ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಮುನ್ನೆಚ್ಚರಿಕೆ
ಹೊಸದಿಲ್ಲಿ, ಅ. 23: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ನಿಮ್ನ ಒತ್ತಡ ಗುರುವಾರ ವೇಳೆ ತೀವ್ರಗೊಂಡು ವಾಯು ಭಾರ ಕುಸಿತಕ್ಕೆ ಕಾರಣವಾಗಲಿದ್ದು, ಚಂಡ ಮಾರುತವಾಗಿ ಪರಿವರ್ತನೆಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಅರಬಿ ಸಮುದ್ರದ ಪೂರ್ವ ಮಧ್ಯಭಾಗದಲ್ಲಿ ಕಾಣಿಸಿಕೊಂಡ ವಾಯುಭಾರ ಕುಸಿತದಿಂದ ಹಿಂಗಾರು ಪ್ರಬಲವಾಗಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದು 24 ಗಂಟೆಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಯಾಗಲಿದ್ದು, ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಲಿದೆ. ಬಂಗಾಳ ಕೊಲ್ಲಿಯಲ್ಲೂ ವಾಯು ಭಾರ ಕುಸಿತವಾಗಿರುವುದು ಹಿಂಗಾರು ಮಳೆಗೆ ಕಾರಣವಾಗಿದೆ. ಒಂದು ವೇಳೆ ಚಂಡ ಮಾರುತ ತೀವ್ರಗೊಂಡರೆ 23ರಿಂದ 5ರ ವರೆಗೆ ಒಮಾನ್ ತೀರದತ್ತ ಸಾಗಲಿದೆ ಎಂದು ಊಹಿಸಲಾಗಿದೆ.
ಮುಂದಿನ ಎರಡು ದಿನಗಳ ಕಾಲ ಕೊಂಕಣ, ಗೋವಾ, ಕರಾವಳಿ ಕರ್ನಾಟಕ, ಒಡಿಶ್ಶಾ ಹಾಗೂ ಆಂಧ್ರಪ್ರದೇಶದ ಕರಾವಳಿಯಲ್ಲಿ ತೀವ್ರತೆಯಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಶುಕ್ರವಾರ ಕೊಂಕಣ, ಗೋವಾ ಹಾಗೂ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ.