7 ಪರಮಾಣು ರಿಯಾಕ್ಟರ್ ನಿರ್ಮಾಣ ಹಂತದಲ್ಲಿ: ಕೆಎನ್ ವ್ಯಾಸ್

Update: 2019-10-19 17:57 GMT
ಸಾಂದರ್ಭಿಕ ಚಿತ್ರ

 ಹೊಸದಿಲ್ಲಿ, ಅ.19: ದೇಶದಲ್ಲಿ ಈಗ 7 ಪರಮಾಣು ರಿಯಾಕ್ಟರ್‌ಗಳು ನಿರ್ಮಾಣ ಹಂತದಲ್ಲಿವೆ ಎಂದು ಪರಮಾಣು ಶಕ್ತಿ ಇಲಾಖೆಯ ಕಾರ್ಯದರ್ಶಿ ಕೆಎನ್ ವ್ಯಾಸ್ ಹೇಳಿದ್ದಾರೆ.

ಇಂಡಿಯಾ ಎನರ್ಜಿ ಫೋರಂನ ಪರಮಾಣು ಸಮಾವೇಶದಲ್ಲಿ ಮಾತನಾಡಿದ ಅವರು, 7 ಪರಮಾಣು ರಿಯಾಕ್ಟರ್‌ಗಳು ಈಗ ನಿರ್ಮಾಣ ಹಂತದಲ್ಲಿವೆ. 17 ರಿಯಾಕ್ಟರ್‌ಗಳು ಪೈಪ್‌ಲೈನ್ ಹಂತದಲ್ಲಿವೆ ಎಂದರು. ಅಣುಶಕ್ತಿ ಸ್ಥಾವರ ನಿರ್ಮಾಣ ವೆಚ್ಚ ಕಡಿತಗೊಳಿಸುವ ಹಾಗೂ ನಿರ್ಮಾಣ ಕಾರ್ಯ ತ್ವರಿತಗೊಳಿಸುವ ಉದ್ದೇಶದಿಂದ ಭವಿಷ್ಯದಲ್ಲಿ ‘ಫ್ಲೀಟ್ ಮೋಡ್’ ನಿರ್ಮಾಣ ವಿಧಾನವನ್ನು ಅನುಸರಿಸಲಾಗುವುದು ಎಂದು ಅಣು ಶಕ್ತಿ ಆಯೋಗದ ಅಧ್ಯಕ್ಷರೂ ಆಗಿರುವ ವ್ಯಾಸ್ ಹೇಳಿದ್ದಾರೆ.

ಭಾರತವು ಪರಮಾಣು ಶಕ್ತಿ ಕ್ಷೇತ್ರದಲ್ಲಿ ಭಾರತಕ್ಕೆ ಸುದೀರ್ಘ ಅನುಭವವಿದ್ದು ಏಶ್ಯಾದಲ್ಲೇ ಪ್ರಪ್ರಥಮ ಪರಮಾಣು ಸಂಶೋಧನಾ ರಿಯಾಕ್ಟರ್ ಭಾರತದಲ್ಲಿ ಕಾರ್ಯಾರಂಭ ಮಾಡಿತ್ತು ಎಂದವರು ಹೇಳಿದ್ದಾರೆ. ನಮ್ಮ ಕಲಿಕೆಯ ವೇಗ ತೀವ್ರವಾಗಿದ್ದು ಕಳೆದ ಕೆಲ ದಶಕಗಳಲ್ಲೇ 22 ರಿಯಾಕ್ಟರ್‌ಗಳನ್ನು ನಿರ್ಮಿಸಿದ್ದು ಈಗ ಭಾರತವು ವಿಶ್ವದ ಪರಮಾಣು ಶಕ್ತ ರಾಷ್ಟ್ರಗಳಲ್ಲಿ 7ನೇ ಸ್ಥಾನದಲ್ಲಿದೆ. ಆರಂಭದಲ್ಲಿ ಅನುಭವ ಗಳಿಸಿಕೊಳ್ಳುವ ಉದ್ದೇಶದಿಂದ, ವಿದೇಶದ ಸಹಾಯ ಪಡೆಯದೆ ಸಣ್ಣ ಸಾಮರ್ಥ್ಯದ ರಿಯಾಕ್ಟರ್‌ಗಳನ್ನು ನಿರ್ಮಿಸಲಾಗಿತ್ತು. ಈ ಕಾರಣದಿಂದ ವಿದ್ಯುತ್ ಜಾಲಕ್ಕೆ ಪರಮಾಣು ಶಕ್ತಿಯ ಒಟ್ಟು ಕೊಡುಗೆ ಅತ್ಯಲ್ಪವಾಗಿ ಕಾಣುತ್ತದೆ ಎಂದು ವ್ಯಾಸ್ ಹೇಳಿದರು.

 ದೇಶದಲ್ಲಿ 2030ರೊಳಗೆ 21 ಹೊಸ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಯೋಜನೆಯಿದೆ ಎಂದು ಪರಮಾಣು ವಿದ್ಯುತ್ ಇಲಾಖೆ ಕಳೆದ ವರ್ಷ ತಿಳಿಸಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಮಂತ್ರಿ ಕಚೇರಿಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಮಾತನಾಡಿ, ಅಣುಶಕ್ತಿ ಬಳಕೆಯ ಕುರಿತಂತೆ ಸಾರ್ವಜನಿಕರಲ್ಲಿ ಇರುವ ತಪ್ಪು ಕಲ್ಪನೆಯನ್ನು ನಿವಾರಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ ಎಂದರು. ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಅಣು ಶಕ್ತಿ ಒಂದು ಪರ್ಯಾಯ ಮೂಲವಾಗಿದೆ ಮತ್ತು ಇದು ದೈನಂದಿನ ಬದುಕನ್ನು ಸುಲಲಿತಗೊಳಿಸುವ ಒಂದು ಸಾಧನವಾಗಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News