ಬಿಸಿಸಿಐನ 39ನೇ ಅಧ್ಯಕ್ಷರಾಗಿ ಸೌರವ್ ಗಂಗುಲಿ ಪದಗ್ರಹಣ

Update: 2019-10-23 06:25 GMT

ಹೊಸದಿಲ್ಲಿ, ಅ.23: ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ)39ನೇ ಅಧ್ಯಕ್ಷರಾಗಿ ಬುಧವಾರ ಅಧಿಕಾರವಹಿಸಿಕೊಂಡರು. ಈ ಮೂಲಕ ಅವರು ತನ್ನ ಹೊಸ ಇನಿಂಗ್ಸ್ ಆರಂಭಿಸಿದರು.

ಈ ತಿಂಗಳಾರಂಭದಲ್ಲಿ ಬಿಸಿಸಿಐ ಸಭೆಯಲ್ಲಿ ಅಧ್ಯಕ್ಷ ಹುದ್ದೆಗೆ ಗಂಗುಲಿ ಮಾತ್ರ ನಾಮಪತ್ರ ಸಲ್ಲಿಸಿದ್ದರು.ಹೀಗಾಗಿ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.

ಬಿಸಿಸಿಐ ಹೊಸ ಆಡಳಿತದಲ್ಲಿ ಗೃಹ ಸಚಿವ ಅಮಿತ್ ಶಾ ಪುತ್ರ ಜಯ ಶಾ ಮಂಡಳಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಾಜಿ ಅಧ್ಯಕ್ಷ,ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಹೋದರ ಅರುಣ್ ಸಿಂಗ್ ಧುಮಾಲ್ ನೂತನ ಖಜಾಂಚಿಯಾಗಿಯೂ, ಕೇರಳದ ಹಿರಿಯ ಆಡಳಿತಾಧಿಕಾರಿ ಜಯೇಶ್ ಜಾರ್ಜ್ ಜೊತೆ ಕಾರ್ಯದರ್ಶಿಯಾಗಿಯೂ ಹಾಗೂ ಉತ್ತರಾಖಂಡದ ಮಹಿಮ್ ವರ್ಮಾ ನೂತನ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ.

   ಗಂಗುಲಿ ನೇಮಕದೊಂದಿಗೆ ವಿನೋದ್ ರಾಯ್ ನೇತೃತ್ವದ ಆಡಳಿತಾಧಿಕಾರಿ ಸಮಿತಿ(ಸಿಒಎ)ಯ ದೀರ್ಘ ಪಯಣ ಅಂತ್ಯವಾಗಿದೆ. ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ ಗಂಗುಲಿ ಮುಂದಿನ 10 ತಿಂಗಳ ತನಕ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಈ ಅವಧಿಯಲ್ಲಿ ಅವರು ಏನು ಮಾಡಬೇಕೆಂಬ ಬಗ್ಗೆ ಯೋಜನೆ ರೂಪಿಸಿದ್ದಾರೆ.

ಬಿಸಿಸಿಐನ ನೂತನ ನಿಯಮಾವಳಿ ಪ್ರಕಾರ ಕಡ್ಡಾಯವಾಗಿ ಕೂಲಿಂಗ್ ಆಫ್ ನಿಯಮ ಪಾಲಿಸಬೇಕಾಗಿರುವ ಕಾರಣ ಗಂಗುಲಿ ಮುಂದಿನ ವರ್ಷ ಜುಲೈನಲ್ಲಿ ಬಿಸಿಸಿಐ ಹುದ್ದೆ ತೊರೆಯ ಬೇಕಾಗುತ್ತದೆ. ಕೂಲಿಂಗ್ ಆಫ್ ನಿಯಮದ ಪ್ರಕಾರ ಸತತ ಆರು ವರ್ಷ ಪದಾಧಿಕಾರಿಯಾಗಿದ್ದವರು ಒಂದು ಅವಧಿಗೆ(ಮೂರು ವರ್ಷ) ವಿರಾಮ ಪಡೆಯುವುದು ಕಡ್ಡಾಯ. ಗಂಗುಲಿ ಕಳೆದ 5 ವರ್ಷಗಳಿಂದ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News