ಕೋಣಗಳು ಓಟಕ್ಕೆ ಸೂಕ್ತವಲ್ಲ: ಕಂಬಳದ ವಿರುದ್ಧ ಮತ್ತೆ ಪೆಟಾ ತಕರಾರು

Update: 2019-10-22 18:17 GMT

ಬೆಂಗಳೂರು,ಅ.22: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಕ್ರೀಡೆ ಕಂಬಳದಲ್ಲಿ ಬಳಕೆಯಾಗುವ ಕೋಣಗಳು ಓಟದ ಸ್ಪರ್ಧೆಗೆ ದೈಹಿಕವಾಗಿ ಸೂಕ್ತವಾಗಿಲ್ಲ ಎಂದು ಪೆಟಾ ಇಂಡಿಯಾ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ತಾಜಾ ತನಿಖಾ ವರದಿಯಲ್ಲಿ ಆರೋಪಿಸಿದೆ.

ಪ್ರಾಣಿಗಳಿಗೆ ಕ್ರೌರ್ಯ ತಡೆ (ಕರ್ನಾಟಕ ಎರಡನೇ ತಿದ್ದುಪಡಿ) ಕಾಯ್ದೆ,2017ನ್ನು ಅನೂರ್ಜಿತಗೊಳಿಸುವಂತೆ ಕೋರಿ ತಾನು ದಾಖಲಿಸಿರುವ ಅರ್ಜಿಯ ಭಾಗವಾಗಿ ಪೆಟಾ ಈ ತನಿಖಾ ವರದಿಯನ್ನು ಸಲ್ಲಿಸಿದೆ. ಈ ಕಾಯ್ದೆಯು ರಾಜ್ಯದಲ್ಲಿ ಕಂಬಳ ಕ್ರೀಡೆಗಳಿಗೆ ಅವಕಾಶ ಕಲ್ಪಿಸಿದೆ.

ಈ ತನಿಖಾ ವರದಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನ 2018 ಡಿಸೆಂಬರ್ ಮತ್ತು 2019 ಜನವರಿ ಮಧ್ಯೆ ಉಡುಪಿಯ ಬಾರಾಡಿಬೀಡು,ಮೂಡುಬಿದಿರೆ,ಮಂಗಳೂರು ಮತ್ತು ತಿರುವೈಲುಗಳಲ್ಲಿ ನಡೆದ ನಾಲ್ಕು ಕಂಬಳಗಳನ್ನು ಪೆಟಾ ಅಧಿಕಾರಿಗಳ ತಂಡವು ವೀಕ್ಷಿಸಿತ್ತು. ಪೆಟಾ ಅಧಿಕಾರಿಗಳು ಕಂಬಳಗಳ ಚಿತ್ರ ಮತ್ತು ವೀಡಿಯೊ ಸಾಕ್ಷಗಳನ್ನೂ ಸಂಗ್ರಹಿಸಿದ್ದರು. ಹೆದರಿಕೊಂಡು ಓಟಕ್ಕೆ ಹಿಂದೇಟು ಹೊಡೆಯುವ ಕೋಣಗಳನ್ನು ಪದೇ ಪದೇ ಕೈಗಳಿಂದ ಹೊಡೆಯಲಾಗುತ್ತದೆ,ಮುಖಕ್ಕೆ ಬಡಿಯಲಾಗುತ್ತದೆ,ಒದೆಯುವುದು,ಚುಚ್ಚುವುದರ ಜೊತೆಗೆ ಕೋಲುಗಳಿಂದ ಥಳಿಸಲಾಗುತ್ತದೆ. ಐದರಿಂದ ಆರು ಜನರ ಗುಂಪು ಅದನ್ನು ಕಂಬಳದ ಓಟ ಆರಂಭಗೊಳ್ಳುವ ಸ್ಥಳಕ್ಕೆ ಎಳೆದೇ ಒಯ್ಯತ್ತಾರೆ ಮತ್ತು ಅದರತ್ತ ಬೊಬ್ಬೆ ಹೊಡೆಯುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಫೋಮ್ ಅಥವಾ ಫೈಬರ್‌ನ ಹೊದಿಕೆಯಿರುವ ಕೋಲುಗಳನ್ನು ಬಳಸಲಾಗುತ್ತದೆ ಎಂದು ಕಂಬಳದ ಸಂಘಟಕರು ಹೇಳಿಕೊಂಡಿದ್ದರೂ ಓಟದ ಸಂದರ್ಭದಲ್ಲಿ ಕೋಣಗಳನ್ನು ಬರಿಗೈಗಳಿಂದ ಮತ್ತು ಯಾವುದೇ ಹೊದಿಕೆಗಳಿಲ್ಲದ ಒರಟು ಕೋಲುಗಳಿಂದ ಥಳಿಸಲಾಗುತ್ತದೆ ಎಂದಿರುವ ಪೆಟಾ,ಥಳಿತಗಳಿಂದ ಕೋಣಗಳಿಗೆ ಆಗಿರುವ ಗಾಯಗಳನ್ನು ತೋರಿಸುವ ಚಿತ್ರಗಳನ್ನೂ ಸಲ್ಲಿಸಿದೆ. ಗಾಯಗಳಿಗೆ ಕಪ್ಪು ವಸ್ತುವನ್ನು ಲೇಪಿಸಿ ಅದನ್ನು ಮರೆಮಾಚಲಾಗುತ್ತದೆ ಎಂದೂ ಅದು ತನ್ನ ವರದಿಯಲ್ಲಿ ತಿಳಿಸಿದೆ.

 ಕಂಬಳಗಳಲ್ಲಿ ಕ್ರೌರ್ಯ ಅಂತರ್ಗತವಾಗಿದೆ. ಕೋಣಗಳು ಓಟದ ಸ್ಪರ್ಧೆಗೆ ದೈಹಿಕವಾಗಿ ಸೂಕ್ತವಾಗಿಲ್ಲ ಮತ್ತು ಎಷ್ಟೇ ನಿಯಂತ್ರಣವನ್ನು ಹೇರಿದರೂ ಈ ವೈಜ್ಞಾನಿಕ ಸತ್ಯವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಪೆಟಾ ಇಂಡಿಯಾದ ಸಿಇಒ ಮಣಿಲಾಲ ವಲ್ಲಿಯೇಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News