ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ಜಾಮೀನು ಕೋರಿ ದಿಲ್ಲಿ ಹೈಕೋರ್ಟ್‌ಗೆ ಚಿದಂಬರಂ

Update: 2019-10-23 14:34 GMT

ಹೊಸದಿಲ್ಲಿ, ಅ. 22: ಜಾರಿ ನಿರ್ದೇಶನಾಲಯ ದಾಖಲಿಸಿದ ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜಾಮೀನು ಕೋರಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಬುಧವಾರ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ.

 ಸಿಬಿಐ ದಾಖಲಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಒಂದು ದಿನದ ಬಳಿಕ ಚಿದಂಬರಂ ಈ ಮನವಿ ಸಲ್ಲಿಸಿದ್ದಾರೆ. ಚಿದಂಬರಂ ಅಕ್ಟೋಬರ್ 24ರ ವರೆಗೆ 7 ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರಲಿದ್ದಾರೆ. ಈಗಾಗಲೇ ಅಂತ್ಯಗೊಂಡ ಸಿಬಿಐ ಪ್ರಕರಣದಲ್ಲಿ 60 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಮುನ್ನ ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು. ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಶಂಕೆಯಿಂದ ಈ ಹಿಂದೆ ಚಿದಂಬರಂಗೆ ಜಾಮೀನು ನೀಡಲು ಸಿಬಿಐ ನ್ಯಾಯಾಲಯ ನಿರಾಕರಿಸಿತ್ತು.

ಈ ಆದೇಶವನ್ನು ದಿಲ್ಲಿ ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿತ್ತು. ಚಿದಂಬರಂ ಅವರು ದೇಶದಿಂದ ಪರಾರಿಯಾಗಬಹುದು ಎಂಬ ಸಿಬಿಐ ಪ್ರತಿಪಾದನೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಳ್ಳಿ ಹಾಕಿತ್ತು ಹಾಗೂ ಅವರಿಗೆ ಜಾಮೀನು ನೀಡಿತ್ತು. ಕಪ್ಪು ಹಣ ಬಿಳುಪು ಮಾಡಿದ ಆರೋಪದಲ್ಲಿ 2017 ಮೇಯಲ್ಲಿ ಜಾರಿ ನಿರ್ದೇಶನಾಲಯ ಕಾರ್ತಿ ಚಿದಂಬರಂ, ಐಎನ್‌ಎಕ್ಸ್ ಮೀಡಿಯಾ ಹಾಗೂ ಪೀಟರ್ ಮುಖರ್ಜಿ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News