ಶೇ.50 ರಷ್ಟು ಅಧಿಕಾರಿಗಳ ವರ್ಗಾವಣೆಗೆ ರೈಲ್ವೆ ನಿರ್ಧಾರ: ಕಾರಣವೇನು ಗೊತ್ತಾ?

Update: 2019-10-20 15:26 GMT

ಹೊಸದಿಲ್ಲಿ, ಅ.20: ರೈಲ್ವೆ ಮಂಡಳಿಯನ್ನು ‘ಸರಿಯಾದ ಗಾತ್ರ ’ಕ್ಕೆ ಇಳಿಸಲು ಭಾರತೀಯ ರೈಲ್ವೆಯು ನಿರ್ಧರಿಸಿದೆ. ಇದಕ್ಕಾಗಿ ಅದು ನಿರ್ದೇಶಕ ಮತ್ತು ಮೇಲಿನ ದರ್ಜೆಯ ಅಧಿಕಾರಿಗಳನ್ನು ವಲಯ ರೈಲ್ವೆಗಳಿಗೆ ವರ್ಗಾಯಿಸುವ ಮೂಲಕ ಮಂಡಳಿಯಲ್ಲಿಯ ಅಧಿಕಾರಿಗಳ ಸಂಖ್ಯೆಯನ್ನು ಈಗಿನ 200ರಿಂದ 150ಕ್ಕೆ ಇಳಿಸಲಿದೆ. ಇಲಾಖೆಯ ದಕ್ಷತೆಯನ್ನು ಹೆಚ್ಚಿಸಬಲ್ಲ ಈ ಕ್ರಮವು ಸುದೀರ್ಘ ಸಮಯದಿಂದ ಬಾಕಿಯಾಗಿತ್ತು.

2000ರಲ್ಲಿ ಈ ಯೋಜನೆಯನ್ನು ಮೊದಲ ಬಾರಿಗೆ ಹುಟ್ಟುಹಾಕಿದ್ದ ಅಟಲ್ ಬಿಹಾರಿ ವಾಜಪೇಯಿ ಸರಕಾರವು,ರೈಲ್ವೆ ಮಂಡಳಿಯು ಸರಿಯಾದ ಗಾತ್ರವನ್ನು ಹೊಂದಿರಬೇಕು ಎಂದು ಶಿಫಾರಸು ಮಾಡಿತ್ತು.

ಹಲವಾರು ಅಧಿಕಾರಿಗಳು ಒಂದೇ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ವಲಯ ರೈಲ್ವೆಗಳಿಗೆ ಹಿರಿಯ ಅಧಿಕಾರಿಗಳ ಅಗತ್ಯವಿದೆ ಎಂಬ ಅಭಿಪ್ರಾಯವು ತುಂಬ ಸಮಯದಿಂದಲೂ ಇತ್ತು. ಮಂಡಳಿಯಲ್ಲಿ ಹಾಲಿ 200 ಅಧಿಕಾರಿಗಳಿದ್ದು,ಈ ಪೈಕಿ ನಿರ್ದೇಶಕ ಮತ್ತು ಮೇಲಿನ ದರ್ಜೆಯ ಅಧಿಕಾರಿಗಳನ್ನು ವಲಯ ರೈಲ್ವೆಗಳಿಗೆ ವರ್ಗಾವಣೆ ಮಾಡಲಾಗುವುದು. ಯೋಜನೆಯು ಶೀಘ್ರವೇ ಜಾರಿಗೊಳ್ಳಲಿದೆ ಎಂದು ಮಂಡಳಿಯ ಅಧಿಕಾರಿಯೋರ್ವರು ತಿಳಿಸಿದರು.

ಈ ಕ್ರಮವು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ 100 ದಿನಗಳ ಅಜೆಂಡಾದ ಭಾಗವಾಗಿದ್ದು,ರೈಲ್ವೆ ಮಂಡಳಿಯ ಹಾಲಿ ಅಧ್ಯಕ್ಷ ವಿ.ಕೆ.ಯಾದವ ಅವರ ಉನ್ನತ ಆದ್ಯತೆಯೂ ಆಗಿದೆ.

2015ರಲ್ಲಿ ಭಾರತೀಯ ರೈಲ್ವೆ ಕುರಿತು ಬಿಬೇಕ್ ದೇಬರಾಯ್ ಸಮಿತಿಯೂ ರೈಲ್ವೆ ಮಂಡಳಿಯ ಪುನರ್‌ರಚನೆಗೆ ಶಿಫಾರಸು ಮಾಡಿತ್ತು.

ರೈಲ್ವೆ ಮಂಡಳಿ ಸೇರಿದಂತೆ ರೈಲ್ವೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿಯಿದ್ದಾರೆ ಎಂದು ಸದಾ ಪರಿಗಣಿಸಲಾಗುತ್ತಿದೆ. ಇದು ಸಂಸ್ಥೆಯ ದಕ್ಷತೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿತ್ತು. ಪರಿಣಾಮಕಾರಿ ಕಾರ್ಯ ನಿರ್ವಹಣೆಗಾಗಿ ಮತ್ತು ಹಣಕಾಸು ಕಾರ್ಯಸಾಧ್ಯತೆಗಾಗಿ ರೈಲ್ವೆಗೆ ಅಗತ್ಯವಾಗಿರುವ ಸಿಬ್ಬಂದಿಯ ನಿಖರವಾದ ಸಂಖ್ಯೆಯನ್ನು ಪುನರ್‌ಪರಿಶೀಲಿಸುವ ಗಂಭೀರ ಪ್ರಯತ್ನಗಳು ನಡೆದಿರಲಿಲ್ಲ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News