ಬಂಧನ ಕೇಂದ್ರದಲ್ಲಿ ಮೃತಪಟ್ಟ ಪಾಲ್ ಮೃತದೇಹವನ್ನು ಸಿಎಂ ಹಸ್ತಕ್ಷೇಪದ ಬಳಿಕ ಸ್ವೀಕರಿಸಿದ ಕುಟುಂಬ

Update: 2019-10-23 16:25 GMT

ಗುವಾಹಟಿ,ಅ.23: ಅಕ್ರಮ ವಲಸಿಗನೆಂಬ ಹಣೆಪಟ್ಟಿಯೊಂದಿಗೆ ಸುಮಾರು ಎರಡು ವರ್ಷಗಳ ಕಾಲ ಬಂಧನ ಕೇಂದ್ರದಲ್ಲಿದ್ದು,ಅ.13ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ದುಲಾಲ್ ಚಂದ್ರ ಪಾಲ್ (65) ಅವರ ಶವವನ್ನು ಸ್ವೀಕರಿಸಲು ನಿರಾಕರಿಸಿದ್ದ ಅವರ ಕುಟುಂಬವು ಕೊನೆಗೂ ಅಸ್ಸಾಂ ಮುಖ್ಯಮಂತ್ರಿ ಸರಬಾನಂದ ಸೋನೊವಾಲ್ ಅವರ ಹಸ್ತಕ್ಷೇಪದ ಬಳಿಕ ತನ್ನ ಪಟ್ಟನ್ನು ಸಡಿಲಿಸಿದೆ. ಪಾಲ್ ಭಾರತೀಯ ಪ್ರಜೆಯೆಂದು ಘೋಷಿಸುವಂತೆ ಕಳೆದ ವಾರ ಅಧಿಕಾರಿಗಳನ್ನು ಆಗ್ರಹಿಸಿದ್ದ ಅವರ ಕುಟುಂಬವು,ಇಲ್ಲದಿದ್ದರೆ ಅವರ ಶವವನ್ನು ಬಾಂಗ್ಲಾದೇಶಕ್ಕೆ ಮರಳಿಸುವಂತೆ ತಿಳಿಸಿತ್ತು.

  ಪಾಲ್ ತನ್ನ 1965ರ ಭೂದಾಖಲೆಗಳನ್ನು ಸಲ್ಲಿಸಿದ್ದರೂ ಅದನ್ನು ತಿರಸ್ಕರಿಸಿದ್ದ ವಿದೇಶಿಯರ ನ್ಯಾಯಾಧಿಕರಣವು 2017,ಅಕ್ಟೋಬರ್‌ನಲ್ಲಿ ಅವರನ್ನು ಬಾಂಗ್ಲಾದೇಶಿ ಎಂದು ಘೋಷಿಸಿ ಸೋನಿತಪುರ ಜಿಲ್ಲೆಯ ಬಂಧನ ಕೇಂದ್ರಕ್ಕೆ ಕಳುಹಿಸಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕಳೆದ ಸೆ.28ರಂದು ಗುವಾಹಟಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅ.13ರಂದು ಅವರು ಕೊನೆಯುಸಿರೆಳೆದಿದ್ದರು. ಪಾಲ್ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದರು ಎಂದು ಅವರ ಕುಟುಂಬವು ಹೇಳಿತ್ತು.

ಶನಿವಾರ ಅಖಿಲ ಅಸ್ಸಾಂ ಬಂಗಾಳಿ ಯುವ ವಿದ್ಯಾರ್ಥಿಗಳ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಪಾಲ್ ಕುಟುಂಬವನ್ನು ಭೇಟಿಯಾಗಿದ್ದ ಸೋನೊವಾಲ್ ಶವವನ್ನು ಸ್ವೀಕರಿಸುವಂತೆ ಆಗ್ರಹಿಸಿದ್ದರು.

 ‘ ನಮ್ಮ ತಂದೆಯ ಶವವನ್ನು ಮನೆಗೆ ಒಯ್ಯುವಂತೆ ಸೋನೊವಾಲ್ ಕೋರಿಕೊಂಡಿದ್ದರು. ಅಂತ್ಯಕ್ರಿಯೆಗೆ ನೆರವಾಗುವುದಾಗಿ ಮತ್ತು ಕಾನೂನು ನೆರವು ಒದಗಿಸುವುದಾಗಿ ಅವರು ತಿಳಿಸಿದ್ದರು. ಶ್ರಾದ್ಧದಲ್ಲಿ ಉಪಸ್ಥಿತರಿರುವುದಾಗಿ ಲಿಖಿತ ಒಪ್ಪಿಗೆಯನ್ನೂ ನೀಡಿದ್ದಾರೆ ಎಂದು ಪಾಲ್ ಪುತ್ರ ಅಶೋಕ ಪಾಲ್ ತಿಳಿಸಿದರು.

ತಮ್ಮ ಕುಟುಂಬವು ಅನುಭವಿಸಿದ ಸಂಕಷ್ಟ ಯಾವುದೇ ಕುಟುಂಬಕ್ಕೂ ಬರಬಾರದು ಮತ್ತು ಬಂಧನ ಕೇಂದ್ರದಲ್ಲಿ ಸಾವುಗಳು ತನ್ನ ತಂದೆಯೊಂದಿಗೇ ಕೊನೆಯಾಗಬೇಕು ಎಂದೂ ಅವರು ಹೇಳಿದರು.

ಬಂಧನ ಕೇಂದ್ರಗಳಲ್ಲಿರುವವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಮೂರು ವರ್ಷಗಳಿಂದ ಬಂಧನದಲ್ಲಿರುವವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸುವ ಪ್ರಕ್ರಿಯೆಯನ್ನು ರಾಜ್ಯ ಸರಕಾರವು ತ್ವರಿತಗೊಳಿಸಲಿದೆ ಎಂದು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ದೀಪಕ ಡೇ ತಿಳಿಸಿದರು.

ಮಂಗಳವಾರ ಮಧ್ಯಾಹ್ನ ಗುವಾಹಟಿ ಆಸ್ಪತ್ರೆಯಿಂದ ಪಾಲ್ ಶವವನ್ನು ಸ್ವಗ್ರಾಮ ಸೋನಿತಪುರ ಜಿಲ್ಲೆಯ ಅಲಿಸಿಂಗಾ ಗ್ರಾಮಕ್ಕೆ ಒಯ್ದ ಕುಟುಂಬವು ಸಂಜೆ ಅಂತ್ಯಕ್ರಿಯೆಯನ್ನು ನೆರವೇರಿಸಿದೆ.

ಆ.31ರಂದು ಪ್ರಕಟಗೊಂಡಿದ್ದ ಅಂತಿಮ ಎನ್‌ಆರ್‌ಸಿ ಪಟ್ಟಿಯಲ್ಲಿ ಪಾಲ್ ಕುಟುಂಬದ ಐವರು ಸದ್ಯರ ಹೆಸರುಗಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News