ಕೇರಳದಲ್ಲಿ ಮತ್ತೆ ಭಾರೀ ಮಳೆ: ಮತಗಟ್ಟೆಗಳು ಜಲಾವೃತ, 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

Update: 2019-10-21 15:50 GMT

ತಿರುವನಂತಪುರ, ಅ. 21: ಕೇರಳದಾದ್ಯಂತ ಸೋಮವಾರ ಭಾರೀ ಮಳೆ ಸುರಿದಿದ್ದು, ವಿಧಾನಸಭೆ ಚುನಾವಣೆಯ ಐದು ಕ್ಷೇತ್ರಗಳಲ್ಲಿ ಒಂದಾಗಿರುವ ಎರ್ನಾಕುಲಂನಲ್ಲಿ ಮತದಾನಕ್ಕೆ ಅಡ್ಡಿ ಉಂಟಾಗಿದೆ. ಜಲಾವೃತವಾದ ತಗ್ಗು ಪ್ರದೇಶಗಳಲ್ಲಿ ರೈಲು ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಭಾರೀ ಮಳೆಯಿಂದ ಅವಘಡಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಕೊಲ್ಲಂ, ಆಲಪ್ಪುಳ, ಎರ್ನಾಕುಳಂ ಹಾಗೂ ಪತ್ತನಂತಿಟ್ಟದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎನ್‌ಡಿಆರ್‌ಎಫ್ ತಂಡ ನಿಯೋಜಿಸಲಾಗಿದೆ.

 ‘‘ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ. ಆದುದರಿಂದ ಸಿದ್ಧರಾಗಿರಿ. ನಾವು ಪರಿಸ್ಥಿತಿ ಬಗ್ಗೆ ಹತ್ತಿರದಿಂದ ನಿಗಾ ಇರಿಸದ್ದೇವೆ. ಸ್ಥಳೀಯ ಅಧಿಕಾರಿಗಳ ಸೂಚನೆ ಅನುಸರಿಸಿ. ತೆರವು ಹಾಗೂ ವಾಸ್ತವ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದ ಸೂಚನೆಗಳನ್ನು ಆಲಿಸಿ. ತೆರವುಗೊಳಿಸಲು ಸಲಹೆ ನೀಡಿದರೆ, ಕೂಡಲೇ ತೆರವುಗೊಳಿಸಿ” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ. ಎರ್ನಾಕುಳಂನ ಹಲವು ಮತಗಟ್ಟೆಗಳು ಜಲಾವೃತವಾಗಿವೆ.

‘‘ಎರ್ನಾಕುಳಂ ವಿಧಾನ ಸಭಾ ಕ್ಷೇತ್ರದಲ್ಲಿ ಕೆಲವು ಮತಗಟ್ಟೆಗಳನ್ನು ನೆಲ ಮಹಡಿಯಿಂದ ಮೊದಲ ಮಹಡಿಗೆ ಸ್ಥಳಾಂತರಿಸಲಾಯಿತು. ಪೊಲೀಸರ ಸಹಿತ ಸುಮಾರು 500 ಅಧಿಕಾರಿಗಳು ಈ ವ್ಯವಸ್ಥೆ ಮಾಡಿದರು’’ ಎಂದು ಕೇರಳ ಮುಖ್ಯ ಚುನಾವಣಾ ಆಯುಕ್ತ ಟಿಕಾ ರಾಮ್ ಮೀನಾ ತಿಳಿಸಿದ್ದಾರೆ.

ಎರ್ನಾಕುಳಂ ದಕ್ಷಿಣ, ಪನಂಬಿಲಿ ನಗರ್ ಹಾಗೂ ಅಯ್ಯಪ್ಪಂಕಾವು ಸಹಿತ ಕೊಚ್ಚಿನ್ ನಗರದ ಹಲವು ಪ್ರದೇಶಗಳು ಜಲಾವೃತವಾಗಿವೆ. ಮಳೆಯಿಂದ ಸಂತ್ರಸ್ತರಿಗೆ ವಾಸ್ತವ್ಯ ಕಲ್ಪಿಸಲು ಎರ್ನಾಕುಳಂ ಜಿಲ್ಲೆಯಲ್ಲಿ ಮೂರು ಶಿಬಿರಗಳನ್ನು ಆರಂಭಿಸಲಾಗಿದೆ. ಮಳೆಯಿಂದ ಎರ್ನಾಕುಲಂ ರೈಲು ನಿಲ್ದಾಣ ಜಲಾವೃತವಾಗಿದ್ದು ರೈಲು ಸಂಚಾರಕ್ಕೆ ಅಡ್ಡಿ ಉಂಟಾಗಿದೆ ಎಂದು ರೈಲ್ವೆ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಎರ್ನಾಕುಳಂ ಜಂಕ್ಷನ್ ಹಾಗೂ ಎರ್ನಾಕುಳಂ ಪಟ್ಟಣ ರೈಲು ನಿಲ್ದಾಣಗಳು ಜಲಾವೃತವಾಗಿವೆ. ನೀರು ಇಳಿಯುವವರೆಗೆ ಈ ನಿಲ್ದಾಣದ ಮೂಲಕ ಸಾಗುವ ರೈಲುಗಳು ವಿಳಂಬವಾಗಿ ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆಯ ವಕ್ತಾರ ಹೇಳಿದ್ದಾರೆ.

7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ತಿರುವನಂತಪುರ: ರಾಜ್ಯದಲ್ಲಿ ಸೋಮವಾರ ಭಾರೀ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಜಾರಿಗೊಳಿಸಿದೆ. ತಿರುವನಂತಪುರ, ಆಲಪ್ಪುಳ, ಕೋಟ್ಟಾಯಂ, ಎರ್ನಾಕುಳಂ, ಇಡುಕ್ಕಿ, ಪಾಲಕ್ಕಾಡ್ ಹಾಗೂ ತ್ರಿಶೂರ್ ಜಿಲ್ಲೆಗಳಲ್ಲಿ ಸೋಮವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಲ್ಲಂ, ಪತ್ತನಂತಿಟ್ಟ, ಮಲಪ್ಪುರಂ, ಕೋಝಿಕ್ಕೋಡ್ ಹಾಗೂ ವಯನಾಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News