ಮುಸ್ಲಿಮರ ಬಗ್ಗೆ ವಿವಾದಾತ್ಮಕ ಹೇಳಿಕೆ: ಬಿಜೆಪಿ ಅಧ್ಯಕ್ಷನಿಗೆ ಚುನಾವಣಾ ಆಯೋಗ ನೋಟಿಸ್

Update: 2019-10-18 15:43 GMT

ಮುಂಬೈ, ಅ.18: ಚುನಾವಣಾ ಪ್ರಚಾರದ ಸಂದರ್ಭ ಮುಸ್ಲಿಮರ ಬಗ್ಗೆ ವಿವಾದಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮುಂಬೈ ಬಿಜೆಪಿ ಅಧ್ಯಕ್ಷ ಮಂಗಲ್ ಪ್ರಭಾತ್ ಲೋಧಾಗೆ ಚುನಾವಣಾ ಆಯೋಗ ನೋಟಿಸ್ ಜಾರಿಗೊಳಿಸಿದೆ.

 1992ರ ಮುಂಬೈ ಗಲಭೆಯ ಸಂದರ್ಭ ಬಳಕೆಯಾದ ಬಾಂಬ್‌ಗಳನ್ನು ಮುಂಬಾದೇವಿಯ ಕುಂಭಾರವಾಡ ಪ್ರದೇಶದ ಗಲ್ಲಿಯೊಂದರಲ್ಲಿ ತಯಾರಿಸಲಾಗಿದೆ ಎಂದು ಲೋಧಾ ಹೇಳಿದ್ದರು. “1992ರ ಗಲಭೆಯ ಬಳಿಕ ಮುಂಬೈಯಲ್ಲಿ ಎಷ್ಟು ಸ್ಫೋಟ ಸಂಭವಿಸಿದೆ, ಎಷ್ಟು ಗುಂಡುಗಳನ್ನು ಹಾರಿಸಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಿ. ಇವನ್ನೆಲ್ಲಾ ನಿಮ್ಮ 5 ಕಿಮೀ ವ್ಯಾಪ್ತಿಯ ಗಲ್ಲಿಯಲ್ಲೇ ಉತ್ಪಾದಿಸಲಾಗಿದೆ. ಈ ಗಲ್ಲಿಯ ನಿವಾಸಿಗಳ ಓಟಿನಿಂದ ಗೆದ್ದುಬಂದ ವ್ಯಕ್ತಿಯೊಬ್ಬ ನಿಮಗೆ ಅಗತ್ಯದ ಸಂದರ್ಭದಲ್ಲಿ ಹೇಗೆ ನೆರವಾಗುತ್ತಾನೆ” ಎಂದು ಲೋಧಾ ಹೇಳಿದ್ದರು.

ನೋಟಿಸ್‌ಗೆ ಉತ್ತರಿಸುವಂತೆ ಮತ್ತು ತನ್ನ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ಚುನಾವಣಾ ಆಯೋಗ ಸೂಚಿಸಿದೆ. ಲೋಧಾ ಯಾವುದೇ ನಿರ್ಧಿಷ್ಟ ಪ್ರದೇಶವನ್ನು ಉಲ್ಲೇಖಿಸದಿದ್ದರೂ ಮುಸ್ಲಿಂ ಬಾಹುಳ್ಯದ ಪ್ರದೇಶಗಳಾದ ಭೆಂಡಿ ಬಜಾರ್ ಹಾಗೂ ನಾಗ್ಪದ ಪ್ರದೇಶವನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದರು. ಮುಂಬಾದೇವಿ ಕ್ಷೇತ್ರದ ಶಿವಸೇನೆಯ ಅಭ್ಯರ್ಥಿ ಪಾಂಡುರಂಗ ಸಕ್ಪಾಲ್ ಪರ ಲೋಧಾ ಪ್ರಚಾರ ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News