ಮಿತ್ರರಾಷ್ಟ್ರಗಳ ಜೊತೆಗೂಡಿ ಬೆದರಿಕೆಗಳನ್ನು ಎದುರಿಸುವೆವು: ಸೇನಾ ವರಿಷ್ಠ ಬಿಪಿನ್ ರಾವತ್

Update: 2019-10-18 15:03 GMT

ಹೊಸದಿಲ್ಲಿ,ಅ.1: ನೆರೆಹೊರೆಯ ದೇಶಗಳಲ್ಲಿ ಹಾಗೂ ಪ್ರದೇಶದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಕಾಪಾಡುವುದಕ್ಕೆ ಭಾರತವು ಬದ್ಧವಾಗಿದೆ. ಹಾಗೂ ಯಾವುದೇ ರೀತಿಯ ಬೆದರಿಕೆಗಳನ್ನು ಎದುರಿಸಲು ಸೇನೆಯು ಮಿತ್ರ ರಾಷ್ಟ್ರಗಳ ಜೊತೆ ಕೈಜೋಡಿಸಲಿದೆ ಯೆಂದು ಸೇನಾ ವರಿಷ್ಠ ಬಿಪಿನ್ ರಾವತ್ ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಶುಕ್ರವಾರ ನಡೆದ ರಕ್ಷಣಾ ಸಂಸ್ಥೆಯ ಪ್ರತಿನಿಧಿಗಳ ನಾಲ್ಕನೇ ಶೃಂಗಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

‘‘ಯಾವುದೇ ರೀತಿಯ ಬೆದರಿಕೆಗಳನ್ನು ಎದುರಿಸಲು ಭಾರತವು ಈ ಹಿಂದೆಯೂ ತನ್ನ ಮಿತ್ರರಾಷ್ಟ್ರಗಳ ಜೊತೆ ಕೈಜೋಡಿಸಿದ್ದು, ಭವಿಷ್ಯತ್ತಿನಲ್ಲಿಯೂ ಅದು ಮುಂದುವರಿಯಲಿದೆ’’ ಎಂದು ಜನರಲ್ ರಾವತ್ ತಿಳಿಸಿದರು.

 ಶಾಂತಿ, ಸ್ಥಿರತೆ ಹಾಗೂ ಸುವ್ಯವಸ್ಥೆಯನ್ನು ಕಾಪಾಡಬೇಕಾದರೆ ಯಾವುದೇ ದೇಶಕ್ಕೆ ಬಲಿಷ್ಠವಾದ ಸಶಸ್ತ್ರಪಡೆಗಳ ಅಗತ್ಯವಿದೆಯೆಂದು ಜನರಲ್ ರಾವತ್ ತಿಳಿಸಿದರು.

  ಅದರೆ ಶಾಂತಿ ಹಾಗೂ ಸ್ಥಿರತೆ ಕಾಪಾಡಲು ಬೇಕಾದ ಯೋಗ್ಯವಾದ ಸಾಮರ್ಥ್ಯವನ್ನು ಪಡೆಯಲು ಸೇನೆಗೆ ಉತ್ತಮವಾಗಿ ತರಬೇತಿ ಪಡೆದ ಮಾನವಶಕ್ತಿ, ಸೈನಿಕರು, ನೌಕಾಪಡೆ ಮತು ವಾಯುಪಡೆ ಸಿಬ್ಬಂದಿಯ ಅಗತ್ಯವಿದೆ. ಸೈನಿಕರ ಸಬಲೀಕರಣ ವಾಗಬೇಕಾದರೆ ಅವರಿಗೆ ಉತ್ತಮ ತರಬೇತಿ ಹಾಗೂ ಉತ್ತಮ ಗುಣಮಟ್ಟದ ಶಸ್ತ್ರಾಸ್ತ್ರ ಹಾಗೂ ಉಪಕರಣಗಳ ಅಗತ್ಯವಿದೆಯೆಂದು ಅವರು ಹೇಳಿದರು.

 ನೌಕಾಪಡೆಯ ವರಿಷ್ಠ ಅಡ್ಮಿರಲ್ ಕರಮ್‌ ಬೀರ್‌ಸಿಂಗ್ ಮಾತನಾಡಿ ಸಾಗರಪ್ರದೇಶಗಳಲ್ಲಿ ಉಲ್ಬಣಿಸುತ್ತಿರುವ ಕಡಲ್ಗಳ್ಳತನದ ಪಿಡುಗಿನ ವಿರುದ್ಧ ಎಚ್ಚರಿಕೆ ನೀಡಿದರು ಹಾಗೂ ಇದರಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೂರಗಾಮಿ ಪರಿಣಾಮಗಳಾಗಲಿವೆಯೆಂದು ಎಚ್ಚರಿಕೆ ನೀಡಿದರು.

 ಹಿಂದೂ ಮಹಾಸಾಗರ ಪ್ರದೇಶದ ಸಮಾನಮನಸ್ಕ ಸದಸ್ಯರ ಜೊತೆ ಸಹಕಾರವನ್ನು ವೃದ್ಧಿಗೊಳಿಸಲು ಭಾರತೀಯ ನೌಕಾಪಡೆಯು ಬದ್ಧವಾಗಿದೆ. ‘‘ಪ್ರಧಾನಿಯವರು ಪ್ರತಿಪಾದಿಸಿರುವ ಸಮ್ಮಾನ್ (ಗೌರವ), ಸಂವಾದ, ಸಹಯೋಗ, ಶಾಂತಿ ಹಾಗೂ ಸಮೃದ್ಧಿ ಎಂಬ ಪಂಚ  ತತ್ವಗಳ ಆಧಾರದಲ್ಲಿ ಭಾರತೀಯ ನೌಕಾಪಡೆ ಸಹಕಾರ ನೀಡಲಿದೆ’’ ಎಂದು ಕರಮ್‌ಬೀರ್ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News