ಎಲ್ಲಾ ಸಿಆರ್‌ಪಿಎಫ್ ಯೋಧರಿಗೆ ಪಡಿತರ ಭತ್ಯೆಗೆ ಕೇಂದ್ರ ಒಪ್ಪಿಗೆ

Update: 2019-10-18 14:57 GMT

ಹೊಸದಿಲ್ಲಿ,ಅ.18: ನಿಯೋಜನೆಗೊಂಡ ಸ್ಥಳವನ್ನು ಪರಿಗಣಿಸದೆ ಕಮಾಂಡೆಂಟ್ ದರ್ಜೆಯವರೆಗಿನ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಎಲ್ಲಾ ಸಿಬ್ಬಂದಿಗೆ, ಪಡಿತರ ಭತ್ಯೆ (ಆರ್‌ಎಂಎ)ಯನ್ನು ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯ ಗುರುವಾರ ಪ್ರಕಟಿಸಿದೆ.

 ಈ ಸಂಬಂಧ ಸಿಆರ್‌ಪಿಎಫ್ ಗುರುವಾರ ಆದೇಶವೊಂದನ್ನು ಹೊರಡಿಸಿದೆ. ವಿತ್ತ ಸಚಿವಾಲಯದ ವೆಚ್ಚ ಇಲಾಖೆಯ ಜೊತೆ ಸಮಾಲೋಚನೆ ನಡೆಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆಯೆಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.

ನಿಯೋಜನೆಯಾದ ಸ್ಥಳವನ್ನು ಪರಿಗಣಿಸದೆ ಕಮಾಂಡೆಂಟ್ ದರ್ಜೆಯವರೆಗಿನ ಎಲ್ಲಾ ಸಿಆರ್‌ಪಿಎಫ್ ಸಿಬ್ಬಂದಿಗೆ ಪಡಿತರ ಭತ್ಯೆಯನ್ನು ನೀಡುವಂತೆ ದಿಲ್ಲಿ ಹೈಕೋರ್ಟ್ ಸಿಆರ್‌ಪಿಎಫ್‌ಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಚಿವಾಲಯವು ಈ ಆದೇಶವನ್ನು ನೀಡಿದೆ.

12 ವಾರಗಳೊಳಗೆ ಸಿಆರ್‌ಪಿಎಫ್‌ನ ಸಿಬ್ಬಂದಿಗೆ ಪಡಿತರ ಭತ್ಯೆಯನ್ನು ನೀಡಬೇಕಿದ್ದು, ತಪ್ಪಿದಲ್ಲಿ ಪಾವತಿ ವಿಳಂಬಕ್ಕಾಗಿ ವಾರ್ಷಿಕ ಶೇ.6ರದಲ್ಲಿ ಬಡ್ಡಿಯನ್ನು ಕೂಡಾ ನೀಡುವಂತೆ ಆದೇಶವು ತಿಳಿಸಿದೆ. ಎಲ್ಲಾ ಸಿಆರ್‌ಪಿಎಫ್ ಸಿಬ್ಬಂದಿಗೆ ಪಡಿತರ ಭತ್ಯೆ ನೀಡುವಂತೆ ಆಗ್ರಹಿಸಿ ಸಿಆರ್‌ಪಿಎಫ್ ಅಧಿಕಾರಿ ವಿಕ್ರಮ್‌ಸಿಂಗ್ ಎಂಬವರು ನ್ಯಾಯಾಲಯದ ಮೆಟ್ಟಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News