ನಾಗಗಳಿಗೆ ಪ್ರತ್ಯೇಕ ಧ್ವಜ, ಸಂವಿಧಾನವಿಲ್ಲ: ನಾಗಲ್ಯಾಂಡ್ ರಾಜ್ಯಪಾಲ

Update: 2019-10-19 16:11 GMT

ಹೊಸದಿಲ್ಲಿ, ಅ.19: ನ್ಯಾಶನಲ್ ಸೋಶಿಯಲಿಸ್ಟಿಕ್ ಕೌನ್ಸಿಲ್ ಆಫ್ ನಾಗಲ್ಯಾಂಡ್ (ಎನ್‌ಎಸ್‌ಸಿಎನ್-ಐಎಂ) ಆಗ್ರಹದಂತೆ ನಾಗಗಳಿಗೆ ಪ್ರತ್ಯೇಕ ಧ್ವಜ ಮತ್ತು ಸಂವಿಧಾನವನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದ್ದು, ಬಂಡುಕೋರ ಗುಂಪಿನ ಜೊತೆ ಬಂದೂಕಿನ ನೆರಳಲ್ಲಿ ಸಂಧಾನ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ದಶಕಗಳಿಂದ ನಡೆಯುತ್ತಿರುವ ಶಾಂತಿ ಪ್ರಕ್ರಿಯೆಯನ್ನು ಇನ್ನಷ್ಟು ವಿಳಂಬಿಸದೆ ಕೊನೆಗೊಳಿಸಲು ಸರಕಾರ ಬದ್ಧವಾಗಿದೆ ಎಂದು ನಾಗ ಮಾತುಕತೆಗಳ ಸಂವಾದಕ ಮತ್ತು ನಾಗಲ್ಯಾಂಡ್ ರಾಜ್ಯಪಾಲ ಆರ್.ಎನ್ ರವಿ ತಿಳಿಸಿದ್ದಾರೆ.

ಎಲ್ಲ ಪ್ರಮುಖ ಸಮಸ್ಯೆಗಳು ಮತ್ತು ಸಾಮರ್ಥ್ಯಗಳನ್ನು ಹೊಂದಿರುವ, ಪರಸ್ಪರ ಒಪ್ಪಿಗೆ ಸೂಚಿಸಲಾದ ಸಮಗ್ರ ಪರಿಹಾರ ಕರಡು ಸಿದ್ಧವಾಗಿದ್ದು ಕೊನೆಯ ಹಸ್ತಾಕ್ಷರವಷ್ಟೇ ಬಾಕಿಯಿದೆ ಎಂದು ಅವರು ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ರವಿ, ದುರದೃಷ್ಟವಶಾತ್, ಇಂತಹ ಶುಭ ಗಳಿಗೆಯಲ್ಲಿ ಈ ಪರಿಹಾರ ಪ್ರಕ್ರಿಯೆಯನ್ನು ವಿಳಂಬಗೊಳಿಸಲು ಎನ್‌ಎಸ್‌ಸಿಎನ್-ಐಎಂ ಪ್ರತ್ಯೇಕತಾವಾದ ಮನೋಭಾವ ತೋರುತ್ತಿದೆ. ಅವರು ಪ್ರತ್ಯೇಕ ನಾಗ ರಾಷ್ಟ್ರಧ್ವಜ ಮತ್ತು ಸಂವಿಧಾನದ ಬೇಡಿಕೆಯಿಟ್ಟಿದ್ದು ಈ ವಿಷಯದಲ್ಲಿ ಭಾರತ ಸರಕಾರದ ನಿಲುವು ಏನೆಂಬುದು ಅವರಿಗೆ ಮೊದಲೇ ತಿಳಿದಿದೆ ಎಂದು ತಿಳಿಸಿದ್ದಾರೆ.

ಆಗಸ್ಟ್ 5ರಂದು ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ್ದ ಹಿನ್ನೆಲೆಯಲ್ಲಿ ರವಿ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ. ವಿಶೇಷ ಸ್ಥಾನಮಾನದ ರದ್ದತಿಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ಪ್ರತ್ಯೇಕ ಧ್ವಜ ಮತ್ತು ಸಂವಿಧಾನವೂ ರದ್ದುಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News