ಹಣ ಹಿಂಪಡೆಯುವಿಕೆಯ ಮೇಲೆ ಆರ್‌ಬಿಐ ನಿರ್ಬಂಧಗಳ ರದ್ದತಿ ಕೋರಿದ್ದ ಅರ್ಜಿ ವಜಾ

Update: 2019-10-18 14:48 GMT

 ಹೊಸದಿಲ್ಲಿ,ಅ.18: ಬಿಕ್ಕಟ್ಟಿನಲ್ಲಿರುವ ಪಿಎಂಸಿ ಬ್ಯಾಂಕಿನ ಗ್ರಾಹಕರು ಹಣವನ್ನು ಹಿಂಪಡೆಯುವುದರ ಮೇಲೆ ಆರ್‌ಬಿಐ ವಿಧಿಸಿರುವ ನಿರ್ಬಂಧಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ. ತಾವು ಠೇವಣಿಯಿರಿಸಿರುವ ಹಣಕ್ಕೆ ಸಂಪೂರ್ಣ ರಕ್ಷಣೆ ಮತ್ತು ವಿಮೆ ಒದಗಿಸಬೇಕು ಎಂದೂ ಬ್ಯಾಂಕ್ ಖಾತೆದಾರರು ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಲಾಗಿತ್ತು.

ಸೂಕ್ತ ಪರಿಹಾರಕ್ಕಾಗಿ ಆಯಾ ಉಚ್ಚ ನ್ಯಾಯಾಲಯಗಳನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು,ವಿಧಿ 32ರಡಿ ಈ ಅರ್ಜಿಯನ್ನು ನಾವು ಅಂಗೀಕರಿಸುತ್ತಿಲ್ಲ ಎಂದು ತಿಳಿಸಿದರು.

ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಕೇಂದ್ರಕ್ಕೆ ಅರಿವಿದೆ ಮತ್ತು ತಪ್ಪಿತಸ್ಥರ ವಿರುದ್ಧ ಜಾರಿ ನಿರ್ದೇಶನಾಲಯವು ಸೂಕ್ತ ಕ್ರಮವನ್ನು ಕೈಗೊಳ್ಳುತ್ತದೆ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಹೇಳಿದರು.

ಅರ್ಜಿದಾರ,ದಿಲ್ಲಿಯ ಬಿಜೋನ್ ಕುಮಾರ ಮಿಶ್ರಾ ಅವರ ಪರ ವಕೀಲ ಶಶಾಂಕ ಸುಧಿ ಅವರು,ತನ್ನ ಕಕ್ಷಿದಾರರು 500 ಖಾತೆದಾರರ ಪರವಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿದಾರರು ನಾಲ್ಕು ಬೇರೆ ಬೇರೆ ರಾಜ್ಯಗಳಿಗೆ ಸೇರಿರುವುದರಿಂದ ವಿಷಯದಲ್ಲಿ ಹಸ್ತಕ್ಷೇಪ ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News