ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ಚಿದಂಬರಂ, ಪುತ್ರನ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

Update: 2019-10-18 15:55 GMT

ಹೊಸದಿಲ್ಲಿ, ಅ.18: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ, ಅವರ ಪುತ್ರ ಕಾರ್ತಿ ಚಿದಂಬರಂ ಹಾಗೂ ಇತರ 12 ಜನರ ವಿರುದ್ಧ ಸಿಬಿಐ ಶುಕ್ರವಾರ ಆರೋಪಪಟ್ಟಿ ದಾಖಲಿಸಿದೆ.

ಐಎನ್‌ಎಕ್ಸ್ ಮೀಡಿಯಾಕ್ಕೆ ವಿದೇಶ ಹೂಡಿಕೆ ಪ್ರೋತ್ಸಾಹ ಮಂಡಳಿ(ಎಫ್‌ಐಪಿಬಿ)ಯ ಅನುಮೋದನೆ ದೊರಕಿಸಿಕೊಡಲು ಆಗ ವಿತ್ತ ಸಚಿವರಾಗಿದ್ದ ಚಿದಂಬರಂ ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಚಿದಂಬರಂ ವಿರುದ್ಧದ ಯಾವುದೇ ಪ್ರಕರಣದಲ್ಲಿ ದಾಖಲಾಗಿರುವ ಮೊತ್ತಮೊದಲ ಚಾರ್ಜ್‌ಶೀಟ್ ಇದಾಗಿದೆ. ವಿಶೇಷ ಸಿಬಿಐ ಕೋರ್ಟ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ನ್ಯಾಯಾಧೀಶ ಅಜಯ್ ಕುಮಾರ್ ಕಹರ್ ಇದನ್ನು ಸೋಮವಾರ ವಿಚಾರಣೆಗೆ ಎತ್ತಿಕೊಳ್ಳಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ತಿ ಚಿದಂಬರಂ, ತಂದೆಗೆ ನೀಡಲಾಗಿರುವ ಕಸ್ಟಡಿ ವಾಯಿದೆ ಮುಗಿಯುವುದರೊಳಗೆ ಚಾರ್ಜ್‌ಶೀಟ್ ಸಲ್ಲಿಸಬೇಕೆಂಬ ಏಕೈಕ ಉದ್ದೇಶದಿಂದ ಹೀಗೆ ಮಾಡಲಾಗಿದೆ. ಕುಟುಂಬದವರು, ಸಂಬಂಧಿಕರು, ಸರಕಾರಿ ಸೇವೆಯಲ್ಲಿರುವವರ ಕುಟುಂಬದ ಸದಸ್ಯರನ್ನೂ ರಾಜಕೀಯ ದ್ವೇಷಸಾಧನೆಯ ತಿಕ್ಕಾಟದಲ್ಲಿ ಸೇರಿಸಲಾಗಿದೆ ಎಂದು ಹೇಳಿದ್ದಾರೆ. ಐಎನ್‌ಎಕ್ಸ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಪ್ರಕರಣದ ತನಿಖೆಗಾಗಿ ಚಿದಂಬರಂಗೆ ಈಗ ಜಾರಿ ನಿರ್ದೇಶನಾಲಯದ ಕಸ್ಟಡಿ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News