ಇಲ್ಲಿನ ಚುನಾವಣಾ ಕಣದಲ್ಲಿ 1,007 ಮಂದಿ ಕೋಟ್ಯಾಧಿಪತಿಗಳು !

Update: 2019-10-18 16:54 GMT

ಹೊಸದಿಲ್ಲಿ,ಅ.18: ಮಹಾರಾಷ್ಟ್ರದಲ್ಲಿ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದ ಅಭ್ಯರ್ಥಿಗಳಲ್ಲಿ 1,007 ಮಂದಿ ಕೋಟ್ಯಾಧಿಪತಿಗಳಾಗಿದ್ದರೆ, 59 ಮಂದಿ ಅಭ್ಯರ್ಥಿಗಳು ತಮಗೆ ಚಿಕ್ಕಾಸು ಆಸ್ತಿಯೂ ಇಲ್ಲವೆಂದು ಘೋಷಿಸಿದ್ದಾರೆಂದು ಮಹಾರಾಷ್ಟ್ರ ಚುನಾವಣಾ ಕಣ್ಗಾವಲು ಸಂಸ್ಥೆ ಹಾಗೂ ಪ್ರಜಾತಾಂತ್ರಿಕ ಸುಧಾರಣೆಗಳ ಸಂಘ (ಎಡಿಆರ್) ಜಂಟಿಯಾಗಿ ಸಿದ್ಧಪಡಿಸಿದ ವರದಿ ತಿಳಿಸಿದೆ. ಆದರೆ 2014ರ ಚುನಾವಣೆಗಿಂತ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಕೋಟ್ಯಾಧೀಶ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಕಳೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 1095 ಮಂದಿ ಕೋಟ್ಯಾಧೀಶ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿರುವ 162 ಅಭ್ಯರ್ಥಿಗಳ ಪೈಕಿ 155 ಮಂದಿ ಕೋಟ್ಯಾಧೀಶರಾಗಿದ್ದಾರೆ. ಕಾಂಗ್ರೆಸ್‌ನ 147 ಅಭ್ಯರ್ಥಿಗಳಲ್ಲಿ ಒಟ್ಟು 126 ಮಂದಿ, ಶಿವಸೇನೆಯ 124ಅಭ್ಯರ್ಥಿಗಳ ಪೈಕಿ 101 ಮಂದಿ ಹಾಗೂ ಎಂಎನ್‌ಎಸ್‌ನ 99 ಅಭ್ಯರ್ಥಿಗಳ ಪೈಕಿ 52 ಮಂದಿ, ತಮ್ಮ ಆಸ್ತಿಯ ಮೌಲ್ಯ 1 ಕೋಟಿ ರೂ.ಗೂ ಅಧಿಕವೆಂಬುದಾಗಿ ಘೋಷಿಸಿದ್ದಾರೆ.

 ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ ತಲಾ 4.21 ಕೋಟಿ ರೂ.ಗಳಾಗಿವೆ ಎಂದು ವರದಿ ಹೇಳಿದೆ.

ಈ ಸಲದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಒಟ್ಟು 2112 ಅಭ್ಯರ್ಥಿಗಳು ಕಣಕ್ಕಿಳಿದಿದ್ದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ 2336 ಮಂದಿ ಸ್ಪರ್ಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News