ಇನ್‌ಫೋಸಿಸ್ ಸಿಇಒ ಸಲೀಲ್ ಪರೇಖ್‌ರಿಂದ ಅವ್ಯವಹಾರ: ಆರೋಪ

Update: 2019-10-21 15:48 GMT

ಹೊಸದಿಲ್ಲಿ, ಅ.21: ಇನ್‌ಫೋಸಿಸ್ ಸಂಸ್ಥೆಯ ಸಿಇಒ ಸಲೀಲ್ ಪರೇಖ್ ಅನೈತಿಕ ವ್ಯವಹಾರದಲ್ಲಿ ತೊಡಗಿದ್ದು , ಸಂಸ್ಥೆಯ ಆರ್ಥಿಕ ವ್ಯವಹಾರದ ಬಗ್ಗೆ ಅಸಂಗತ ಹೇಳಿಕೆ ನೀಡುತ್ತಿದ್ದಾರೆ ಎಂದು ಸಂಘಟನೆಯೊಂದು ಇನ್‌ಫೋಸಿಸ್‌ನ ಆಡಳಿತ ಮಂಡಳಿಗೆ ದೂರು ನೀಡಿದೆ.

ಇನ್‌ಫೋಸಿಸ್‌ನ ‘ನೈತಿಕ ಉದ್ಯೋಗಿಗಳು’ ಎಂದು ಕರೆಸಿಕೊಳ್ಳುವ ಸಂಘಟನೆಯ ಸದಸ್ಯರು ಬರೆದಿರುವ ಪತ್ರವನ್ನು ಸಂಸ್ಥೆಯ ಆಡಳಿತ ಮಂಡಳಿಗೆ ಹಾಗೂ ಯುಎಸ್ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್‌ಗೆ ಕಳುಹಿಸಲಾಗಿದೆ. ವಾಸ್ತವ ಮರೆಮಾಚಿ ಸಂಚಯ ನಿಧಿಯನ್ನು ತೋರಿಸುವಂತೆ ಪರೇಖ್ ಸೂಚಿಸಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಕೋಟಿಗಟ್ಟಲೆ ಮೊತ್ತದ ವ್ಯವಹಾರ ನಡೆದಿದ್ದು ಈ ವ್ಯವಹಾರದ ಪ್ರಸ್ತಾಪ, ಮಾರ್ಜಿನ್ ಮೊತ್ತ ಮತ್ತಿತರ ವಿಷಯದ ಬಗ್ಗೆ ಲೆಕ್ಕಪತ್ರ ಪರಿಶೋಧಕರಿಂದ ಪರಿಶೀಲನೆ ನಡೆಯಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಬೃಹತ್ ಮೊತ್ತದ ವ್ಯವಹಾರಕ್ಕೆ ಅನುಮೋದನೆ ನೀಡುವಾಗ ಪರೇಖ್ ವಿಮರ್ಶೆ ಮತ್ತು ಪರಿಶೀಲನೆಯ ವರದಿಯನ್ನು ಕಡೆಗಣಿಸಿದ್ದಾರೆ ಎಂಬುದಕ್ಕೆ ತಮ್ಮ ಬಳಿ ದಾಖಲೆ ಹಾಗೂ ಇ-ಮೇಲ್ ಸಾಕ್ಷಿಗಳಿವೆ. ಅಲ್ಲದೆ ಸಂಸ್ಥೆಯ ಉನ್ನತ ಆಡಳಿತಕ್ಕೆ ಆರ್ಥಿಕ ಸ್ಥಿತಿಗತಿಯ ಬಗ್ಗೆ ಉತ್ಪ್ರೇಕ್ಷಿತ ವರದಿ ನೀಡುತ್ತಿದ್ದಾರೆ. ಪಾರೇಖ್ ಮತ್ತು ಸಿಎಫ್‌ಒ ನೀಲಾಂಜನ್ ರಾಯ್ ಹೆಚ್ಚಿನ ಲಾಭ ತೋರಿಸುವಂತೆ ಲೆಕ್ಕಪತ್ರ ವಿಭಾಗದ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಪತ್ರದಲ್ಲಿ ದೂರಲಾಗಿದೆ.

 ನಿಯಮಾನುಸಾರ ಈ ದೂರಿನ ಬಗ್ಗೆ ತನಿಖೆ ನಡೆಸಲಾಗುತ್ತದೆ ಮತ್ತು ಲೆಕ್ಕಪತ್ರ ಪರಿಶೋಧಕರ ಸಮಿತಿಯೆದುರು ಇದನ್ನು ಇಡಲಾಗುತ್ತದೆ ಎಂದು ಇನ್‌ಫೋಸಿಸ್ ಸಂಸ್ಥೆಯ ಹೇಳಿಕೆ ತಿಳಿಸಿದೆ. ಈ ಹಿಂದೆ ಸಿಇಒ ಆಗಿದ್ದ ವಿಶಾಲ್ ಸಿಕ್ಕ, ಆಡಳಿತ ಮಂಡಳಿಯೊಂದಿಗಿನ ಭಿನ್ನಾಭಿಪ್ರಾಯದಿಂದ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸಲೀಲ್ ಪರೇಖ್‌ರನ್ನು ಆಯ್ಕೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News