ವಿದೇಶಗಳಿಂದ ನ್ಯಾಯಾಂಗ ನೆರವಿಗೆ ಡಿಆರ್‌ಐ ಕೋರಿಕೆ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್

Update: 2019-10-18 14:30 GMT

ಮುಂಬೈ,ಅ.18: ಅದಾನಿ ಎಂಟರ್ ಪ್ರೈಸಸ್ ತಾನು ಆಮದು ಮಾಡಿಕೊಂಡಿದ್ದ ಕಲ್ಲಿದ್ದಲಿನ ಮೌಲ್ಯವನ್ನು ಹೆಚ್ಚಾಗಿ ನಮೂದಿಸಿದ್ದರ ಕುರಿತು ತನಿಖೆ ನಡೆಸುತ್ತಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ವು ಸಾಗರೋತ್ತರ ಕಂಪನಿಗಳ ವಿಚಾರಣೆಯಲ್ಲಿ ನ್ಯಾಯಾಂಗ ನೆರವು ಕೋರಿ ವಿದೇಶಗಳಿಗೆ ಕಳುಹಿಸಿದ್ದ ಎಲ್ಲ ವಿಧ್ಯುಕ್ತ ಮನವಿ ಪತ್ರಗಳನ್ನು ಬಾಂಬೆ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ.

 2011ರಿಂದ 2015ರವರೆಗಿನ ಅವಧಿಯಲ್ಲಿ ಇಂಡೋನೇಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದ್ದ ಕಲ್ಲಿದ್ದಲಿನ ಮೌಲ್ಯವನ್ನು ಹೆಚ್ಚಾಗಿ ನಮೂದಿಸಲಾಗಿದ್ದ ಆರೋಪದಲ್ಲಿ ಅದಾನಿ ಗ್ರೂಪ್,ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್ ಮತ್ತು ಎಸ್ಸಾರ್ ಗ್ರೂಪ್‌ನ ಸಂಸ್ಥೆಗಳು ಸೇರಿದಂತೆ ಕನಿಷ್ಠ 40 ಕಂಪನಿಗಳ ವಿರುದ್ಧ ಡಿಆರ್‌ಐ ತನಿಖೆ ನಡೆಸುತ್ತಿದೆ.

ಇಂಡೋನೇಷ್ಯಾದಿಂದ ಕಲ್ಲಿದ್ದಲನ್ನು ಭಾರತಕ್ಕೆ ನೇರವಾಗಿ ಆಮದು ಮಾಡಿಕೊಳ್ಳಲಾಗಿತ್ತು, ಆದರೆ ಹೆಚ್ಚು ಮೌಲ್ಯವನ್ನು ತೋರಿಸಲು ಇತರ ದೇಶಗಳಲ್ಲಿಯ ಮಧ್ಯವರ್ತಿ ಸಂಸ್ಥೆಗಳ ಮೂಲಕ ಆಮದು ಇನ್‌ವೈಸ್‌ಗಳನ್ನು ಕಳುಹಿಸಲಾಗಿತ್ತು ಮತ್ತು ಈ ಮಧ್ಯವರ್ತಿ ಸಂಸ್ಥೆಗಳು ಭಾರತೀಯ ಕಂಪನಿಗಳ ಅಧೀನ ಸಂಸ್ಥೆಗಳಾಗಿದ್ದವು ಎಂದು ಡಿಆರ್‌ಐ 2016,ಮಾರ್ಚ್‌ನಲ್ಲಿ ಆರೋಪಿಸಿತ್ತು.

 ವಿದೇಶಗಳಿಂದ ನ್ಯಾಯಾಂಗ ನೆರವಿಗಾಗಿ ಮುಂಬೈ ಮಹಾನಗರ ಮ್ಯಾಜಿಸ್ಟ್ರೇಟ್‌ರಿಂದ ವಿಧ್ಯುಕ್ತ ಮನವಿ ಪತ್ರಗಳನ್ನು ಪಡೆದುಕೊಂಡಿದ್ದ ಡಿಆರ್‌ಐ ಅವುಗಳನ್ನು ಹಾಂಗ್‌ಕಾಂಗ್, ಸ್ವಿಝರ್‌ಲ್ಯಾಂಡ್,ಯುಎಇ ಮತ್ತು ಸಿಂಗಾಪುರಗಳಂತಹ ದೇಶಗಳಿಗೆ ರವಾನಿಸಿತ್ತು. ಈ ಮನವಿ ಪತ್ರಗಳನ್ನು ರದ್ದುಗೊಳಿಸುವಂತೆ ಕೋರಿ ಅದಾನಿ ಗ್ರೂಪ್ 2018,ಆಗಸ್ಟ್‌ನಲ್ಲಿ ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು.

ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯವು ಅದಾನಿ ಗ್ರೂಪ್ ಪರವಾಗಿ ಮಧ್ಯಂತರ ತಡೆಯಾಜ್ಞೆಯನ್ನು ನೀಡಿತ್ತು. ಇದರ ವಿರುದ್ಧ ಡಿಆರ್‌ಐ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿತ್ತು. 2019ರ ಜೂನ್‌ನೊಳಗೆ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಆಗ ಸರ್ವೋಚ್ಚ ನ್ಯಾಯಾಲಯವು ಬಾಂಬೆ ಉಚ್ಚ ನ್ಯಾಯಾಲಯಕ್ಕೆ ನಿರ್ದೇಶ ನೀಡಿತ್ತು.

ಮ್ಯಾಜಿಸ್ಟ್ರೇಟ್‌ರೋರ್ವರು ಸಿಆರ್‌ಪಿಸಿಯಡಿ ಸ್ಥಾಪಿತ ಪ್ರಕ್ರಿಯೆಗಳನ್ನು ಅನುಸರಿಸದೆ ಮನವಿ ಪತ್ರಗಳನ್ನು ಹೊರಡಿಸುವಂತಿಲ್ಲ ಎಂಬ ಅದಾನಿ ಗ್ರೂಪ್‌ನ ವಾದವನ್ನು ಎತ್ತಿಹಿಡಿದಿರುವ ನ್ಯಾಯಮೂರ್ತಿಗಳಾದ ರಂಜಿತ್ ಮೋರೆ ಮತ್ತು ಭಾರತಿ ಎಚ್.ಡಾಂಗ್ರೆ ಅವರ ಪೀಠವು ಡಿಆರ್‌ಐ ವಿದೇಶಗಳಿಗೆ ಸಲ್ಲಿಸಿದ್ದ ಎಲ್ಲ ಮನವಿ ಪತ್ರಗಳನ್ನು ರದ್ದುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News