾ ಟೀಚರ್‌ಗೆ ಇಲ್ಲ. ಆದರೆ ತನ್ನ ಅವಧಿಯಲ್ಲಿ ಶಾಲೆ ಮುಚ್ಚಲೇಬಾರದು ಎಂಬ ನಿಟ್ಟಿನಲ್ಲಿ ವಿಮಲಾ ಟೀಚರ್ ಅವಿರತ ಶ್ರಮ ವಹಿಸುತ್ತಿದ್ದಾರೆ.

►ಅಂದು ತರಗತಿ ತುಂಬಾ ಮಕ್ಕಳು-ಇಂದು ಪಾಳು ಬಿದ್ದಂತಿದೆ: ಒಂದು ಕಾಲದಲ್ಲಿ ಈ ಶಾಲೆಯ ಪ್ರತಿಯೊಂದು ತರಗತಿಯಲ್ಲೂ ಮಕ್ಕಳು ತುಂಬಿ ತುಳುಕುತ್ತಿದ್ದರು. ಅಂದರೆ, ಸುಮಾರು 600ರಷ್ಟು ಮಕ್ಕಳು ಇಲ್ಲಿ ಕಲಿಯುತ್ತಿದ್ದರು. ಉತ್ತಮ ಶಿಕ್ಷಣವೂ ಲಭಿಸುತ್ತಿದ್ದ ಕಾರಣ ಅರ್ಕಾಣ, ನಡುಪದವು, ಮುಡಿಪು, ಕೊಣಾಜೆ ಪದವು, ಪಾಣೇಲ, ತಂಜರೆ ಮತ್ತಿತರ ಆಸುಪಾಸಿನ ಮಕ್ಕಳು ಈ ಶಾಲೆಯ ಮೆಟ್ಟಿಲು ಹತ್ತುತ್ತಿದ್ದರು. ಇಲ್ಲಿ ಕಲಿತವರ ಪೈಕಿ ವಿವಿಧ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಅನೇಕರಿದ್ದಾರೆ. ಪ್ರಸಿದ್ಧಿ ಪಡೆದವರೂ ಇದ್ದಾರೆ. ಆ ಪೈಕಿ ರಾಜಕಾರಣಿ ಕೋಡಿಜಾಲ್ ಇಬ್ರಾಹೀಂ, ಜನಪ್ರತಿನಿಧಿ ಉಮ್ಮರ್ ಪಜೀರ್, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹೈದರ್ ಪರ್ತಿಪ್ಪಾಡಿ, ಪಜೀರ್ ಗ್ರಾಪಂ ಅಧ್ಯಕ್ಷ ಸೀತಾರಾಮ ಶೆಟ್ಟಿ, ವಿಜಯ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಸೀತಾರಾಂ ಸಪಲ್ಯ, ವೆಂಕಪ್ಪ ಪೂಜಾರಿ, ಯಕ್ಷಗಾನ ಕಲಾವಿದ ಲೋಕನಾಥ ಶೆಟ್ಟಿ, ಫಜೀರು ಮಸೀದಿಯ ಅಧ್ಯಕ್ಷ ಹಾಜಿ ರಝಾಕ್ ಫಜೀರ್, ರಹ್ಮಾನ್ ದುಬೈ ಮತ್ತಿತರರು ಸೇರಿದ್ದಾರೆ. ದೇಶ ವಿದೇಶಗಳಲ್ಲೂ ಉದ್ಯೋಗ, ಉದ್ಯಮಿಯಾಗಿ ದೊಡ್ಡ ಹೆಸರು ಗಳಿಸಿದ ಅನೇಕರಿದ್ದಾರೆ. ಸರಕಾರಿ , ಖಾಸಗಿ ಕಂಪೆನಿಗಳ ಹುದ್ದೆಯಲ್ಲಿದ್ದಾರೆ. ಇವರೆಲ್ಲಾ ಸೇರಿ ಚರ್ಚೆ ನಡೆಸಿ ಶಾಲೆಯ ಉಳಿವಿಗಾಗಿ ಪ್ರಯತ್ನಪಡಲಿ ಎಂಬುದು ವಿಮಲಾ ಟೀಚರ್‌ರ ಆಸೆ.

ಮಾಸಿಕ 10 ಸಾವಿರಕ್ಕೂ ಅಧಿಕ ವ್ಯಯಿಸುವ ಶಿಕ್ಷಕಿ

ಅಂದಹಾಗೆ, ಕಳೆದ 27 ವರ್ಷದಿಂದ ಇಲ್ಲಿ ಸೇವೆ ಸಲ್ಲಿಸುವ ವಿಮಲಾ ಟೀಚರ್ ಸದ್ಯ ಮುಖ್ಯ ಶಿಕ್ಷಕಿಯೂ ಆಗಿದ್ದಾರೆ. ಈ ಶಾಲೆಯನ್ನು ಉಳಿಸಲು ಅವರು ಪಡುವ ಪಾಡು ಅಷ್ಟಿಷ್ಟಲ್ಲ. ಇಲ್ಲೇ ಕಲಿತ ಇವರ ಮಕ್ಕಳು ಒಳ್ಳೆಯ ಉದ್ಯೋಗದಲ್ಲಿರುವ ಕಾರಣ ತನಗೆ ದೊರೆತ ಸಂಬಳದ ಪೈಕಿ ಮಾಸಿಕ ಕನಿಷ್ಠ 10 ಸಾವಿರ ರೂ.ವನ್ನು ವ್ಯಯಿಸುತ್ತಾರೆ. 14 ಮಕ್ಕಳನ್ನು ಶಾಲೆಯಿಂದ ಮನೆಗೆ, ಮನೆಯಿಂದ ಶಾಲೆಗೆ ಶಾಲೆಗೆ ಕರೆದೊಯ್ಯಲು ರಿಕ್ಷಾವೊಂದನ್ನು ಗೊತ್ತುಪಡಿಸಿದ್ದಾರೆ. ಅವರಿಗೆ ಮಾಸಿಕ 1 ಸಾವಿರ ರೂ. ಬಾಡಿಗೆ ನೀಡುತ್ತಾರೆ. ಅಲ್ಲದೆ, ಶಾಲೆಯ ವಿದ್ಯುತ್ ಬಿಲ್ಲನ್ನು ಕೂಡ ಇವರೇ ಭರಿಸುತ್ತಾರೆ. 2 ಅಥವಾ 3 ವರ್ಷಕ್ಕೊಮ್ಮೆ ಬಣ್ಣ ಬಲಿಯುವ ವ್ಯವಸ್ಥೆ ಮಾಡುತ್ತಾರೆ. ಶಾಲೆಯ ಆಟದ ಮೈದಾನದಲ್ಲಿ ಬೆಳೆದ ಗಿಡಗಂಟಿಯನ್ನು ತೆಗೆಸುತ್ತಾರೆ. ಅಷ್ಟೇ ಅಲ್ಲ, ಕಳೆದ ಮೂರು ವರ್ಷಗಳಿಂದ ಇಬ್ಬರು ಅತಿಥಿ ಶಿಕ್ಷಕಿಯರಿಗೆ ಮಾಸಿಕ ತಲಾ 3 ಸಾವಿರ ರೂ.ನೀಡಿ ಪಾಠ ಬೋಧಿಸುತ್ತಾರೆ. ಅಷ್ಟೇ ಅಲ್ಲ, ದಾನಿಗಳ ನೆರವು ಪಡೆದು ಸಮವಸ್ತ್ರ, ಶೂ, ಸಾಕ್ಸ್, ಪುಸ್ತಕ, ಗುರುತಿನ ಚೀಟಿ ಇತ್ಯಾದಿಯನ್ನು ಪೂರೈಸಿ ಖಾಸಗಿ ಶಾಲೆಯ ಮಕ್ಕಳಿಗಿಂತ ತಾವೇನೂ ಕಡಿಮೆ ಇಲ್ಲ ಎಂದು ವಿದ್ಯಾರ್ಥಿಗಳಲ್ಲಿ ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಅಕ್ಷರ ದಾಸೋಹದ ಹಾಲು, ಊಟವಲ್ಲದೆ ಮುಡಿಪುವಿನಲ್ಲಿರುವ ಇನ್ಫೋಸಿಸ್ ಕಂಪೆನಿಯಿಂದ ಮಧ್ಯಾಹ್ನದ ವೇಳೆ ಮಕ್ಕಳಿಗೆ ಹಾಲನ್ನೂ ಪೂರೈಸುವಂತೆ ಮಾಡಿದ್ದಾರೆ. ಹೀಗೆ ಶಾಲೆಯ ಉಳಿವಿಗಾಗಿ ಸದ್ದಿಲ್ಲದೆ ಹೋರಾಟ ಮಾಡುತ್ತಲೇ ಬಂದಿರುವ ವಿಮಲಾ ಟೀಚರ್ ಹೇಗಾದರೂ ಸರಿ, ಈ ಶಾಲೆ ಉಳಿಯಬೇಕು ಎಂದು ಆಶಿಸುತ್ತಾರೆ.

ಚಿತ್ರಣ ಬದಲು....

2005ರವರೆಗೂ ಇಲ್ಲಿ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದರು. ಆಟದ ಸಮಯದಲ್ಲಿ ಶಾಲಾ ಅಂಗಳ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು. ಇದೀಗ ಶಾಲೆಯ ಸುತ್ತಲೂ ಹುಲ್ಲು, ಗಿಡಗಳು ಆವರಿಸಿಕೊಂಡಿದೆ. ಶಾಲೆಯ ಚಿತ್ರಣ ಬದಲಾಗಿದೆ. ಕಿಟಕಿ, ಬಾಗಿಲುಗಳು ಗೆದ್ದಲಿಗೆ ಆಹಾರವಾಗಿದೆ. ಕೊಠಡಿಗಳು ಬಿಕೋ ಎನ್ನುತ್ತಿವೆ. ಬೆಂಚು-ಡೆಸ್ಕ್ ಗಳು ಮುರಿದಂತಿವೆ. ಹಾಗಾಗಿ ಹಳೆಯ ಚಿತ್ರಣ ಮರುಕಳಿಸಬೇಕಾದರೆ ಶಾಲೆಯ ಸ್ಥಾಪಕ ಮಾರಪ್ಪ ಶೆಟ್ಟಿಯ ಕುಟುಂಬಸ್ಥರು ‘ಮನಸ್ಸು’ ಮಾಡಬೇಕು ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.

 

ನಮ್ಮ ತಂದೆ ಸ್ಥಾಪಿಸಿದ ಶಾಲೆಯಿದು. ಅಭಿವೃದ್ಧಿಯ ನಿಟ್ಟಿನಲ್ಲಿ ಕಳೆದ 2 ವರ್ಷದಿಂದ ಸರಕಾರದಿಂದ ಯಾವುದೇ ಅನುದಾನವೂ ಸಿಕ್ಕಿಲ್ಲ. ಆದರೂ ಈ ಶಾಲೆಯನ್ನು ಉಳಿಸಬೇಕು ಎಂಬ ಆಸೆ ಇದೆ. ಆದರೆ, ಮಕ್ಕಳೇ ಬರುತ್ತಿಲ್ಲ. ಆಸುಪಾಸಿನ ಮಕ್ಕಳೆಲ್ಲಾ ಇಂಗ್ಲಿಷ್ ಮಾಧ್ಯಮ ಶಾಲೆಯತ್ತ ಹೋಗುತ್ತಿದ್ದಾರೆ. ಮಕ್ಕಳೇ ಇಲ್ಲದ ಮೇಲೆ ಶಾಲೆಯನ್ನು ಹೇಗೆ ಉಳಿಸುವುದು ಎಂಬುದು ನಮಗೆ ಸಮಸ್ಯೆಯಾಗಿದೆ. ಶಾಲೆ ಉಳಿಯಬೇಕಾದರೆ ತರಗತಿ ತುಂಬ ಮಕ್ಕಳು ಬೇಕು. ಅದಕ್ಕಾಗಿ ಇಲ್ಲಿ ಕಲಿತು ಉನ್ನತ ಸ್ಥಾನದಲ್ಲಿರುವವರ ಸಹಿತ ಹಳೆ ವಿದ್ಯಾರ್ಥಿಗಳ ಸಭೆಯೊಂದನ್ನು ಕರೆಯಬೇಕು ಎಂಬ ಇಚ್ಛೆ ಇದೆ.

-ನೀಲಮಣಿ,

ಸಂಚಾಲಕಿ,

ಶ್ರೀ ರಾಧಾಕೃಷ್ಣ ಅನುದಾನಿತ ಹಿ.ಪ್ರಾ. ಶಾಲೆ

ಒಂದು ಕಾಲದಲ್ಲಿ ಯುನಿವರ್ಸಿಟಿಯಂತಿದ್ದ ಈ ಶಾಲೆ ಈಗ ಅಕ್ಷರಶಃ ಅಂಗನಾಡಿಯಂತಾಗಿದೆ. 7 ಕೊಠಡಿಗಳಿದ್ದ ಈ ಶಾಲೆಯ ನಾಲ್ಕೈದು ಕೊಠಡಿಗಳು ಈಗ ವಿದ್ಯಾರ್ಥಿಗಳಿಲ್ಲದೆ ಬಿಕೋ ಅನ್ನುತ್ತಿವೆ. ಈ ಶಾಲೆಯ ಉಳಿವಿಗಾಗಿ ವಿಮಲಾ ಟೀಚರ್ ಸತತ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇಲ್ಲಿ ಕಲಿತ ಅನೇಕ ಮಂದಿ ಇಂದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಹೆಚ್ಚಿನವರಿಗೆ ಇದು ಬೇಡ ಎಂಬಂತಾಗಿದೆ. ಮನಸ್ಸು ಮಾಡಿದರೆ ಈ ಶಾಲೆಯನ್ನು ಹಳೆ ವಿದ್ಯಾರ್ಥಿಗಳೇ ಉಳಿಸಬಹುದು. ನಾನು ಶಾಲೆಯ ಉಳಿವಿಗಾಗಿ ಹಲವು ರೀತಿಯ ಪ್ರಯತ್ನ ಪಟ್ಟಿದ್ದೆ. ಆದರೆ, ವಿದೇಶದಲ್ಲಿರುವುದರಿಂದ ನನ್ನ ಪ್ರಯತ್ನವೆಲ್ಲಾ ವಿಫಲವಾಯಿತು. ಶಾಲೆಯ ಇಂದಿನ ಸ್ಥಿತಿ ದಯನೀಯವಾಗಿದೆ. ಶಾಲೆಯ ಉಳಿವಿಗಾಗಿ ವಿಮಲಾ ಟೀಚರ್ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಅವರೊಂದಿಗೆ ಹಳೆ ವಿದ್ಯಾರ್ಥಿಗಳಾದ ನಾವು ಕೂಡ ಕೈ ಜೋಡಿಸಬೇಕಿದೆ.

-ಇಸ್ಹಾಕ್ ಸಿ.ಐ.ಫಜೀರ್

(ಹಳೆ ವಿದ್ಯಾರ್ಥಿ)

 

ನಾನು ಇತ್ತೀಚೆಗಷ್ಟೇ ಬಂಟ್ವಾಳಕ್ಕೆ ವರ್ಗಾವಣೆಗೊಂಡು ಬಂದಿರುವೆ. ಕ್ಷೇತ್ರ ವ್ಯಾಪ್ತಿಯ ಶಾಲೆಗಳ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ಕಂಬ್ಳಪದವು ಶಾಲೆಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಇಲ್ಲ. ಶಾಲೆಯ ಉಳಿವಿಗೆ ಇಲಾಖೆ ಪ್ರಯತ್ನಿಸಲಿದೆ. ನಾನು ಕೂಡ ಆದ್ಯತೆಯ ನೆಲೆಯಲ್ಲಿ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವೆ.

-ಜ್ಞಾನೇಶ್,

ಕ್ಷೇತ್ರ ಶಿಕ್ಷಣಾಧಿಕಾರಿ,ಬಂಟ್ವಾಳ

ನನ್ನಿಂದಾಗಿ ಶಾಲೆ ಮುಚ್ಚಿತು ಅಂತ ಯಾರೂ ಹೇಳಬಾರದು. ನನ್ನ ಅವಧಿಯಲ್ಲೂ ಶಾಲೆ ಮುಚ್ಚಬಾರದು ಎಂಬ ನಿಟ್ಟಿನಲ್ಲಿ ಈ ಶಾಲೆ ಉಳಿಸಲು ನನ್ನಿಂದಾದ ಪ್ರಯತ್ನ ಮಾಡುತ್ತಲಿದ್ದೇನೆ. ಶಾಲೆಯ ಆಡಳಿತ ಮಂಡಳಿಯವರು ಕೂಡ ಶಾಲೆಯ ಉಳಿವಿಗಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಏನು ಮಾಡುವುದು? ಈಗ ಶ್ರೀಮಂತರು ಮಾತ್ರವಲ್ಲ, ಆರ್ಥಿಕವಾಗಿ ಹಿಂದುಳಿದವರಿಗೂ ಕೂಡ ಆಂಗ್ಲಮಾಧ್ಯಮ ಶಾಲೆಯೇ ಬೇಕು. ಅದರಲ್ಲಿ ತಪ್ಪೇನಿಲ್ಲ. ಆದರೆ, ನಾವೆಲ್ಲಾ ಸೇರಿ ಶಾಲೆಯ ಉಳಿವಿಗೆ ಏನಾದರೂ ಮಾಡಬೇಕಲ್ಲವೇ? ನನಗೆ ಕಷ್ಟವಾದರೂ ತೊಂದರೆ ಇಲ್ಲ. ಇಬ್ಬರು ಅತಿಥಿ ಶಿಕ್ಷಕರಿಗೆ ವೇತನ, ರಿಕ್ಷಾ ಬಾಡಿಗೆ, ವಿದ್ಯುತ್ ಬಿಲ್ ಎಂದೆಲ್ಲಾ ಮಾಸಿಕ 10 ಸಾವಿರ ರೂ. ವ್ಯಯಿಸುತ್ತಿದ್ದೇನೆ. ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ. ಶಾಲೆ ಉಳಿಯಬೇಕು.

-ವಿಮಲಾ,

ಮುಖ್ಯ ಶಿಕ್ಷಕಿ, ಶ್ರೀ ರಾಧಾಕೃಷ್ಣ ಅನುದಾನಿತ ಹಿ.ಪ್ರಾ. ಶಾಲೆ

 

 

 

 

 

 

 

 

 

 

 

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News