ಅಂತ್ಯಯಾತ್ರೆ ವೇಳೆ ಹಿಂಸಾಚಾರ, 200 ಜನರ ವಿರುದ್ಧ ಪ್ರಕರಣ ದಾಖಲು, 33 ಜನರ ಬಂಧನ

Update: 2019-10-23 14:48 GMT

ಮುಂಬೈ,ಅ.23: ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯೋರ್ವನ ಅಂತ್ಯಯಾತ್ರೆ ಸಂದರ್ಭದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದ್ದಕ್ಕಾಗಿ ಮತ್ತು ವಾಹನಗಳಿಗೆ ಹಾನಿಯನ್ನುಂಟು ಮಾಡಿದ್ದಕ್ಕಾಗಿ ಬುಧವಾರ ಸುಮಾರು 200 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು,ಈ ಪೈಕಿ 33 ಜನರನ್ನು ಬಂಧಿಸಿದ್ದಾರೆ. ಮಂಗಳವಾರ ನಡೆದ ಹಿಂಸಾಚಾರದಲ್ಲಿ ಏಳು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಪಂಚಾರಾಮ ರಿಥಾದಿಯಾ (45) ಎನ್ನುವವರು ರವಿವಾರ ಸಂಜೆ ತಿಲಕ ನಗರ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನೆದುರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಕೆಲವು ತಿಂಗಳುಗಳಿಂದ ನಾಪತ್ತೆಯಾಗಿರುವ ತನ್ನ 17ರ ಹರೆಯದ ಪುತ್ರಿಯನ್ನು ಪತ್ತೆ ಹಚ್ಚಲಾಗದೆ ಹತಾಶಗೊಂಡು ಅವರು ಈ ಕೃತ್ಯವೆಸಗಿದ್ದರು. ಪುತ್ರಿಯನ್ನು ಪತ್ತೆ ಹಚ್ಚಲು ಪೊಲೀಸರು ತನಗೆ ನೆರವಾಗಿರಲಿಲ್ಲ ಎಂದು ಅವರು ತನ್ನ ಆತ್ಮಹತ್ಯಾ ಪತ್ರದಲ್ಲಿ ಆರೋಪಿಸಿದ್ದರು. ಪೊಲೀಸರು ತನ್ನ ಪುತ್ರಿಯ ಅಪಹರಣದಲ್ಲಿ ಭಾಗಿಯಾಗಿದ್ದಾರೆಂದು ಅವರು ಪತ್ರದಲ್ಲಿ ಹೆಸರಿಸಿದ್ದ ಐವರು ವ್ಯಕ್ತಿಗಳ ವಿರುದ್ಧ ವಡಾಲಾದ ರೈಲ್ವೆ ಪೊಲೀಸರು ಆತ್ಮಹತ್ಯೆಗೆ ಪ್ರಚೋದಿಸಿದ್ದ ಆರೋಪವನ್ನು ದಾಖಲಿಸಿಕೊಂಡಿದ್ದರು.

ಮಂಗಳವಾರ ಚೆಂಬೂರಿನಲ್ಲಿ ನಡೆದ ಪಂಚಾರಾಮ ಅಂತ್ಯಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ಪೊಲೀಸರತ್ತ ಕಲ್ಲುತೂರಾಟ ನಡೆಸಿ ಒಂದು ಪೊಲೀಸ್ ವ್ಯಾನ್ ಸೇರಿದಂತೆ ಹಲವಾರು ವಾಹನಗಳಿಗೆ ಹಾನಿಯನ್ನುಂಟು ಮಾಡಿದ್ದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಲಾಖ್ಮಿ ಗೌತಮ ಅವರು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News