ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಚುನಾವಣೆ: ನಾಳೆ ಮತಎಣಿಕೆ

Update: 2019-10-23 16:53 GMT

   ಹೊಸದಿಲ್ಲಿ,ಅ.23: ಇಡೀ ದೇಶದ ಗಮನ ಸೆಳೆದಿರುವ ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಯ ಮತಎಣಿಕೆ ಗುರುವಾರ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಎಲ್ಲಾ ಸ್ಥಾನಗಳ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆಯಿದೆ.ಇದರ ಜೊತೆಗೆ ದೇಶಾದ್ಯಂತ 17 ರಾಜ್ಯಗಳ ಒಟ್ಟು 51 ಕ್ಷೇತ್ರಗಳಿಗೆ ಹಾಗೂ ಲೋಕಸಭಾ ಕ್ಷೇತ್ರಗಳಿಗೆ ನಡೆದಿರುವ ಉಪಚುನಾವಣೆಗಳ ಮತಏಣಿಕೆ ಕೂಡಾ ನಾಳೆ ನಡೆಯಲಿದೆ.

   ಮಹಾರಾಷ್ಟ್ರದಲ್ಲಿ ಚುನಾವಣೆ ನಡೆದ 288 ವಿಧಾನಸಭಾ ಕ್ಷೇತ್ರಗಳ ಮತಏಣಿಕೆ ನಾಳೆ ನಡೆಯಲಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ-ಶಿವಸೇನಾ ಮೈತ್ರಿಕೂಟವು ಸತತ ಎರಡನೆ ಬಾರಿ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ. ಪ್ರತಿಪಕ್ಷ ಕಾಂಗ್ರೆಸ್, ಎನ್‌ಸಿಪಿಗಳು ಕೂಡಾ ಪ್ರಬಲವಾದ ಸ್ಪರ್ಧೆಯನ್ನು ನೀಡುವ ಆತ್ಮವಿಶ್ವಾಸವನ್ನು ಹೊಂದಿವೆ.

 ಹರ್ಯಾಣದ ಎಲ್ಲಾ 90 ವಿಧಾನಸಭೆಗಳಿಗೂ ನಾಳೆ ಮತಏಣಿಕೆ ನಡೆಯಲಿದೆ. ಬಹುತೇಕ ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆಯೇರ್ಪಟ್ಟಿದೆ. ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್, ಕಾಂಗ್ರೆಸ್ ನಾಯಕ ಭೂಪೀಂದರ್ ಹೂಡಾ, ಜೆಜೆಪಿ ನಾಯಕ ದುಶ್ಯಂತ್ ಚೌಟಾಲಾ ಕಣದಲ್ಲಿರುವ ಪ್ರಮುಖರು. ಒಲಿಂಪಿಕ್ ಕುಸ್ತಿಪಟು ಯೋಗೇಶ್ವರ್ ದತ್ತ್, ಕಾಮನವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಬಬಿತಾ ಪೋಗಟ್, ಭಾರತದ ಮಾಜಿ ಹಾಕಿ ಕ್ಯಾಪ್ಟನ್ ಸಂದೀಪ್‌ಸಿಂಗ್ ಕೂಡಾ ಸ್ಪರ್ಧೆಯಲ್ಲಿದ್ದು, ಅವರ ರಾಜಕೀಯ ಭವಿಷ್ಯ ನಾಳೆ ನಿರ್ಧಾರವಾಗಲಿದೆ.

  ಎರಡೂ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಮತಏಣಿಕೆ ಬೆಳಗ್ಗೆ 8:00 ಗಂಟೆಗೆ ಆರಂಭಗೊಳ್ಳಲಿದ್ದು, 12:00 ಗಂಟೆಯ ವೇಳೆಗೆ ಬಹುತೇಕ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗುವ ನಿರೀಕ್ಷೆಯಿದೆ. ಎಲ್ಲಾ ಮತಏಣಿಕಾ ಕೇಂದ್ರಗಳಲ್ಲಿ ಮತಏಣಿಕೆಯ ಮೇಲೆ ಕಣ್ಗಾವಲಿಡಲು ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

 ಮಹಾರಾಷ್ಟ್ರದ ಸತಾರಾ ಹಾಗೂ ಬಿಹಾರದ ಸಮಷ್ಟಿಪುರ ಲೋಕಸಭಾ ಕ್ಷೇತ್ರಗಳ  ಉಪಚುನಾವಣೆಯ ಮತಏಣಿಕೆ ನಾಳೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News