'ಬ್ಯಾಂಕ್ ಮುಳುಗಿದರೆ ಗ್ರಾಹಕರಿಗೆ 1 ಲಕ್ಷ ರೂ. ಮಾತ್ರ ವಾಪಸ್': ಪಾಸ್ ಪುಸ್ತಕದ ಫೋಟೊ ವೈರಲ್

Update: 2019-10-18 10:27 GMT

ಹೊಸದಿಲ್ಲಿ, ಅ.18: ಎಚ್‍ ಡಿಎಫ್‍ ಸಿ ಬ್ಯಾಂಕ್ ನ ಪಾಸ್ ಪುಸ್ತಕದಲ್ಲಿ ಠೇವಣಿಯ ವಿಮಾ ಸ್ಟ್ಯಾಂಪ್ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬ್ಯಾಂಕ್ ನ ಗ್ರಾಹಕರಲ್ಲಿ ಗೊಂದಲ ಸೃಷ್ಟಿಸಿತ್ತು. ನಂತರ ಈ ಬಗ್ಗೆ ಬ್ಯಾಂಕ್ ಸ್ಪಷ್ಟೀಕರಣ ನೀಡಿದ್ದು, ಈ ಠೇವಣಿ ವಿಮಾ ಮೊತ್ತದ ಕುರಿತಾದ ಸ್ಟ್ಯಾಂಪ್ ಹೊಸತೇನಲ್ಲ ಹಾಗೂ ಆರ್‍ಬಿಐನ ಜೂನ್ 22, 2017ರ ಸುತ್ತೋಲೆಯಂತೆ ಸೇರಿಸಲಾಗಿದೆ ಎಂದು ತಿಳಿಸಿದೆ.

"ಬ್ಯಾಂಕ್ ನ ಠೇವಣಿಗಳಿಗೆ ಡಿಐಸಿಜಿಸಿಯಲ್ಲಿ ವಿಮೆಯಿದ್ದು, ಒಂದು ವೇಳೆ ಬ್ಯಾಂಕ್ ಮುಚ್ಚಿದ್ದಲ್ಲಿ ಡಿಐಸಿಜಿಸಿ ಎರಡು ತಿಂಗಳೊಳಗೆ  ಠೇವಣಿದಾರನಿಗೆ ಒಂದು ಲಕ್ಷ ರೂಪಾಯಿ ತನಕದ ಠೇವಣಿಯನ್ನು ವಾಪಸ್ ಮಾಡುತ್ತದೆ'' ಎಂದು ಪಾಸ್ ಬುಕ್ ನಲ್ಲಿ ಬರೆಯಲಾಗಿರುವ ಚಿತ್ರ ವೈರಲ್ ಆಗಿತ್ತು.

"ಇದು ಠೇವಣಿ ವಿಮಾ ಮೊತ್ತದ ಮಾಹಿತಿ. ಎಲ್ಲಾ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು, ಸಣ್ಣ ಬ್ಯಾಂಕುಗಳು ಈ ಮಾಹಿತಿಯನ್ನು ಪಾಸ್ ಪುಸ್ತಕದಲ್ಲಿ ಸ್ಪಷ್ಟವಾಗಿ ನಮೂದಿಸಬೇಕೆಂದು ಆರ್‍ ಬಿಐನ ಜೂನ್ 22, 2017ರ ಸುತ್ತೋಲೆಯಲ್ಲಿ ತಿಳಿಸಲಾಗಿದೆ'' ಎಂದು ಎಚ್‍ಡಿಎಫ್‍ ಸಿ ಬ್ಯಾಂಕ್ ಹೇಳಿದೆ.

ಪಿಎಂಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಅವರ ಸಂಪೂರ್ಣ ಠೇವಣಿಯನ್ನು ವಾಪಸ್ ನೀಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಒಬ್ಬ ಗ್ರಾಹಕ ಒಂದು ಬ್ಯಾಂಕ್ ನಲ್ಲಿ ಒಂದು ಲಕ್ಷಕ್ಕಿಂತಲೂ ಅಧಿಕ ಠೇವಣಿ ಹೊಂದಿದ್ದರೂ ಬ್ಯಾಂಕ್ ಮುಚ್ಚಿದಲ್ಲಿ ಆತನಿಗೆ  ಗರಿಷ್ಠ ರೂ 1 ಲಕ್ಷ ವಿಮಾ ಮೊತ್ತ ಮಾತ್ರ ಲಭಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News