ಜಮ್ಮು-ಕಾಶ್ಮೀರದಲ್ಲಿ ಶೇ.98 ಶಾಲೆಗಳ ಕಾರ್ಯಾರಂಭ

Update: 2019-10-20 18:26 GMT

ಹೊಸದಿಲ್ಲಿ, ಅ.20: ಜಮ್ಮು ಮತ್ತು ಕಾಶ್ಮೀರದಲ್ಲಿ ಜನರ ಸಂಚಾರಕ್ಕೆ ಯಾವುದೇ ನಿರ್ಬಂಧಗಳಿಲ್ಲ. ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಕ್ರಮೇಣ ಹೆಚ್ಚುತ್ತಿದ್ದು ಜಮ್ಮುವಿನಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರೆ, ಕಾಶ್ಮೀರದಲ್ಲಿ ಶೇ.20ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಶ್ಮೀರದಲ್ಲಿ ಶೇ.86.3 ಶಿಕ್ಷಕರು, ಜಮ್ಮುವಿನಲ್ಲಿ ಶೇ.100ರಷ್ಟು ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ಧಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.98ರಷ್ಟು , ಅಂದರೆ 21,328 ಶಾಲೆಗಳು ಕಾರ್ಯಾರಂಭ ಮಾಡಿವೆ ಎಂದವರು ಹೇಳಿದ್ದಾರೆ. ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವ ಕ್ರಮವಾಗಿ ಕಳೆದ ವಾರ 5ರಿಂದ 12ನೇ ತರಗತಿವರೆಗಿನ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಲಾಗಿದೆ.

 ಅಕ್ಟೋಬರ್ 18ರವರೆಗೆ, ಎಲ್ಲಾ (1,02,069) ಸ್ಥಿರ ದೂರವಾಣಿ ಸಂಪರ್ಕ ಮರುಸ್ಥಾಪಿಸಲಾಗಿದ್ದು 22 ಜಿಲ್ಲೆಗಳಲ್ಲಿ ಶೇ.84ರಷ್ಟು ಮೊಬೈಲ್ ಫೋನ್ಗ‌ಳ ಸಂಪರ್ಕ ಮರುಸ್ಥಾಪಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಆಡಳಿತದ ಹೇಳಿಕೆಯನ್ನು ಉಲ್ಲೇಖಿಸಿ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.

130 ಪ್ರಮುಖ ಆಸ್ಪತ್ರೆಗಳು, 4,359 ಆರೋಗ್ಯಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು ಪ್ರತೀ ದಿನ ಸರಾಸರಿ 600 ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಮತ್ತು ಸರಾಸರಿ 65000 ಜನತೆ ಒಪಿಡಿ(ಹೊರರೋಗಿ ವಿಭಾಗ) ಸೌಲಭ್ಯ ಪಡೆಯುತ್ತಿದ್ದಾರೆ. 202 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರ್ಬಂಧ ತೆರವುಗೊಳಿಸಲಾಗಿದ್ದು ಆಹಾರ ವಸ್ತು, ಶಿಶು ಆಹಾರ, ಪೆಟ್ರೋಲಿಯಂ ಉತ್ಪನ್ನಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News