ವಾಯುಯಾನ ಹಗರಣ: ಯಾಸ್ಮೀನ್ ಕಪೂರ್‌ಗೆ ನ್ಯಾಯಾಂಗ ಬಂಧನ

Update: 2019-10-18 14:55 GMT

ಹೊಸದಿಲ್ಲಿ,ಅ.18: ಅಕ್ರಮ ವಾಯುಯಾನ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಕಾರ್ಪೊರೇಟ್ ಲಾಬಿಗಾರ ದೀಪಕ್‌ ತಲ್ವಾರ್ ಅವರ ನಿಕಟವರ್ತಿ ಯಾಸ್ಮೀನ್ ಕಪೂರ್ ಗೆ ನವೆಂಬರ್ 1ರವರೆಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ.

ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಏರ್‌ ಇಂಡಿಯಾದ ಲಾಭದಾಯಕ ವಿಮಾನಯಾನ ಮಾರ್ಗಗಳನ್ನು ಲಭಿಸುವಂತೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಯಾಸ್ಮಿನ್ ಕಪೂರ್‌ಳನ್ನು ಇತ್ತೀಚೆಗೆ ಬಂಧಿಸಲಾಗಿತ್ತು.

ವಿದೇಶಿ ವಿನಿಮಯ ಉಲ್ಲಂಘನೆಯ ಆರೋಪದಲ್ಲಿಯೂ ಯಾಸ್ಮೀನ್ ಕಪೂರ್ ಅವರನ್ನು ಆರೋಪಿಯಾಗಿ ಹೆಸರಿಸಲಾಗಿದೆ. ಈ ಹಗರಣದಲ್ಲಿ ಯಾಸ್ಮೀನ್ ಕಪೂರ್‌ಗೆ ಈ ವರ್ಷದ ಮಾರ್ಚ್ 22ರಂದು ಜಾಮೀನು ದೊರೆತಿತ್ತು. ಆದರೆ ಆಕೆ ತನಗೆ ದೊರೆತ ನಿರೀಕ್ಷಣಾ ಜಾಮೀನನ್ನ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಜಾರಿ ನಿರ್ದೇಶನಾಲಯ ಆಪಾದಿಸಿದ ಬಳಿಕ ದಿಲ್ಲಿ ನ್ಯಾಯಾಲಯವು, ಆಕೆಯ ಜಾಮೀನನ್ನು ರದ್ದುಪಡಿಸಿದೆ.

  ಕಾರ್ಪೋರೇಟ್ ಲಾಬಿಗಾರ ದೀಪಕ್ ತಲ್ವಾರ್ ಹಾಗೂ ಇನ್ನೋರ್ವ ದುಬೈ ನಲ್ಲಿ ನೆಲೆಸಿರುವ ಉದ್ಯಮಿ ರಾಜೀವ್ ಸಕ್ಸೇನಾ ಅವರನ್ನು ಈ ವರ್ಷದ ಆರಂಭದಲ್ಲಿ ದುಬೈ ಸರಕಾರ ಗಡಿಪಾರು ಮಾಡಿತ್ತು.

ದೀಪಕ್ ತಲ್ವಾರ್ ಅವರು ತನಗಿರುವ ಸಂಪರ್ಕಗಳನ್ನು ಬಳಸಿಕೊಂಡು, ಖಾಸಗಿ ವಾಯುಯಾನ ಸಂಸ್ಥೆಗಳಿಗೆ ಲಾಭದಾಯಕವಾದ ವಿಮಾನಸಂಚಾರ ಮಾರ್ಗಗಳನ್ನು ದೊರಕಿಸಿಕೊಡುವುದಕ್ಕಾಗಿ 2008-09ರ ಸಾಲಿನಲ್ಲಿ 272 ಕೋಟಿ ರೂ.ವರೆಗೆ ಲಂಚ ಸ್ವೀಕರಿಸಿದ್ದರು ಎಂದು ಇ.ಡಿ. ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News