ಕ್ಯಾರಿ ಬ್ಯಾಗ್ ಗಾಗಿ ಗ್ರಾಹಕರಿಂದ 18 ರೂ. ಪಡೆದ ಶಾಪಿಂಗ್ ಮಾಲ್ ಗೆ 23 ಸಾವಿರ ರೂ. ದಂಡ

Update: 2019-10-19 15:58 GMT

ಹೊಸದಿಲ್ಲಿ, ಅ.19: ಕ್ಯಾರಿ ಬ್ಯಾಗ್ ಗಳಿಗಾಗಿ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಗ್ರಾಹಕರಿಂದ ತಲಾ 18 ರೂ. ಪಡೆದ ಚಂಢೀಗಡದ ಬಿಗ್ ಬಝಾರ್ ಮಾಲ್ ಗೆ ಗ್ರಾಹಕರ ವೇದಿಕೆಯು 23 ಸಾವಿರ ರೂ. ದಂಡ ವಿಧಿಸಿದೆ. ಇಬ್ಬರು ದೂರುದಾರರಿಗೂ ಮಾಲ್ ತಲಾ 1500 ರೂ. ಪಾವತಿಸಬೇಕಾಗಿದ್ದು, 'ಗ್ರಾಹಕ ಕಾನೂನು ಪರಿಹಾರ ಖಾತೆ'ಗೆ 20 ಸಾವಿರ ರೂ. ಜಮೆ ಮಾಡಬೇಕಿದೆ.

2019ರ ಮಾರ್ಚ್ 20ರಂದು ತಾನು ಕೆಲ ಸಾಮಗ್ರಿಗಳನ್ನು ಮಾಲ್ ನಿಂದ ಖರೀದಿಸಿದ್ದೆ. ಹಣ ಪಾವತಿ ಮಾಡುವಾಗ ಕ್ಯಾರಿ ಬ್ಯಾಗ್ ಗೆ 18 ರೂ. ವಿಧಿಸಿದ್ದು ತಿಳಿಯಿತು ಎಂದು ಬಲ್ದೇವ್ ರಾಜ್ ಎಂಬವರು ಆರೋಪಿಸಿದ್ದರು. ಇದೇ ರೀತಿಯ ಇನ್ನೊಂದು ಪ್ರಕರಣದಲ್ಲಿ ಸಂತೋಷ್ ಕುಮಾರಿ ಎಂಬವರು ತನಗೂ ಕ್ಯಾರಿ ಬ್ಯಾಗ್ ಗಾಗಿ 18 ರೂ. ಪಡೆಯಲಾಗಿದೆ ಎಂದು ದೂರು ನೀಡಿದ್ದರು.

ಸ್ಟೋರ್ ಹೊರಗಡೆ ಪ್ರದರ್ಶಿಸಲಾದ ಬೋರ್ಡ್ ನಲ್ಲಿ ನೀಡಿದ ಸೂಚನೆಯಂತೆ ಸರಿಯಾಗಿ ಹಣ ಪಡೆಯಲಾಗಿದೆ. ಗ್ರಾಹಕರಿಗೆ ತಿಳಿಸಿದ ನಂತರವೇ ಹಣ ಪಡೆಯಲಾಗುತ್ತದೆ ಎಂದು ಬಿಗ್ ಬಝಾರ್ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

ಕ್ಯಾರಿ ಬ್ಯಾಗ್ ಗಾಗಿ ಯಾವುದೇ ಹಣ ಪಡೆಯಲಾಗುವುದು ಎಂದು ಮಾಲ್ ನಲ್ಲಿ ಎಲ್ಲೂ ಬರೆದಿಲ್ಲ ಎಂದು ದೂರುದಾರರು ಆರೋಪಿಸಿದರು.

"ಕ್ಯಾರಿ ಬ್ಯಾಗ್ ಇಲ್ಲದೆ ಸಾಮಗ್ರಿಗಳನ್ನು ಹಿಡಿದು ಗ್ರಾಹಕರು ತಿರುಗುವುದು ಸಮಂಜಸವಲ್ಲ. ಈ ಪ್ರಕರಣದಲ್ಲಿ ಕ್ಯಾರಿ ಬ್ಯಾಗ್ ಗಳಿಗಾಗಿ ಹಣ ಪಡೆದುಕೊಳ್ಳುವುದು ಸರಿಯಲ್ಲ ಮತ್ತು ಅಧಿಕ ಶುಲ್ಕ ವಿಧಿಸಿದಂತಾಗುತ್ತದೆ" ಎಂದು ಹೇಳಿರುವ ಗ್ರಾಹಕ ವೇದಿಕೆ ಈ ದಂಡ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News