ಕೇರಳ ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣ: ಫ್ರಾಂಕೊ ಮುಳಕ್ಕಲ್‌ಗೆ ಸಮನ್ಸ್

Update: 2019-10-23 14:28 GMT

ತಿರುವನಂತಪುರ, ಅ. 23: ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಜಲಂಧರ್‌ನ ಮಾಜಿ ಬಿಷಪ್ ಫ್ರಾಂಕೊ ಮುಳಕ್ಕಲ್‌ಗೆ ನವೆಂಬರ್ 11ರಂದು ಹಾಜರಾಗುವಂತೆ ಕೇರಳ ನ್ಯಾಯಾಲಯ ಸಮನ್ಸ್ ನೀಡಿದೆ. 2014 ಹಾಗೂ 2016ರ ನಡುವೆ ಕುರವಿಲಂಗಾಡ್ ಕಾನ್ವೆಂಟ್‌ನಲ್ಲಿ ಮುಳಕ್ಕಲ್ ನನ್ನ ಮೇಲೆ ಮತ್ತೆ ಮತ್ತೆ ಅತ್ಯಾಚಾರ ನಡೆಸಿದ್ದಾನೆ ಎಂದು ಕ್ರೈಸ್ತ ಸನ್ಯಾಸಿನಿ ಆರೋಪಿಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಮುಳಕ್ಕಲ್‌ನನ್ನು ಬಂಧಿಸಲಾಗಿತ್ತು. ಈ ಆರೋಪವನ್ನು ಮುಳಕ್ಕಲ್ ನಿರಾಕರಿಸಿದ್ದರು.

 ಸದ್ಯ ಮುಳಕ್ಕಲ್ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ. ಈ ನಡುವೆ ಇನ್ನೋರ್ವ ಕ್ರೈಸ್ತ ಸನ್ಯಾಸಿನಿ ಕೇರಳ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿ ಅತ್ಯಾಚಾರ ಪ್ರಕರಣದಲ್ಲಿ ಮುಳಕ್ಕಲ್ ಅತ್ಯಾಚಾರ ಸಂತ್ರಸ್ತೆಗೆ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಅತ್ಯಾಚಾರ ಸಂತ್ರಸ್ತೆಯ ಗೌರವಕ್ಕೆ ಧಕ್ಕೆ ಉಂಟು ಮಾಡಲು ಮುಳಕ್ಕಲ್ ಸಾಮಾಜಿಕ ಜಾಲ ತಾಣ ಬಳಸಿಕೊಂಡಿದ್ದಾನೆ. ಸಾಮಾಜಿಕ ಜಾಲ ತಾಣದಲ್ಲಿ ಅಪ್‌ಲೋಡ್ ಮಾಡಲಾದ ಕೆಲವು ವೀಡಿಯೊಗಳಲ್ಲಿ ಆಕೆಯ ಭಾವಚಿತ್ರ ಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಅಗೌರವ ತೋರಲು, ನಿಂದಿಸಲು, ಬೆದರಿಸಲು ಹಾಗೂ ಸಾಕ್ಷಿಗಳು, ತನಿಖಾ ತಂಡದ ಮೇಲೆ ಪ್ರಭಾವ ಬೀರುವ ಉದ್ದೇಶವನ್ನು ಈ ವೀಡಿಯೊ ಹೊಂದಿತ್ತು ಎಂದು ದೂರುದಾರೆ ಹೇಳಿದ್ದಾರೆ. ಇಂತಹ ವರ್ತನೆ ಕೇರಳ ಉಚ್ಚ ನ್ಯಾಯಾಲಯ ನೀಡಿದ ಜಾಮೀನು ಶರತ್ತಿನ ಉಲ್ಲಂಘನೆ ಹಾಗೂ ಈ ವಿಷಯದಲ್ಲಿ ರಾಜ್ಯ ಮಹಿಳಾ ಆಯೋಗ ಮಧ್ಯೆ ಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News